ನಿಷೇಧಿಸಲ್ಪಟ್ಟ ಪದಗಳ ಬಳಕೆಗೆ ಡಿಎಸ್‌ಎಸ್‌ ವಿರೋಧ

KannadaprabhaNewsNetwork |  
Published : Mar 05, 2025, 12:32 AM IST
೪ಕೆಎಂಎನ್‌ಡಿ-೧೦ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡ ವೆಂಕಟಗಿರಿಯಯ್ಯ ಮಾತನಾಡಿದರು. | Kannada Prabha

ಸಾರಾಂಶ

ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಸಚಿವಾಲಯದ ಕೆಲವು ಅಧಿಸೂಚನೆಗಳು, ಕಂದಾಯ ಇಲಾಖೆಗಳ ಆರ್‌ಟಿಸಿ ವರದಿ, ಖಾತಾ ಪಟ್ಟಿ ಸೇರಿದಂತೆ ಮತ್ತಿತರ ದಾಖಲೆಗಳಲ್ಲಿ ನಿಷೇಧಿತ ಪದ ಬಳಕೆ ಮಾಡುವ ಮೂಲಕ ಅಪಮಾನ ಮಾಡಿರುವುದಲ್ಲದೇ ಸರ್ಕಾರದ ಆದೇಶ ಉಲ್ಲಂಘಿಸಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಖಂಡಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರದಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಲ್ಲಿ ಕೆಲವು ನಿಷೇಧಿಸಲ್ಪಟ್ಟ ಪದಗಳನ್ನು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆ ಹಾಗೂ ಕಂದಾಯ ಇಲಾಖೆಯ ಭೂ ದಾಖಲೆಗಳಲ್ಲಿ ಬಳಕೆ ಮಾಡುತ್ತಿದೆ. ಈ ವಿಚಾರದಲ್ಲಿ ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಒತ್ತಾಯಿಸಿದರು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅಪಮಾನ ಉಂಟುಮಾಡುವ ಪದಗಳನ್ನು ಸರ್ಕಾರ ೨೦೧೦ರಲ್ಲಿ ನಿಷೇಧಿಸಿದೆ. ಪರ್ಯಾಯ ಪದಗಳನ್ನು ಬಳಸುವಂತೆ ಸೂಚಿಸಿದೆ. ಆದರೂ ನಿಷೇಧಿತ ಪದಗಳನ್ನು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಳಕೆ ಮಾಡುವ ಮೂಲಕ ಸರ್ಕಾರದ ಆದೇಶಕ್ಕೆ ಅಗೌರವ ತೋರುತ್ತಿದ್ದಾರೆ. ಇದು ಪುನರಾವರ್ತನೆಯಾದರೆ ಹೋರಾಟ ಅನಿವಾರ್ಯವಾಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಸಚಿವಾಲಯದ ಕೆಲವು ಅಧಿಸೂಚನೆಗಳು, ಕಂದಾಯ ಇಲಾಖೆಗಳ ಆರ್‌ಟಿಸಿ ವರದಿ, ಖಾತಾ ಪಟ್ಟಿ ಸೇರಿದಂತೆ ಮತ್ತಿತರ ದಾಖಲೆಗಳಲ್ಲಿ ನಿಷೇಧಿತ ಪದ ಬಳಕೆ ಮಾಡುವ ಮೂಲಕ ಅಪಮಾನ ಮಾಡಿರುವುದಲ್ಲದೇ ಸರ್ಕಾರದ ಆದೇಶ ಉಲ್ಲಂಘಿಸಿ ಕರ್ತವ್ಯಲೋಪ ಎಸಗಿದ್ದಾರೆ ಎಂದು ಖಂಡಿಸಿದರು.

ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಇಲಾಖಾ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿನಾ ಕಾರಣ ಅನ್ಯ ವಿಷಯಗಳ ಬಗ್ಗೆ ಮೂಗು ತೂರಿಸುವುದು ಬಿಟ್ಟು, ತಮ್ಮ ಇಲಾಖೆಗಳಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿಪಡಿಸುವಂತೆ ಆಗ್ರಹಿಸಿದರು.

ಸರ್ಕಾರದಿಂದಲೇ ನಿಷೇಧಿಸಲ್ಪಟ್ಟ ಪದಗಳನ್ನು ಸರ್ಕಾರದ ಯಾವುದೇ ಇಲಾಖೆಗಳಲ್ಲಿ ಬಳಕೆಯಾಗದಂತೆ ಕ್ರಮ ವಹಿಸಿ, ಪ್ರಸ್ತುತ ಸದರಿ ಪದಗಳನ್ನು ಬಳಕೆ ಮಾಡಿ ಅಪಮಾನವೆಸಗಿರುವ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಸಚಿವಾಲಯದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಮೈಸೂರು ವಿಭಾಗೀಯ ಸಂಚಾಲಕ ಅನಿಲ್‌ಕುಮಾರ, ಜಿಲ್ಲಾಧ್ಯಕ್ಷ ಬಿ.ಆನಂದ್, ಮಹಿಳಾ ಜಿಲ್ಲಾಧ್ಯಕ್ಷೆ ಸುಶ್ಮಿತಾ ಆನಂದ್, ಸುರೇಶ್, ಮುತ್ತುರಾಜ್, ತಮ್ಮಣ್ಣ, ಕುಮಾರ್, ಮೀನಾಕ್ಷಿ ಇತರರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ