ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನಿಕರ ಮನೆಯಲ್ಲಿ ದಸರಾ ಬೊಂಬೆಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ.ದೇವಾಲಯದ ಹಿಂಭಾಗದ ಕೋವಿಲ್ ನಂಬಿ ಲಕ್ಷ್ಮೀನರಸಿಂಹನ್- ಸಂಗೀತಾ ದಂಪತಿ ನವರಾತ್ರಿ ಅಂಗವಾಗಿ ಜೋಡಿಸಿರುವ ಮಣ್ಣಿನ ಸಾವಿರಾರು ಬೊಂಬೆಗಳು ಭಾರತೀಯ ಸಂಸ್ಕೃತಿ, ಆಚಾರ- ವಿಚಾರ, ಧಾರ್ಮಿಕ ಪರಂಪರೆ ಅನಾವರಣಗೊಳಿಸಿವೆ. ಹಿಂದೂ ಸಂಸ್ಕೃತಿಯಲ್ಲಿ ನವರಾತ್ರಿ ವೇಳೆ ಬೊಂಬೆಗಳನ್ನು ಜೋಡಿಸಿ, ಪೂಜಿಸುವ ಸಂಪ್ರದಾಯವಿದ್ದು, ನಶಿಸಿ ಹೋಗುತ್ತಿರುವ ಇಂದಿನ ದಿನಗಳಲ್ಲಿ ಲಕ್ಷ್ಮೀ ನರಸಿಂಹನ್ ದಂಪತಿ ಸೇರಿದಂತೆ ಕೆಲವೇ ಕೆಲವು ಮಂದಿ ಈ ಪರಂಪರೆಯಲ್ಲಿ ತೊಡಿಗಿಸಿಕೊಂಡಿದ್ದಾರೆ.
ನವರಾತ್ರಿ ಬೊಂಬೆಗಳ ಹಬ್ಬಕ್ಕೆ ತಮ್ಮ ಮನೆಯಲ್ಲಿ 15 ವರ್ಷಗಳಿಂದ ಹೊಸಮೆರಗು ನೀಡಿದ್ದಾರೆ. 100 ಬೊಂಬೆಗಳಿಂದ ಆರಂಭವಾದ ಪ್ರದರ್ಶನದಲ್ಲಿ ಇಂದು ಎರಡು ಸಾವಿರಕ್ಕೂ ಅಧಿಕ ಬೊಂಬೆಗಳು ಸ್ಥಾನ ಪಡೆದುಕೊಂಡಿವೆ.ಕಣ್ಮನ ಸೆಳೆಯುವ ಬೊಂಬೆಗಳ ಚಿತ್ರಣ:
ಮೂರೂ ದಿಕ್ಕುಗಳಲ್ಲಿ ಮಾಡಿದ 9 ಮೆಟ್ಟಿಲುಗಳಲ್ಲಿ ರಾಮಾನುಜಾಚಾರ್ಯರ ಅಭಿಮಾನ ಕ್ಷೇತ್ರಗಳಾದ ತಿರುಮಲೆ ಶ್ರೀನಿವಾಸ ಮೇಲುಕೋಟೆ ಚೆಲುವನಾರಾಯಣ, ಕಂಚಿ ದೇವರಾಜಪೆರುಮಾಳ್, ಶ್ರೀರಗಂನ ರಂಗನಾಥ ವಿರಾಜಮಾನನಾಗಿದ್ದಾನೆ. ರಾಜಾರಾಣಿ ದಸರಾ ವೈಭವ, ರಾಮಾಯಣ, ಮಹಾಭಾರತ, ವಿವಿಧ ದಿವ್ಯಕ್ಷೇತ್ರಗಳ ಗರುಡೋತ್ಸವ, ಪುರಿಜಗನ್ನಾಥ ರಥೋತ್ಸವ, ವೈರಮುಡಿ ಉತ್ಸವ, ತಮಿಳುನಾಡಿನ 9 ಮುರುಗನ್ ದೇವಸ್ಥಾನಗಳು, ಬಂಗಾರದ ರಾಜಗೋಪುರ, ಕುಂಭಾಭಿಷೇಕ, ಶೆಟ್ಟಿಯಾರ್ ಗೊಂಬೆಗಳು, ಕೃಷ್ಣಾವತಾರ, ಸೀತಾರಾಮ ಕಲ್ಯಾಣ, ಮದುವೆ, ಮುಂಜಿ, ಸೀಮಂತ, ತೊಟ್ಟಿಲುಶಾಸ್ತ್ರ, ಹೀಗೆ ತರಾವರಿ ಚಿತ್ರಣಗಳ ಆಕರ್ಷಕ ಬೊಂಬೆಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಇದರ ಜೊತೆಗೆ ಮೇಲುಕೋಟೆ, ತಿರುಪತಿ, ಶಬರಿಮಲೆ ಬೆಟ್ಟಗಳನ್ನು ನಿರ್ಮಿಸಿ ಸುತ್ತ ಪಾರ್ಕ್ ನಿರ್ಮಾಣ ಮಾಡಲಾಗಿದೆ.ಪ್ರತಿನಿತ್ಯ ರಾತ್ರಿ 7ಕ್ಕೆ ಗೊಂಬೆಗಳಿಗೆ ಸಾಂಪ್ರದಾಯಿಕವಾಗಿ ಆರತಿ ಮಾಡಲಾಗುತ್ತದೆ, ಬೊಂಬೆಗಳನ್ನು ನೋಡಲು ಬಂದ ಎಲ್ಲರಿಗೂ ಬೊಂಬೆಗಳಿಗೆ ನೈವೀದ್ಯೆ ಮಾಡಿದ ರುಚಿರುಚಿಯಾದ ಪ್ರಸಾದವನ್ನು ಪುಟ್ಟ ಅಡಿಕೆ ದೊನ್ನೆಯಲ್ಲಿ ನೀಡುತ್ತಾರೆ.
ಪ್ರದರ್ಶನ ಅ.12 ರ ವಿಜಯದಶಮಿವರೆಗೂ ಇದ್ದು ಬೆಳಗ್ಗೆ 9 ರಿಂದ ರಾತ್ರಿ 7 ರವರೆಗೆ ಬೊಂಬೆಗಳ ವೈಭವವನ್ನು ಕಣ್ತುಂಬಿಕೊಳ್ಳಬಹುದು.ಬೊಂಬೆಗಳ ಜೊಡಣೆಯನ್ನು ಹತ್ತು ದಿನಗಳಿಂದ ಆರಂಭಿಸಿ ನವರಾತ್ರಿ ಆರಂಭದಿಂದ ದರ್ಶನಕ್ಕೆ ಅವಕಾಶ ನೀಡಿದ್ದೇವೆ. ಕರ್ನಾಟಕ, ತಮಿಳುನಾಡು ಮುಂತಾದ ಕಡೆಗಳಿಂದ ಮಣ್ಣಿನ ಬೊಂಬೆಗಳನ್ನು ಸಂಗ್ರಹಿಸಿ ತಂದಿದ್ದೇವೆ. ಜೋಡನೆ ನಂತರ ಸುರಕ್ಷಿತವಾಗಿ ತೆಗೆದಿಡುವುದು ಸವಾಲಿನ ಸಂಗತಿ. ಇದರ ರಕ್ಷಣೆಗಾಗಿ ಒಂದು ಕೊಠಡಿ ಮೀಸಲಿಟ್ಟಿದ್ದೇವೆ ಎನ್ನುತ್ತಾರೆ ಲಕ್ಷ್ಮೀನರಸಿಂಹನ್ ದಂಪತಿ.