ಕಾರ್ಖಾನೆಗಳ ಧೂಳು ನಿಯಂತ್ರಣ ತುರ್ತಾಗಲಿ

KannadaprabhaNewsNetwork |  
Published : Mar 20, 2025, 01:18 AM IST
18ಕೆಪಿಎಲ್201 ಕೊಪ್ಪಳ ಬಳಿ ಕಾರ್ಖಾನೆ ಹೊರಸೂಸುತ್ತಿರುವ ಹೊಗೆ | Kannada Prabha

ಸಾರಾಂಶ

ಕಾರ್ಖಾನೆಗೆ ಬರುವ ಬೃಹತ್ ವಾಹನ, ತರುವ ಕಚ್ಚಾ ವಸ್ತುಗಳಿಂದಲೂ ಭಾರಿ ಪ್ರಮಾಣದಲ್ಲಿ ಧೂಳು ಬರುತ್ತಿದೆ. ಹೀಗಾಗಿ, ಕಾರ್ಖಾನೆಯ ಧೂಳಿನ ಜತೆಗೆ ಈ ಧೂಳು ಸೇರಿಕೊಂಡು ಮತ್ತಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ, ತುರ್ತಾಗಿ ಕಾರ್ಖಾನೆಯಲ್ಲಿನ ಧೂಳು ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮವಾಗಬೇಕು.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಕೊಪ್ಪಳ ತಾಲೂಕಿನ ಕಾರ್ಖಾನೆಯ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಎಲ್ಲಿ ನೋಡಿದರೂ ಧೂಳು ತುಂಬಿಕೊಂಡಿದೆ. ಇದಕ್ಕೆ ಈಗ ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಇದರಿಂದ ಪ್ರಯೋಜನವಾಗುವುದಿಲ್ಲ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ಶಾಶ್ವತ ಪರಿಹಾರವಾಗಬೇಕು.

ಇದು, ಕೇಂದ್ರ ಸಚಿವಾಲಯದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಮಿತಿ ನೀಡಿರುವ ಸಲಹೆ. ಕೇವಲ ಕಾರ್ಖಾನೆಯಿಂದ ಅಷ್ಟೇ ಅಲ್ಲ, ಕಾರ್ಖಾನೆಗೆ ಬರುವ ಬೃಹತ್ ವಾಹನ, ತರುವ ಕಚ್ಚಾ ವಸ್ತುಗಳಿಂದಲೂ ಭಾರಿ ಪ್ರಮಾಣದಲ್ಲಿ ಧೂಳು ಬರುತ್ತಿದೆ. ಕಾರ್ಖಾನೆಯ ಧೂಳಿನ ಜತೆಗೆ ಈ ಧೂಳು ಸೇರಿಕೊಂಡು ಮತ್ತಷ್ಟು ಸಮಸ್ಯೆಯಾಗುತ್ತಿದೆ. ಹೀಗಾಗಿ, ತುರ್ತಾಗಿ ಕಾರ್ಖಾನೆಯಲ್ಲಿನ ಧೂಳು ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮವಾಗಬೇಕು. ಜತೆ-ಜತೆಗೆ ಕಾರ್ಖಾನೆ ಕಚ್ಚಾ ಸಾಮಗ್ರಿಯನ್ನು ತರುವಾಗಲೂ ಮುನ್ನೆಚ್ಚರಿಕೆ ವಹಿಸಬೇಕು. ಅವುಗಳನ್ನು ಮಚ್ಚಿಕೊಂಡು ತರಬೇಕು. ಈ ದಿಸೆಯಲ್ಲಿ ಕೆಎಸ್‌ಪಿಸಿಬಿ ನಿಗಾವಹಿಸಿ, ನಿರ್ದೇಶನ ನೀಡಬೇಕು. ಅದರಂತೆಯೇ ಕ್ರಮವಹಿಸಬೇಕು ಎಂದು ಸಮಿತಿ ಮಾರ್ಗದರ್ಶನ ಮಾಡಿದೆ.

ವಿಷವಾಗುತ್ತಿರುವ ಅಂತರ್ಜಲ:

ಕಾರ್ಖಾನೆಯಲ್ಲಿ ಧೂಳು ನಿಯಂತ್ರಣಕ್ಕಾಗಿ ಸ್ಥಳೀಯವಾಗಿಯೇ ಬೋರ್‌ವೆಲ್‌ ಕೊರೆದು ಜಲ ಬಳಕೆ ಮಾಡಿಕೊಳ್ಳಲಾಗುತ್ತದೆ. ಹೀಗೆ ಬಳಕೆ ಮಾಡಿಕೊಂಡು, ಧೂಳು ನಿಯಂತ್ರಣಕ್ಕೆ ನೀರು ಸಿಂಪಡಣೆ ಮತ್ತು ಕಚ್ಚಾ ಸಾಮಗ್ರಿಯ ಮೇಲೂ ನೀರು ಸಿಂಪಡಣೆ ಮಾಡುತ್ತಿರುವುದು ಭೇಟಿಯ ಸಂದರ್ಭದಲ್ಲಿ ಕಂಡು ಬಂದಿದೆ. ಆದರೆ, ಇದು ಸರಿಯಾದ ಕ್ರಮವಲ್ಲ. ಇಲ್ಲಿಯ ಅಂತರ್ಜಲ ಬಳಕೆ ಮಾಡಿಕೊಳ್ಳುವುದರಿಂದ ಅಂತರ್ಜಲ ಕಡಿಮೆಯಾಗುವ ಸಾಧ್ಯತೆ ಇದೆ. ಇದಕ್ಕಿಂತ ಅಪಾಯಕಾರಿಯಂದರೆ ಧೂಳು ನಿಯಂತ್ರಣಕ್ಕೆ ಸಿಂಪಡಣೆ ಮಾಡಿದ ನೀರು, ಪುನಃ ಅಂತರ್ಜಲಕ್ಕೆ ಸೇರಿಕೊಳ್ಳುತ್ತದೆ. ಇದರಿಂದಲೂ ನೀರು ವಿಷವಾಗುವ ಸಾಧ್ಯತೆ ಇದೆ. ಇದು ಅಂತರ್ಜಲವನ್ನೇ ಹಾಳು ಮಾಡುತ್ತದೆ ಎನ್ನುವ ಆತಂಕ ವ್ಯಕ್ತಪಡಿಸಲಾಗಿದೆ.

ಕಾರ್ಖಾನೆಯಲ್ಲಿ ಕೆಲಸ ಮಾಡುವ ಅಂದರೆ, ಕಚ್ಚಾ ಸಾಮಗ್ರಿಯ ಕಾರ್ಯ ನಿರ್ವಹಣೆ ವೇಳೆಯಲ್ಲಿ ಪಿಪಿಇ ಕಿಟ್ ಬಳಕೆ ಮಾಡಬೇಕು. ಈ ಮೂಲಕ ಕಾರ್ಮಿಕರ ಆರೋಗ್ಯ ಕಾಪಾಡಲು ಸಮಿತಿ ಶಿಫಾರಸು ಮಾಡಿದೆ. ಕಾರ್ಖಾನೆಯಲ್ಲಿ ಆಗುತ್ತಿರುವ ಧೂಳು ನಿಯಂತ್ರಣದ ಕುರಿತು ವಿಶ್ವಾಸ ಬರಲು ಮತ್ತು ಧೂಳು ನಿಯಂತ್ರಣ ಮಾಡಿದ ಬಗ್ಗೆ ಮಾಹಿತಿ ನೀಡಲು ಆಯಾ ಕಾರ್ಖಾನೆಯ ಗೇಟ್ ಬಳಿ ಪರಿಸರ ನಿಯತಾಂಕಗಳನ್ನು ಪ್ರದರ್ಶನ ನೀಡಬೇಕು. ಈ ಮೂಲಕ ಜನರಿಗೆ ಜಾಗೃತಿ ಮೂಡಿಸಬೇಕು.ಪ್ರತ್ಯೇಕ ಅಧ್ಯಯನ ನಡೆಸಿಕೇಂದ್ರ ಸಚಿವಾಲಯ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಅಧ್ಯಯನ ಸಮಿತಿ ಕೇವಲ ಕಾರ್ಖಾನೆ ಮತ್ತು ಕಾರ್ಖಾನೆ ಸುತ್ತಮುತ್ತಲು ಪ್ರದೇಶದಲ್ಲಿ ಆಗಿರುವ ದುಷ್ಪರಿಣಾಮ ಹಾಗೂ ಅನುಸರಿಸುವ ಕ್ರಮಗಳನ್ನು ಅಧ್ಯಯನ ಮಾಡಿದೆ. ಆದರೆ, ರಾಜ್ಯ ಸರ್ಕಾರ ಈ ಕುರಿತು ಆರೋಗ್ಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಿಂದಲೂ ಪ್ರತ್ಯೇಕ ಅಧ್ಯಯನದ ಆಗತ್ಯವಿದೆ. ಕಾರ್ಖಾನೆಯ ವ್ಯಾಪ್ತಿಯಲ್ಲಿನ ಜನರ ಜೀವನ, ಅವರ ಆರೋಗ್ಯದ ಮೇಲೆ ಆಗಿರುವ ಪರಿಣಾಮದ ಕುರಿತು ಪ್ರತ್ಯೇಕ ಅಧ್ಯಯನವಾಗುವ ಅಗತ್ಯವಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಈ ಅಧ್ಯಯನಗಳನ್ನು ರಾಷ್ಟ್ರಮಟ್ಟದ ಸಂಸ್ಥೆಯ ಮೂಲಕ ಮಾಡಿಸಬೇಕು. ಸ್ಥಳೀಯವಾಗಿ ಆಗುವ ಅಧ್ಯಯನಗಳಿಂದ ವರದಿಯಲ್ಲಿ ಪಾರದರ್ಶಕತೆ ಇರುವ ಸಾಧ್ಯತೆ ಕಡಿಮೆ ಇರುತ್ತದೆ ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.

ಭರಪೂರ ಸಿಕ್ಕ ಧೂಳು

ಈಗಾಗಲೇ ಇರುವ ಕಾರ್ಖಾನೆಯಿಂದ ಸ್ಥಳೀಯರಿಗೆ ಎಷ್ಟು ಉದ್ಯೋಗ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಸುತ್ತಮುತ್ತಲ ಹಳ್ಳಿಗಳ ಜನರಿಗೆ ಮತ್ತು ಜಾನುವಾರುಗಳಿಗೆ ಧೂಳಂತೂ ಭರಪುರ ಸಿಕ್ಕಿದ್ದು, ಇದರಿಂದ ನಾನಾ ಸಮಸ್ಯೆ ಎದುರಿಸುತ್ತಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು
ಗ್ರಾಮೀಣ ಭಾಗದಲ್ಲೂ ವಸತಿ ಕಟ್ಟಡಗಳಿಗೆ ಒಸಿ-ಸಿಸಿ ಬೇಕಿಲ್ಲ