ಲಂಚ ಕೊಟ್ಟರಷ್ಟೇ ಇ-ಖಾತೆ: ಅಧಿಕಾರಿಗಳಿಗೆ ತರಾಟೆ

KannadaprabhaNewsNetwork | Published : Dec 16, 2024 12:47 AM

ಸಾರಾಂಶ

ಕನಕಪುರ: ಲಂಚ ಕೊಟ್ಟರಷ್ಟೇ ಇ- ಖಾತೆ ಮಾಡಿಕೊಡುತ್ತಾರೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿವೆ. ನನ್ನ ಕಣ್ತಪ್ಪಿಸಿ ಅಧಿಕಾರಿಗಳು ಕಡತಗಳನ್ನು ಎತ್ತಿಕೊಂಡು ಓಡಾಡುತ್ತೀರಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ನಗರಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ತರಾಟೆಗೆ ತೆಗೆದುಕೊಂಡರು.

ಕನಕಪುರ: ಲಂಚ ಕೊಟ್ಟರಷ್ಟೇ ಇ- ಖಾತೆ ಮಾಡಿಕೊಡುತ್ತಾರೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿವೆ. ನನ್ನ ಕಣ್ತಪ್ಪಿಸಿ ಅಧಿಕಾರಿಗಳು ಕಡತಗಳನ್ನು ಎತ್ತಿಕೊಂಡು ಓಡಾಡುತ್ತೀರಿ ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ನಗರಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ತರಾಟೆಗೆ ತೆಗೆದುಕೊಂಡರು.

ನಗರಸಭೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಯಲ್ಲಿ ಇರುವಷ್ಟು ಸಮಸ್ಯೆ ಬೇರೆ ಯಾವ ಇಲಾಖೆಯಲ್ಲೂ ಇಲ್ಲ. ನಾನು ಯಾವುದೇ ಮಾಹಿತಿ ಕೇಳಿದರೂ ಕೊಡುವುದಿಲ್ಲ. ಅಧಿಕಾರಿಗಳು, ಸಿಬ್ಬಂದಿ 10 ಗಂಟೆಗೆ ಕಚೇರಿಗೆ ಬರಬೇಕು. ಆದರೆ ಕೆಲವರು ಇಷ್ಟ ಬಂದ ವೇಳೆ ಕಚೇರಿಗೆ ಬರುತ್ತೀರಿ ಎಂದು ಅಧಿಕಾರಿಗಳ ಮೇಲೆ ಹರಿಹಾಯ್ದರು.

ಸದಸ್ಯ ಕಾಂತರಾಜು ಮಾತನಾಡಿ, ಇ- ಖಾತೆಗೆ ಅರ್ಜಿ ಸಲ್ಲಿಸಿದರೆ 3 ತಿಂಗಳು ಅಲೆದಾಡಿದರೂ ಸಿಗುವುದಿಲ್ಲ. ಆದರೆ ಮೂರು ದಿನ ನಡೆದ ಇ- ಖಾತೆ ಆಂದೋಲನದಲ್ಲಿ ಸಾಕಷ್ಟು ಇ- ಖಾತೆಗಳನ್ನು ಮಾಡಿ ಕೊಟ್ಟು ಲಕ್ಷಾಂತರ ತೆರಿಗೆಯನ್ನು ವಸೂಲಿ ಮಾಡಿದ್ದೀರಿ ಇದು ಹೇಗೆ ಸಾಧ್ಯವಾಯಿತು, ಆಂದೋಲನದಲ್ಲಿ ಆಗುವ ಕೆಲಸ ಕಚೇರಿಗಳಲ್ಲಿ ಯಾಕೆ ಆಗುವುದಿಲ್ಲ ಎಂದು ಪ್ರಶ್ನಿಸಿದರು.

ಸದಸ್ಯ ಸ್ಟುಡಿಯೋ ಚಂದ್ರು ಮಾತನಾಡಿ, ನಗರಸಭೆ ಅಧ್ಯಕ್ಷರ ಆಡಳಿತದಲ್ಲಿ ಏನು ನಡೆಯುತ್ತಿದೆ ಎಂದು ನಮಗೆ ಈಗ ಅರ್ಥವಾಗುತ್ತಿದೆ. ಅಧಿಕಾರಿ, ಸಿಬ್ಬಂದಿ ಅಧ್ಯಕ್ಷರ ಮಾತಿಗೆ ಬೆಲೆ ಕೊಡೋದಿಲ್ಲ. ಅಧ್ಯಕ್ಷರ ಪಾಡೇ ಹೀಗಾದರೆ ಇನ್ನು ಸಾಮಾನ್ಯ ಸದಸ್ಯರ ಪಾಡೇನು ಎಂದು ಪ್ರಶ್ನಿಸಿದರು.

ಸದಸ್ಯ ವಿಜಯ್ ಕುಮಾರ್ ಮಾತನಾಡಿ, ಸಕಾಲ ಯೋಜನೆಯಲ್ಲಿ ಅರ್ಜಿಗಳನ್ನು ನೋಂದಣಿಯೇ ಮಾಡುತ್ತಿಲ್ಲ. ಅಧಿಕಾರಿಗಳ ಅನುಕೂಲಕ್ಕೆ ತಕ್ಕಂತೆ ಮಾಡುತ್ತಿದ್ದಾರೆ. ಇದರಿಂದಲೇ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿಯೊಂದು ಅರ್ಜಿಯನ್ನು ಸಕಾಲದಲ್ಲಿ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.

ಸದಸ್ಯ ನಾಗರಾಜು ಮಾತನಾಡಿ, ಸರ್ಕಾರದಿಂದ ಕರಡಿಗುಡ್ಡೆ ಮತ್ತು ಮಹಾರಾಜರ ಕಟ್ಟೆ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಿ ಬಹಳಷ್ಟು ವರ್ಷ ಕಳೆದಿದೆ ಕೆಲವರು ಇನ್ನೂ ಖಾತೆ ಮಾಡಿಸಿಕೊಂಡಿಲ್ಲ. ಆದರೆ ಅದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಯಾರದ್ದೋ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಖಾತೆ ಮಾಡಿಸಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಸರ್ವೆ ಮಾಡಿ ಮಂಜೂರಾಗಿರುವ ಫಲಾನುಭವಿಗಳಿಗೆ ಖಾತೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪೌರಾಯುಕ್ತ ಮಹದೇವ್ ಮಾತನಾಡಿ, ಈ ಹಿಂದೆ ತೆರಿಗೆ ವಸೂಲಿ 3 ಕೋಟಿ ಮಾತ್ರ ಇತ್ತು. ನಾನು ಬಂದ ಮೇಲೆ 4.24 ಕೋಟಿ ತೆರಿಗೆ ಸಂಗ್ರಹ ಮಾಡಿದ್ದೇವೆ. ಇನ್ನು ಮೂರು ತಿಂಗಳು ಬಾಕಿ ಇದೆ, ಇನ್ನೂ 1.5 ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿ ಇಟ್ಟುಕೊಂಡಿದ್ದೇವೆ. ಹಿಂದೆ ವಿಲೇವಾರಿಯಾಗದ ಇ- ಖಾತೆ ಅರ್ಜಿಗಳನ್ನೆಲ್ಲ ವಿಲೇವಾರಿ ಮಾಡಿದ್ದೇವೆ. ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಕೆಲ ಕೆಲಸ ಕಾರ್ಯಗಳು ವಿಳಂಬವಾಗಿರಬಹುದು ಎಂದರು.

ಸಭೆಯಲ್ಲಿ ಕನಕ ವಾಣಿಜ್ಯ ಸಂಕೀರ್ಣದಲ್ಲಿರುವ ಜಿಮ್‌ ಹಾಗೂ ಲಕ್ಷ್ಮಣ್ ಲೇಔಟ್ ನಲ್ಲಿರುವ ವಾಲ್ಮೀಕಿ ಭವನವನ್ನು ಟೆಂಡರ್ ಮೂಲಕ ತಿಂಗಳಿಷ್ಟು ಹಣ ಕೊಡುವ ಬಗ್ಗೆ ಚರ್ಚೆ ನಡೆಸಿದರು. ಅಂಗನವಾಡಿ ಇಲ್ಲದಿರುವ ವಾರ್ಡ್ ಗಳಲ್ಲಿ ಸಿಎ ನಿವೇಶನ ಗುರುತಿಸಿ ಇ- ಖಾತೆ ಮಾಡಿ ಮಕ್ಕಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ತೀರ್ಮಾನಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷ ಸೈಯದ್ ಸಾಧಿಕ್, ಮಾಜಿ ಅಧ್ಯಕ್ಷ ಮಕ್ಬುಲ್ ಪಾಷಾ, ಮಾಜಿ ಉಪಾಧ್ಯಕ್ಷ ಗುಂಡಣ್ಣ, ಸದಸ್ಯರಾದ ಕಿರಣ್‌, ಲೋಕೇಶ್, ಮಾಲತಿ, ನಿಷ್ಕಲ, ಪುಟ್ಟಲಕ್ಷ್ಮಮ್ಮ, ರಾಜೇಶ್ವರಿ, ಹೇಮ, ಸರಳ, ಪದ್ಮಮ್ಮ, ಆರೋಗ್ಯ ಇಲಾಖೆ ಧನಂಜಯ್, ಎಂಜಿನಿರ್ಯ ಸಾಗರ್, ಶ್ರೀದೇವಿ, ಲೆಕ್ಕಾಧಿಕಾರಿ ನಟರಾಜು, ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 02:

ಕನಕಪುರದಲ್ಲಿ ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸದಸ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು.

Share this article