ಹಾನಗಲ್ಲ ತಾಲೂಕಿನಲ್ಲಿ ಬತ್ತಿರುವ ಕೊಳವೆಬಾವಿಗಳು, ನೀರಿಗಾಗಿ ಪರಿತಪಿಸುತ್ತಿರುವ ಜನತೆ

KannadaprabhaNewsNetwork | Published : Apr 5, 2024 1:02 AM

ಸಾರಾಂಶ

ಅರೆ ಮಲೆನಾಡಾದ ಹಾನಗಲ್ಲ ತಾಲೂಕಿನಲ್ಲಿ ಉರಿ ಬಸಿಲಿಗೆ ಬಸವಳಿದ ಜನ, ೪೦ ಡಿಗ್ರಿ ಆಸುಪಾಸಿನ ತಾಪಮಾನದಲ್ಲಿ ನೀರಿನ ಕೊರತೆಯ ನಡುವೆ ಮಳೆರಾಯನ ನಿರೀಕ್ಷೆಯಲ್ಲಿ ದಿನ ನೂಕುತ್ತಿದ್ದು, ಹಳ್ಳಿಗಳಿಗೆ ನೀರೊದಗಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.

ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ, ಹಾನಗಲ್ಲ ಅರೆ ಮಲೆನಾಡಾದ ಹಾನಗಲ್ಲ ತಾಲೂಕಿನಲ್ಲಿ ಉರಿ ಬಸಿಲಿಗೆ ಬಸವಳಿದ ಜನ, ೪೦ ಡಿಗ್ರಿ ಆಸುಪಾಸಿನ ತಾಪಮಾನದಲ್ಲಿ ನೀರಿನ ಕೊರತೆಯ ನಡುವೆ ಮಳೆರಾಯನ ನಿರೀಕ್ಷೆಯಲ್ಲಿ ದಿನ ನೂಕುತ್ತಿದ್ದು, ಹಳ್ಳಿಗಳಿಗೆ ನೀರೊದಗಿಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ.೧೬೬ ಗ್ರಾಮಗಳಲ್ಲಿ ಕುಡಿಯುವ ನೀರೊದಗಿಸಲು ೪೨ ಪಂಚಾಯತಿಗಳು ಹರ ಸಾಹಸ ಮಾಡುತ್ತಿವೆ. ತಾಲೂಕಿನಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ೮೧೪ ಕೊಳವೆ ಬಾವಿಗಳಲ್ಲಿ ೧೧೯ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಉಳಿದವುಗಳು ಇನ್ನೇನು ಬತ್ತುವ ಸ್ಥಿತಿಯಲ್ಲಿದ್ದು, ಅಷ್ಟಿಷ್ಟು ನೀರು ಹನಿಸುತ್ತಿವೆ. ಹೀಗೆ ಮಳೆ ಹೋದರೆ ಒಂದು ತಿಂಗಳಿನಲ್ಲಿ ಬಹುತೇಕ ಕೊಳವೆ ಬಾವಿಗಳು ನೀರಿಲ್ಲದೆ ಹಳ್ಳಿಗಳು ನೀರಿನ ಕೊರತೆಯಿಂದ ಪರಿತಪಿಸುವ ಸ್ಥಿತಿ ಇದೆ.ಲೊಕೋಪಯೋಗಿ ಇಲಾಖೆ ಈಗಾಗಲೇ ೫೩ ಹಳ್ಳಿಗಳು ಕುಡಿಯುವ ನೀರಿನ ವಿಷಯದಲ್ಲಿ ಸಮಸ್ಯಾತ್ಮಕ ಎಂದು ಗುರುತಿಸಿದೆ. ಈಗಾಗಲೇ ೧೮ ಗ್ರಾಮಗಳಿಗೆ ೨೨ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಮೇಲೆ ತೆಗೆದುಕೊಂಡು ಕಂಚಿನೆಗಳೂರು, ಇನಾಂದ್ಯಾಮನಕೊಪ್ಪ ಇನಾಂ ನೀರಲಗಿ, ಹೊಂಕಣ, ಚೀರನಹಳ್ಳಿ, ಸೋಮಸಾಗರ, ಆಲಕಟ್ಟಿ ಸೇರಿದಂತೆ ಇತರ ಗ್ರಾಮಗಳಿಗೆ ಕುಡಿಯುವ ನೀರೊದಗಿಸುವ ಹರ ಸಾಹಸ ನಡೆದಿದೆ. ಖಾಸಗಿ ಕೊಳವೆ ಬಾವಿಗಳನ್ನುಳ್ಳ ರೈತರು ತಮ್ಮ ಭೂಮಿಯ ಫಸಲಿಗೆ ನೀರಿಲ್ಲ ಎಂದು ಪರದಾಡುತ್ತಿದ್ದಾರೆ. ಅದರಲ್ಲೂ ಅಡಕೆ ಬೆಳೆ ಮಾಡಿದವರು ಈಗಾಗಲೇ ನೀರಿಲ್ಲದೆ ಅತ್ಯಲ್ಪ ನೀರಿನಲ್ಲಿಯೇ ಅತ್ಯಂತ ಕಾಳಜಿವಹಿಸಿ ಸ್ವಲ್ಪ ಸ್ವಲ್ಪ ನೀರು ಹನಿಸಿ ಬೆಳೆ ಉಳಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಕೆಲವು ಗ್ರಾಮಗಳಿಗೆ ಒಂದು ಕಿಮೀ ದೂರದ ಪ್ರದೇಶದ ಖಾಸಗಿ ಕೊಳವೆ ಬಾವಿಯಿಂದ ಹಳ್ಳಿಗಳಿಗೆ ನೀರು ತಂದು ನೀರು ಪೂರೈಸುತ್ತಿರುವುದು ಗ್ರಾಮ ಪಂಚಾಯತಿಗಳಿಗೆ ಭಾರೀ ಸವಾಲಾಗಿದೆ. ಈಗಾಗಲೇ ೧೫೨ ಖಾಸಗಿ ಕೊಳವೆಬಾವಿಗಳನ್ನು ಗ್ರಾಮಗಳಿಗೆ ನೀರು ಪೂರೈಸಲು ಗುರುತಿಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಇವನ್ನು ಬಳಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.ಚಿಕ್ಕಾಂಸಿ ಹೊಸೂರು, ಉಪ್ಪಣಸಿ, ಕೂಡಲ, ಕೂಸನೂರು ಬಹುಗ್ರಾಮ ಕುಡಿಯುವ ನೀರಿನ ಘಟಕಗಳು ವರದಾ ನದಿಯ ನೀರನ್ನೇ ಅವಲಂಬಿಸಿದ್ದವು. ಆದರೆ ಎರಡು ತಿಂಗಳ ಹಿಂದೆಯೇ ವರದಾ ನದಿ ನೀರು ಹರಿಯುವುದು ಬಂದಾಗಿ ನೀರಿನ ಬರ ಅನುಭವಿಸುತ್ತಿದೆ. ಕೆಲವು ಬಹುಗ್ರಾಮ ಕುಡಿಯುವ ನೀರಿನ ಘಟಕಗಳು ಜನವರಿ ತಿಂಗಳ ಮೊದಲ ವಾರದಿಂದಲೇ ಕಾರ್ಯ ನಿಲ್ಲಿಸಿವೆ.ಮುಂಜಾಗೃತಾ ಕ್ರಮವಾಗಿ ಹಾನಗಲ್ಲ ತಾಲೂಕಿನ ೪೨ ಪಂಚಾಯತಿಗಳಲ್ಲಿಯೂ ಅನಿವಾರ್ಯ ಸಂದರ್ಭಕ್ಕೆ ಬೇರೆಡೆಯಿಂದ ನೀರು ತಂದು ಟ್ಯಾಂಕರ್ ಮೂಲಕ ನೀರು ಕೊಡಲು ಟ್ಯಾಂಕರ್‌ಗಳಿಗೆ ಟೆಂಡರ್ ಕರೆಯಲಾಗಿದೆ. ಮಳೆ ಬಂದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ. ಇಲ್ಲದಿದ್ದರೆ ಎಲ್ಲವೂ ಸಮಸ್ಯೆ ಎದುರಿಸುವಂತಾಗಿದೆ.ತಾಲೂಕಿನಲ್ಲಿ ಏಳು ನೂರಕ್ಕೂ ಅಧಿಕ ಕೆರೆಗಳಿವೆ. ಎಲ್ಲವೂ ಖಾಲಿ ಖಾಲಿ. ಧರ್ಮಾ ವರದಾ ನದಿಗಳಲ್ಲೂ ನೀರಿಲ್ಲ. ಬಿಸಿ ಗಾಳಿಗೆ ಬಸವಳಿದ ಜನ ಹಗಲು ಹೊತ್ತಿನಲ್ಲಿ ಮನೆಯಿಂದ ಹೊರಬರುವುದೇ ಅತ್ಯಂತ ಕಠಿಣವಾಗಿದೆ. ಸಂಜೆಯ ಹೊತ್ತಿನಲ್ಲಿಯೇ ಚುನಾವಣಾ ಪ್ರಚಾರ ಸಭೆಗಳು ನಡೆಯುತ್ತಿವೆ. ಉರಿ ಬಿಸಿಲು, ಝಳಕ್ಕೆ ಪಕ್ಷಗಳ ಕಾರ್ಯಕರ್ತರು ಕೂಡ ಸೇರುವುದು ತೀರ ಕಷ್ಟವಾಗಿದೆ. ಬಾರೋ ಬಾರೋ ಮಳೆ ರಾಯ, ಬಾಯಾರಿಕೆಯ ನೀಗಿಸೊ ಎಂಬ ಬೇಡಿಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರದ್ದಾಗಿದೆ.ಏಪ್ರಿಲ್‌ ತಿಂಗಳಾದರೂ ಒಂದು ಹನಿ ಮಳೆಯಾಗಿಲ್ಲ. ಮಾರ್ಚ್‌ ತಿಂಗಳಿನಲ್ಲಿಯೇ ಮಳೆ ಬರಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ. ಹೀಗೇ ಮಳೆ ತಡವಾದರೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಲಿದೆ ಎಂಬ ಕಾರಣಕ್ಕೆ ಖಾಸಗಿ ಕೊಳವೆ ಭಾವಿಗಳನ್ನು ಅವಲಂಬಿಸಲಬೇಕಾಗಿದೆ. ಆದರೂ ಮಳೆ ಬರುವುದೇ ಪರಿಹಾರ. ಇಲ್ಲವಾದರೆ ಹಳ್ಳಿಗಳಿಗೆ ನೀರೊದಗಿಸುವುದು ದೊಡ್ಡ ಸವಾಲು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ನೆಗಳೂರ ಹೇಳಿದರು.ತಾಲೂಕಿನ ಕುಡಿಯುವ ನೀರಿಗೆ ಸಂಬಂಧಿಸಿದ ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಮೇ ತಿಂಗಳಿನವರೆ ನೀರಿನ ಕೊರತೆಯಾಗದಂತೆ ಸಕಾಲಕ್ಕೆ ಎಲ್ಲ ಯೋಜನೆ ಮಾಡಲು ತಿಳಿಸಿದೆ. ಪ್ರತಿ ೧೫ ದಿನಕ್ಕೊಮ್ಮೆ ಸಭೆ ಕರೆದು ಸಮಸ್ಯೆ ಇರುವ ಊರುಗಳಿಗೆ ಖಾಸಗಿ ಮೂಲದಿಂದಲೂ ನೀರು ಒದಗಿಸಲು ವ್ಯವಸ್ಥೆ ಮಾಡಲಾಗಿದೆ. ಈ ವರೆಗೆ ಎಲ್ಲಿಯೂ ಟ್ಯಾಂಕರ್‌ನಿಂದ ನೀರು ಒದಗಿಸುವ ಸಂದರ್ಭ ಬಂದಿಲ್ಲ. ಅನಿವಾರ್ಯವಾದರೆ ಅದಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕಂತೂ ಎಲ್ಲವೂ ಸರಿ ಇದೆ ಎಂದು ತಾಲೂಕು ತಹಸೀಲ್ದಾರ್‌ ಎಸ್‌. ರೇಣುಕಮ್ಮ ಹೇಳಿದರು.

Share this article