ಕನ್ನಡಪ್ರಭ ವಾರ್ತೆ ಬೀದರ್
ಕಳೆದ ವರ್ಷ ಜಿಲ್ಲೆಯ ಪೊಲೀಸ್ ಇಲಾಖೆ ಜನಸ್ನೇಹಿ ಕಾರ್ಯಗಳ ಮೂಲಕವೆ ಅಪರಾಧ ಪ್ರಕರಣಗಳು ಇಳಿಮುಖಗೊಂಡಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ತಿಳಿಸಿದರು.ಎಸ್ಪಿ ಕಚೇರಿಯ ಆವರಣದಲ್ಲಿ ಮಂಗಳವಾರ ಒಂದು ವರ್ಷದಲ್ಲಿ ಪೊಲೀಸ್ ಇಲಾಖೆಯ ಅಂಕಿ ಅಂಶಗಳ ಮಾಹಿತಿ ನೀಡಿ ಮಾತನಾಡಿದ ಅವರು, ಕೊಲೆ, ಅತ್ಯಾಚಾರ, ಗಲಭೆ, ಗಾಯದ ಪ್ರಕರಣ, ಗಲಾಟೆ, ಮಹಿಳೆಯರಿಗೆ ಸಂಬಂಧಿಸಿದ ಅಪರಾಧಗಳು ಶೇ.14ರಷ್ಟು ಕಡಿಮೆಯಾಗಿವೆ. ವಿಶೇಷವಾಗಿ ಬ್ರೋಕನ್ ವಿಂಡೋ ಕಾರ್ಯಾಚರಣೆಯಿಂದ ಗಣನೀಯವಾಗಿ ಅಪರಾಧಗಳು ಕಮ್ಮಿಯಾಗಿವೆ. ಕಳೆದ ವರ್ಷ ಸುಮಾರು 13,863 ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ದಂಡ ವಿಧಿಸುವ ಪ್ರಕರಣಗಳು ದಾಖಲಾಗಿವೆ ಎಂದರು.
ಗಂಭೀರ ಸ್ವತ್ತಿನ ಅಪರಾಧಗಳಾದ ಸುಲಿಗೆ, ದರೋಡೆ, ಚೈನ್ ಸ್ನ್ಯಾಚಿಂಗ್ ಪ್ರಕರಣಗಳು ಗಣನೀಯವಾಗಿ ಕಡಿಮೆಯಾಗಿರುತ್ತವೆ. ಈ ವರ್ಷ ಹೆಚ್ಚಿನ ಪ್ರಕರಣಗಳು ಪತ್ತೆ ಹಚ್ಚುವಲ್ಲಿ ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ ಎಂದರು.ಜಿಲ್ಲೆಯಲ್ಲಿ ಸ್ವತ್ತಿನ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಅಪರಾಧ ತಡೆ ತಂಡ ರಚಿಸಿ, ಅವರಿಗೆ ವಿಶೇಷ ತಾಂತ್ರಿಕ ಹಾಗೂ ಸಶಸ್ತ್ರ ತರಬೇತಿ ನೀಡಲಾಗಿದೆ. ಸದರಿ ತಂಡವು ವಿಶೇಷ ಗಸ್ತುಗಳನ್ನು ನಿರ್ವಹಿಸಿ ಗಂಭೀರ ಸ್ವತ್ತಿನ ಅಪರಾಧ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಹಾಗೂ ಪತ್ತೆ ಹಚ್ಚುವಲ್ಲಿ ವಿಶೇಷ ಪಾತ್ರ ವಹಿಸಿದೆ ಎಂದರು.
1965ರಲ್ಲಿ ಕಳ್ಳತನ, 58 ವರ್ಷ ನಂತರ ಆರೋಪಿ ಬಂಧನ: 1965ನೇ ಸಾಲಿನಲ್ಲಿ ನಡೆದ ಕಳ್ಳತನದ ಪ್ರಕರಣದಲ್ಲಿನ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದು ಆತನನ್ನು 58 ವರ್ಷದ ನಂತರ ಈ ತಂಡವು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಹೀಗೆಯೇ ಸುಮಾರು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರಿಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿ ಅದರಲ್ಲಿ ಅಪರಾಧ ದಳದ ನುರಿತ ಎಎಸ್‌ಐ ಮತ್ತು ಸಿಬ್ಬಂದಿ ನೇಮಿಸಿ ಆ ತಂಡದಿಂದ 20 ಜನ ಎಲ್ಪಿಆರ್ ಪ್ರಕರಣಗಳಲ್ಲಿನ ಮತ್ತು 57 ಜನ ಪ್ರೊಸಿಡಿಂಗ್ ಡ್ರಾಪ್ ಆದ ಪ್ರಕರಣಗಳಲ್ಲಿನ ಒಟ್ಟು 77 ಜನ ತಲೆಮರಿಸಿಕೊಂಡಿದ್ದ ಆರೋಪಿತರನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.ಅಪರಾಧ ನಿಯಂತ್ರಣಕ್ಕೆ ರೌಡಿ ನಿಗ್ರಹ ದಳ ರಚನೆ: ಸಂಘಟಿತ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ 2 ವಿಶೇಷ ತಂಡಗಳಾದ ರೌಡಿ ನಿಗ್ರಹ ದಳ ಮತ್ತು ಮಾದಕ ವಸ್ತು ಪ್ರತಿಬಂಧಕ ದಳ ರಚಿಸಿ ಹೆಚ್ಚಿನ ದಾಳಿಗಳನ್ನು ಮಾಡಿ ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುತ್ತದೆ. ಅಕ್ರಮವಾಗಿ ಅಕ್ಕಿ ಮಾರಾಟ ಮಾಡುವ ಜಾಲದ ಮೇಲೆ ವಿಶೇಷ ನಿಗಾ ವಹಿಸಿ ದಾಳಿ ಮಾಡಿ 93 ಪ್ರಕರಣಗಳನ್ನು ದಾಖಲಿಸಿ ಒಟ್ಟು 267 ಜನರ ಮೇಲೆ ಕ್ರಮಕೈಗೊಂಡು ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ.
ಮಾಧಕ ವಸ್ತುಗಳ ಸಾಗಾಣಿಕೆಗಳಲ್ಲಿ ಒಟ್ಟು 32 ಪ್ರಕರಣಗಳನ್ನು ದಾಖಲಿಸಿ ಅದರಲ್ಲಿ 15.13 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ. ಸೈಬರ್ ವಂಚನೆಯ 26 ಪ್ರಕರಣಗಳನ್ನು ಭೇದಿಸಿ 51.83 ಲಕ್ಷ ರು. ಹಿಂದಿರುಗಿಸಲಾಗಿರುತ್ತದೆ ಎಂದು ವಿವರಿಸಿದರು.2024ನೇ ಸಾಲಿನಲ್ಲಿ ಸಮುದಾಯ ಸಹಭಾಗಿತ್ವದ ಪೊಲೀಸಿಂಗ್ ಮುಖಾಂತರ ಕಾನೂನು ಸುವ್ಯವಸ್ಥೆ ಮತ್ತು ಅಪರಾಧಗಳನ್ನು ತಡೆಗಟ್ಟುವ ಯೋಜನೆ ರೂಪಿಸಲಾಗುವುದು ಎಂದರು.
ಮಕ್ಕಳಿಗಾಗಿ ಸಂಚಾರ ಜಾಗೃತಿ ಉದ್ಯಾನ: ಅಲ್ಲದೇ ಸಂಚಾರ ಸುರಕ್ಷತೆ ಮತ್ತು ನಿಯಮಗಳ ಬಗ್ಗೆ ಮಕ್ಕಳಿಗೆ ತಿಳಿದುಕೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಚೌಕ್‌ನಲ್ಲಿ ಬೀದರ್ ಆಟೋಮೊಬೈಲ್ ಅಸೋಸಿಯೇಷನ್ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಸಂಚಾರ ಜಾಗೃತಿ ಉದ್ಯಾನ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭೇಟಿ ನೀಡಿ, ಸಂಚಾರ ಸುರಕ್ಷತೆ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು ಎಂದರು.ಗುಪ್ತ ದಳದದಿಂದ 135 ಅಪರಾಧಗಳ ಮಾಹಿತಿ ಸಂಗ್ರಹ: ಜಿಲ್ಲಾ ಗುಪ್ತ ದಳದಿಂದ ಕಳೆದ ವರ್ಷ 135 ಸಂಘಟಿತ ಅಪರಾಧಗಳ ಮಾಹಿತಿ ಕಲೆ ಹಾಕಿ ವೈಯಕ್ತಿಕ ದಾಳಿಗಳನ್ನು ಕೈಗೊಳ್ಳುವಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸಹಕರಿಸಿರುವುದರಿಂದ ತಂಡದ ಎಲ್ಲ ಸದಸ್ಯರಿಗೆ ಎಸ್ಪಿ ಚನ್ನಬಸವಣ್ಣ ಅವರು ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.
15 ಜನರ ಗಡಿಪಾರು ಹಾಗೂ ಇಬ್ಬರ ವಿರುದ್ಧ ಗೂಂಡಾ ಕಾಯ್ದೆ: ಜಿಲ್ಲೆಯಲ್ಲಿ ಕಳೆದ ವರ್ಷ 15 ಜನರನ್ನು ಗಡಿಪಾರು ಮಾಡಲು ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಅಲ್ಲದೇ ಇಬ್ಬರ ವಿರುದ್ಧ ಗೂಂಡಾ ಕಾಯ್ದೆಗಾಗಿ ಪ್ರಸ್ತಾವನೆ ಕಳುಹಿದ್ದೇವೆ ಎಂದು ಎಸ್ಪಿ ಚನ್ನಬಸವಣ್ಣನವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಮಹೇಶ ಮೇಘಣ್ಣನವರ್ ಮತ್ತು ಚಂದ್ರಕಾಂತ ಪೂಜಾರಿ, ಡಿವೈಎಸ್‌ಪಿ ಶಿವನಗೌಡ ಪಾಟೀಲ್, ಗಾಂಧಿಗಂಜ್ ಠಾಣೆಯ ಸಿಪಿಐ ಹನುಮರೆಡ್ಡೆಪ್ಪ, ಹುಮನಾಬಾದ್ ಸಿಪಿಐ ಗುರುಪಾಟೀಲ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.