ಬೆಲೆ ಕುಸಿತದಿಂದ ಕೊಬ್ಬರಿ ಬೆಳೆಗಾರರು ಸಂಕಷ್ಟದಲ್ಲಿ ನೆರವಿಗೆ ಧಾವಿಸಿ

KannadaprabhaNewsNetwork | Published : Dec 20, 2023 1:15 AM

ಸಾರಾಂಶ

ರಾಜ್ಯಾದ್ಯಂತ ಕೊಬ್ಬರಿ ಬೆಳೆಗಾರರು ಬೆಲೆ ಕುಸಿತದಿಂದ ಸಂಕಷ್ಟ ಎದುರಿಸುತ್ತಿದ್ದು, ಕೇಂದ್ರ ಸರ್ಕಾರದ ನೆರವಿಗೆ ಧಾವಿಸಬೇಕು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ಶಾಸಕರಿಂದ ಕೇಂದ್ರ ಕೃಷಿ, ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ ಸಲ್ಲಿಕೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ರಾಜ್ಯಾದ್ಯಂತ ಕೊಬ್ಬರಿ ಬೆಳೆಗಾರರು ಬೆಲೆ ಕುಸಿತದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಕೇಂದ್ರ ಸರ್ಕಾರ ರೈತರ ನೆರವಿಗೆ ಧಾವಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಜೆಡಿಎಸ್ ಶಾಸಕರು ಕೇಂದ್ರ ಕೃಷಿ, ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿತು.

ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ಶಾಸಕರಾದ ಎಚ್.ಡಿ.ರೇವಣ್ಣ, ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಹಾಗೂ ಹಾಸನ ಶಾಸಕ ಸ್ವರೂಪ್ ಪ್ರಕಾಶ್, ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ನಿಯೋಗದೊಂದಿಗೆ ದೆಹಲಿಗೆ ತೆರಳಿ ಮಾಜಿ ಪ್ರಧಾನಿ ದೇವೇಗೌಡರ ಮೂಲಕ ಕೃಷಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಈ ಕುರಿತು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು, ಕೆ.ಆರ್.ಪೇಟೆ ತಾಲೂಕು ಸೇರಿದಂತೆ ಮಂಡ್ಯ ಮತ್ತು ಹಾಸನ ಜಿಲ್ಲೆಗಳ ರೈತರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಮಂಡ್ಯ ಜಿಲ್ಲೆ ಮತ್ತು ಹಾಸನ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಕೊಬ್ಬರಿ ಬೆಲೆ ಕುಸಿತದಿಂದ ತೆಂಗು ಬೆಳೆಗಾರ ರೈತರು ಸಂಕಷ್ಠಕ್ಕೆ ಸಿಲುಕಿದ್ದಾರೆ ಎಂದರು.

ನಮ್ಮ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದು ಕೇಂದ್ರದಿಂದ ಅಗತ್ಯ ನೆರವು ಪಡೆಯುವ ಉದ್ದೇಶದಿಂದ ಜೆಡಿಎಸ್ ಶಾಸಕರ ನಿಯೋಗದೊಂದಿಗೆ ನಾನು ದೆಹಲಿಗೆ ಆಗಮಿಸಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ದೆಹಲಿ ನಿವಾಸದಲ್ಲಿ ಗೌಡರೊಂದಿಗೆ ಸಮಸ್ಯೆಗಳನ್ನು ಚರ್ಚಿಸಿ ಅನಂತರ ದೇವೇಗೌಡರ ನೇತೃತ್ವದಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.

ನಮ್ಮೆಲ್ಲರ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಕಳೆದ ಕೆಲ ವರ್ಷ ಕೋವಿಡ್ ನಿಂದಾಗಿ, ನಂತರ ಕೊಬ್ಬರಿ ಬೆಳೆಗೆ ಬೆಲೆ ಇಲ್ಲದಂತಾಗಿ ರೈತರು ಕಂಗಾಲಾಗಿದ್ದಾರೆ. ತೀರಾ ಸಂಕಷ್ಟ ಎದುರಿಸುತ್ತಿರುವ ರೈತ ಸಮುದಾಯವನ್ನು ಉಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆದ್ದರಿಂದ ನಾಫೆಡ್‌ನಿಂದ ಕೊಬ್ಬರಿ ಖರೀದಿಸುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಮನವಿ ಮಾಡಿದರು ಎಂದರು.

ತಾಲೂಕಿನಲ್ಲಿ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶ್ರೀರಂಗಪಟ್ಟಣ-ಅರಸೀಕೆರೆ ರಾಜ್ಯ ಹೆದ್ದಾರಿ ಕಾಮಗಾರಿ ಹಾಗೂ ಅಕ್ಕಿಹೆಬ್ಬಾಳು ಬಳಿಯ ದುಡುಕನಹಳ್ಳಿ ರೈಲ್ವೆ ಮೇಲ್ಸೇತುವೆ ಸೇರಿದಂತೆ ಹಲವು ಕಾಮಗಾರಿಗಳ ಅನುಷ್ಠಾನಕ್ಕೆ ಸಮಗ್ರ ವರದಿ ಸಿದ್ದಪಡಿಸಿ ಜಾರಿಗಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಲವು ಸಚಿವರನ್ನು ಭೇಟಿ ಮಾಡಲಿದ್ದೇನೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.

ನವದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮಾರ್ಗದರ್ಶನದಲ್ಲಿ ಬದ್ಧತೆಯಿಂದ ಕೆಲಸ ನಿರ್ವಹಿಸಲು ಶ್ರಮಿಸುತ್ತಿದ್ದೇನೆ ಎಂದರು.

Share this article