ಕನ್ನಡಪ್ರಭ ವಾರ್ತೆ ಬೆಂಗಳೂರು
ಡಾ। ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸದೇ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಹೈಕೋರ್ಟ್ ಗುರುವಾರ ನಿದೇಶಿಸಿದೆ.ಶಿವರಾಮ ಕಾರಂತ ಬಡಾವಣೆಯ ರಚನೆಗೆ ಸಂಬಂಧಿಸಿದಂತೆ ಸುಪ್ರಿಂ ಕೋರ್ಟ್ ಆದೇಶದ ಮೇರೆಗೆ ಸರ್ಕಾರದ ವಿರುದ್ಧ ಬಿಡಿಎ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಶಿವರಾಮ ಕಾರಂತರ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲು ಬಿಡಿಎ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಇದರ ಬೆನ್ನಲ್ಲೇ ಬಡಾವಣೆ ನಿರ್ಮಾಣದ ಕುರಿತು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ. ಆದರೆ, ಬಡಾವಣೆಯಲ್ಲಿ ಅಭಿವೃದ್ಧಿ ಚಟುವಟಿಕೆ ಮುಂದುವರಿಸಲು ಅನುಮತಿ ನೀಡಿದೆ.ಜತೆಗೆ, ಬಡಾವಣೆಯ ರಚನೆಗೆ ಸಂಬಂಧಿಸಿದಂತೆ ಹಲವು ದೂರುಗಳನ್ನು ಪರಿಹರಿಸಲು ರಚಿಸಿದ್ದ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ಅವರ ನೇತೃತ್ವದ ಸಮಿತಿಯು ತನ್ನ ಕಚೇರಿಗೆ ಬೀಗ ಹಾಕಿದೆ. ಕಚೇರಿಯಲ್ಲಿ ದಾಖಲೆಗಳು ಇವೆ. ಸುಪ್ರಿಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ದಾಖಲೆಗಳನ್ನು ಹೈಕೋರ್ಟ್‌ಗೆ ಸಲ್ಲಿಕೆ ಮಾಡಿಲ್ಲ. ದಾಖಲೆಗಳು ತಿದ್ದುಪಡಿಯಾಗಬಾರದು ಎಂಬುದಾಗಿ ಸುಪ್ರಿಂ ಕೋರ್ಟ್ ಹೇಳಿದೆ. ಹಾಗಾಗಿ, ಸಮಿತಿ ಕಚೇರಿಗೆ ಬಿಡಿಎ ಪ್ರತ್ಯೇಕ ಬೀಗಹಾಕಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಏಕೆ ಯಥಾಸ್ಥಿತಿ?:ಶಿವರಾಮ ಕಾರಂತ ಬಡಾವಣೆಗೆ ಸಂಬಂಧಿಸಿದಂತೆ ಪರಿಹಾರವಾಗದೆ ಉಳಿದಿರುವ ಕುಂದುಕೊರತೆಯನ್ನು ನ್ಯಾಯಾಲಯದ ಮುಂದೆ ಬಿಡಿಎ ಮಂಡಿಸಬೇಕಿದೆ. ಇದೇ ವಿಚಾರವಾಗಿ ಹಲವು ಕಕ್ಷಿದಾರರು ಸಲ್ಲಿಸಿರುವ ಅನೇಕ ಅರ್ಜಿಗಳನ್ನು ಪರಿಗಣಿಸಬೇಕಾಗಿದೆ. ಆದ್ದರಿಂದ ಬಡಾವಣೆಯಲ್ಲಿ ಅಭಿವೃದ್ಧಿ ಚಟುವಟಿಕೆ ಹೊರತುಪಡಿಸಿ ಇನ್ಯಾವುದೇ ಪ್ರಕ್ರಿಯೆ ನಡೆಸಲು ಅನುಮತಿಸಿದರೆ ನೊಂದವರ ಹಕ್ಕುಗಳು ಮೊಟಕಾಗಲಿವೆ. ಅದ್ದರಿಂದ ಬಡಾವಣೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಬಿಡಿಎ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಕೋರ್ಟ್ ಪೂರ್ವಾನುಮತಿಯಿಲ್ಲದೆ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಿ ಯಾವುದೇ ಅಧಿಸೂಚನೆಯನ್ನು ಹೊರಡಿಸಬಾರದು. ಆದರೆ, ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಬಹುದು. ಅದು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ನ್ಯಾಯಪೀಠ ನಿರ್ದೇಶಿಸಿದೆ.
ಬಿಡಿಎ ಪರ ವಕೀಲ ಶಿವಪ್ರಸಾದ್ ಶಾಂತನಗೌಡ ಅವರು, ಸುಪ್ರಿಂ ಕೋರ್ಟ್ ನಿರ್ದೇಶನದ ಹೊರತಾಗಿಯೂ ತನ್ನೆಲ್ಲಾ ದಾಖಲೆಗಳನ್ನು ಹೈಕೋರ್ಟ್‌ಗೆ ಸಮಿತಿ ಸಲ್ಲಿಸಿಲ್ಲ. ಬಿಡಿಎ ಕಾರ್ಯಾಲಯದಲ್ಲಿರುವ ತನ್ನ ಕಚೇರಿಗೆ ಸಮಿತಿಯು ಬೀಗ ಹಾಕಿ, ಕೀ ಅನ್ನು ತನ್ನ ಬಳಿಯೇ ಇಟ್ಟುಕೊಂಡಿದೆ. ದಾಖಲೆಗಳನ್ನು ಮಾರ್ಪಾಡು ಮಾಡಬಾರದು ಹಾಗೂ ತಿರುಚಬಾರದು ಎಂಬುದಾಗಿ ಸುಪ್ರಿಂ ಕೋರ್ಟ್ ಆದೇಶವಿದೆ ಎಂದು ತಿಳಿಸಿದರು.ಅದನ್ನು ಪರಿಗಣಿಸಿದ ಹೈಕೋರ್ಟ್, ಸಮಿತಿಯ ಕಚೇರಿಗೆ ಬಿಡಿಎ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಮ್ಮುಖದಲ್ಲಿ ಬೀಗ ಹಾಕಿ, ಅವರಿಗೆ ಕೀ ಹಸ್ತಾಂತರಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.ಬಾಕ್ಸ್...
ಪ್ರಕರಣದ ಹಿನ್ನೆಲೆನಗರದಲ್ಲಿ 2700ಕ್ಕೂ ಅಧಿಕ ಎಕರೆಯಲ್ಲಿ ಶಿವರಾಮ ಕಾರಂತ ಬಡಾವಣೆ ಬಿಡಿಎ ನಿರ್ಮಿಸುತ್ತಿದೆ. ಅದರಲ್ಲಿ ಭೂ ಸ್ವಾಧೀನ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿದ್ದವು. ಆ ಕುರಿತು ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗಳಲ್ಲಿ ಕಾನೂನು ಹೋರಾಟ ನಡೆದು ಕೊನೆಗೆ ನ್ಯಾಯಾಲಯಗಳು ಭೂ ಸ್ವಾಧೀನವನ್ನು ಎತ್ತಿಹಿಡಿದಿತ್ತು. ಆದರೆ, ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಸೇರಿದಂತೆ ಹಲವು ಆರೋಪಗಳು ಕೇಳಿಬಂದಿದ್ದವು.
ಆ ಹಿನ್ನೆಲೆಯಲ್ಲಿ ಹಲವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂಕೋರ್ಟ್ ಎಲ್ಲ ಅಂಶಗಳನ್ನು ಪರಿಶೀಲಿಸಿದ ಬಳಿಕ ನಿವೃತ್ತ ನ್ಯಾಯಮೂರ್ತಿ ಎ.ವಿ.ಚಂದ್ರಶೇಖರ್ ನೇತೃತ್ವದ ತ್ರಿ ಸದಸ್ಯ ಸಮಿತಿಯನ್ನು 2020ರ ಡಿ.3ರಂದು ರಚನೆ ಮಾಡಿತ್ತು. ಆ ಸಮಿತಿ ನ್ಯಾಯಾಲಯದ ನಿರ್ದೇಶನದಂತೆ ಎಲ್ಲ ಸಮಸ್ಯೆಗಳನ್ನು ಪರಿಹರಿಸಿತ್ತು. ಸಮಿತಿಯ ಅವಧಿ 2023ರ ಡಿ.31ಕ್ಕೆ ಮುಕ್ತಾಯವಾಗಿತ್ತು. ಪ್ರಕರಣವನ್ನು 2023ರ ಡಿ.12ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಎಲ್ಲ ಪ್ರಕ್ರಿಯೆಯನ್ನು ಹೈಕೋರ್ಟ್‌ಗೆ ಹಸ್ತಾಂತರಿಸಿತ್ತು. ಹೈಕೋರ್ಟ್ ವಿಚಾರಣೆ ನಡೆಸಿ ತೀರ್ಮಾನ ಕೈಗೊಳ್ಳಬಹುದು ಎಂದು 2023ರ ಡಿ.12ರಂದು ಆದೇಶಿಸಿತ್ತು.