ಕೊಪ್ಪಳ: ಡಿ.31ರೊಳಗಾಗಿ ಇ-ಕೆವೈಸಿ ಮಾಡಿಸದಿದ್ದರೆ ಅಡುಗೆ ಅನಿಲಕ್ಕೆ ನೀಡುವ ಸಬ್ಸಿಡಿ ಬಂದ್ ಆಗುತ್ತದೆ ಎನ್ನುವ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಗ್ಯಾಸ್ ಏಜೆನ್ಸಿಗಳ ಮುಂಭಾಗ ಜನ ಸಿನಿಮಾ ಟಿಕೆಟ್‌ಗೆ ಮುಗಿಬಿದ್ದಂತೆ ತಳ್ಳಾಟ-ನೂಕಾಟ ನಡೆಸಿದ್ದಾರೆ. ಕಿಲೋಮೀಟರ್‌ಗಟ್ಟಲೇ ಸರದಿಯಲ್ಲಿ ನಿಂತಿದ್ದಾರೆ.
ಅಡುಗೆ ಅನಿಲವನ್ನು ಸಬ್ಸಿಡಿಯಲ್ಲಿ ಪಡೆಯುತ್ತಿರುವವರಿಗೆ ಇ-ಕೈವೈಸಿ ಮಾಡಿಸುವಂತೆ ಕೇಂದ್ರ ಸರ್ಕಾರ ಸೂಚಿಸಿರುವುದು ಸತ್ಯ. ಆದರೆ, ಯಾವುದೇ ಗಡುವು ನಿಗದಿ ಮಾಡಿಲ್ಲ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಹರಡಿದ ಸುಳ್ಳುಸುದ್ದಿಯಿಂದಾಗಿ ಜನರು ಕೆಲಸವನ್ನೆಲ್ಲ ಬಿಟ್ಟು ಗ್ಯಾಸ್ ಏಜೆನ್ಸಿಗಳ ಮುಂಭಾಗ ಸರದಿಯಲ್ಲಿ ನಿಲ್ಲುತ್ತಿದ್ದಾರೆ.ಬೆಳ್ಳಂಬೆಳಗ್ಗ ಗ್ಯಾಸ್ ಏಜೆನ್ಸಿ ತೆರೆಯುವ ಮುನ್ನವೇ ಹಾಜರಾಗುತ್ತಾರೆ. ಇನ್ನೇನು ನಾಲ್ಕು ದಿನಗಳು ಮಾತ್ರ ಇದೆ ಎಂಬ ಆತಂಕ ಜನರಲ್ಲಿ ಮನೆಮಾಡಿದೆ. ಹೀಗಾಗಿ ಕಳೆದೆರಡು ದಿನಗಳಿಂದ ಗ್ಯಾಸ್ ಏಜೆನ್ಸಿ ಮುಂಭಾಗ ಜನ ಮುಗಿ ಬಿದ್ದಿದ್ದಾರೆ.ಗಡುವು ನಿಗದಿಯಾಗಿಲ್ಲ ಎಂದು ಗ್ಯಾಸ್ ಏಜೆನ್ಸಿ ಅವರೇ ಹೇಳಿದರೂ ಜನರು ಕೇಳಲು ತಯಾರಿಲ್ಲ. ವಿಪರೀತ ಗದ್ದಲವಾಗಿದ್ದರಿಂದ ಗ್ಯಾಸ್ ಏಜೆನ್ಸಿಯವರೇ ಸುಳ್ಳು ಹೇಳುತ್ತಿರಬಹುದು ಎಂಬುದು ಜನರ ಅನುಮಾನ. ಹೀಗಾಗಿ ಏಜೆನ್ಸಿ ಸಿಬ್ಬಂದಿ ಜತೆ ಜಗಳವಾಡುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಸರದಿಯಲ್ಲಿ ನಿಲ್ಲುವುದು ಮತ್ತು ಸರದಿಯಲ್ಲಿ ನಿಂತ ವೇಳೆ ಪರಸ್ಪರ ಜಗಳವಾಡುವುದು ನಡೆದೇ ಇದೆ.ಇ-ಕೆವೈಸಿ ಮಾಡಿಸುವುದಕ್ಕೆ 2024ರ ಮಾರ್ಚ್ 31ರವರೆಗೂ ಗಡುವು ವಿಸ್ತರಣೆ ಮಾಡಲಾಗಿದೆ. ಆದರೂ ಈ ವದಂತಿಯನ್ನೇ ಜನರು ನಂಬುತ್ತಿದ್ದಾರೆ.ಗಂಗಾವತಿ, ಕೊಪ್ಪಳ, ಕುಷ್ಟಗಿ ಸೇರಿದಂತೆ ಜಿಲ್ಲಾದ್ಯಂತ ಈ ಸುಳ್ಳುಸುದ್ದಿ ದೊಡ್ಡ ಸದ್ದು ಮಾಡಿದ್ದಲ್ಲದೆ ಜನರು ಸಾಕಷ್ಟು ಪರಿತಪಿಸುವಂತೆ ಮಾಡಿದೆ.ಅಧಿಕಾರಿಗಳು ಸ್ಪಷ್ಟನೆ ನೀಡಿದರೂ ಜನರು ಕೇಳುತ್ತಲೇ ಇಲ್ಲ. ನಾವು ಇ-ಕೆವೈಸಿ ಮಾಡಿಸಿಯೇ ಹೋಗುತ್ತೇವೆ ಎಂದು ಗ್ಯಾಸ್ ಏಜೆನ್ಸಿಯ ಮುಂಭಾಗ ನಿಂತವರು ಹಠ ಹಿಡಿದಿದ್ದಾರೆ.ಸುಳ್ಳಿಗೆ ಅಂಜಿದ ಸತ್ಯ: ಗ್ಯಾಸ್ ಹೊಂದಿರುವವರು ಡಿ.31ರೊಳಗಾಗಿ ಇ-ಕೆವೈಸಿ ಮಾಡಿಸಬೇಕು ಎನ್ನುವ ಸುಳ್ಳು ಸುದ್ದಿಯ ಕುರಿತು ಗ್ಯಾಸ್ ಏಜೆನ್ಸಿ ಮಾಲೀಕರು, ಅಧಿಕಾರಿಗಳು ಸ್ಪಷ್ಟನೆ ನೀಡಿದರೂ ಜನರು ಕೇಳದಂತೆ ಆಗಿದೆ. ಸುಳ್ಳುಸುದ್ದಿ ಮುಂದೆ ಸತ್ಯದ ಆಟ ನಡೆಯದಂತೆ ಆಗಿದೆ ಎನ್ನುವುದು ಸೋಜಿಗದ ಸಂಗತಿ.ಗಂಗಾವತಿ ತಹಸೀಲ್ದಾರ್ ಈ ಕುರಿತು ಪ್ರಕಟಣೆಯನ್ನೇ ನೀಡಿದ್ದಾರೆ. ಇ-ಕೆವೈಸಿ ಮಾಡಿಸುವುದಕ್ಕೆ ಯಾವುದೇ ಗಡುವು ಇಲ್ಲ. ಸುಳ್ಳು ಸುದ್ದಿಯನ್ನು ನಂಬದಂತೆ ಮನವಿ ಮಾಡಿದ್ದಾರೆ.2024ರ ಮಾರ್ಚ್ 31ರವರೆಗೂ ಇ-ಕೆವೈಸಿ ಮಾಡಿಸಲು ಅವಕಾಶ ಇದೆ. ಆದರೂ ವದಂತಿಯನ್ನೇ ನಂಬಿ ಜನರು ಮುಗಿಬಿದ್ದಿದ್ದಾರೆ. ಎಷ್ಟು ಹೇಳಿದರೂ ಕೇಳುತ್ತಲೇ ಇಲ್ಲ ಎನ್ನುತ್ತಾರೆ ಗ್ಯಾಸ್ ಏಜೆನ್ಸಿ ಮಾಲೀಕ ರಾಘವೇಂದ್ರ.