ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

ಇಂದಿನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಕರಾದವರು ದೇವಸ್ಥಾನಕ್ಕೆ ಕಂಬಗಳು ಎಷ್ಟು ಮುಖ್ಯವೋ ಹಾಗೇ ಶಾಲೆಗಳಿಗೆ ಶಿಕ್ಷಕರು ಕಂಬಗಳಂತೆ ಆಗಬೇಕು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಂಸ್ಥೆಯಲ್ಲಿರುವ ವಿದ್ಯಾರ್ಥಿಗಳು ನಿಜವಾದ ಆಸ್ತಿ. ಅವರ ಹಿತವನ್ನು ಕಾಪಾಡಿ ಅವರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕೆಂದು ಆಡಳಿತ ಮಂಡಳಿಯ ಕಾನೂನು ಸಲಹೆಗಾರರು ಕೆ.ಎಸ್.ದೇಶಪಾಂಡೆ ಹೇಳಿದರು.

ವಿದ್ಯಾ ಪ್ರಸಾರಕ ಮಂಡಳದ ಶಂಕ್ರಪ್ಪ ಸಕ್ರಿ ಪ್ರೌಢಶಾಲೆಯಲ್ಲಿ ಶಿಕ್ಷಕರ ಪ್ರಗತಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನ ಯುಗದಲ್ಲಿ ಶಿಕ್ಷಕರಾದವರು ದೇವಸ್ಥಾನಕ್ಕೆ ಕಂಬಗಳು ಎಷ್ಟು ಮುಖ್ಯವೋ ಹಾಗೇ ಶಾಲೆಗಳಿಗೆ ಶಿಕ್ಷಕರು ಕಂಬಗಳಂತೆ ಆಗಬೇಕು. ದಾನಗಳಲ್ಲಿ ಅತಿ ದೊಡ್ಡ ದಾನ ಅನ್ನದಾನ. ಆದರೆ ಅದು ಒಂದು ದಿನ ಮಾತ್ರ ಹಸಿವು ನೀಗಿಸಬಹುದು, ಆದರೆ ಅಕ್ಷರ ದಾನ ಇಡೀ ಜೀವನದ ಹಸಿವು ನೀಗಿಸುತ್ತದೆ ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು. ಶಿಕ್ಷಕರಾದವರು ಪಾಠ ಬೋಧನೆ ಮಾಡುವ ಮೊದಲೇ ಮನೆಯಲ್ಲಿ ಅಭ್ಯಾಸ ಮಾಡಿಕೊಂಡು ಅವಧಿಗೆ ಹೋಗಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ಮೂಲಕ ಬೋಧನೆ ಮಾಡಿದರೆ ಅದು ಮಕ್ಕಳಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುತ್ತದೆ ಎಂದರು.

ಇಂದು ವಿದ್ಯಾರ್ಥಿಗಳು ಪೈಪೋಟಿಯನ್ನು ಸಮರ್ಪಕವಾಗಿ ಎದುರಿಸಲು ಶಾಲೆಯಲ್ಲಿ ಇಲಾಖೆಯ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಕ್ರೀಡಾಕೂಟ ಕಂಪ್ಯೂಟರ್, ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಶ್ರದ್ಧೆ, ಪರಿಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನದಿಂದ ಅಭ್ಯಾಸ ಮಾಡಿದರೆ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಸಾಧ್ಯ. ಮಕ್ಕಳ ಪ್ರತಿಭೆ ಗುರುತಿಸಲಿಕ್ಕೆ ವಿದ್ಯಾ ಪ್ರಸಾರಕ ಮಂಡಳದ ಹಲವಾರು ಮಹನೀಯರು ಎಸ್ಎಸ್ಎಲ್‌ಸಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ₹15000 ನಿಂದ ₹20000 ವರೆಗೆ ಬಹುಮಾನವನ್ನು ಕೊಡಮಾಡಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳ ಪಾಲಕರ ಕನಸು ನನಸು ಮಾಡಬೇಕಾದರೆ ಗುಣಾತ್ಮಕ ಶಿಕ್ಷಣ ನೀಡಿ ಮಕ್ಕಳ ಯಶಸ್ವಿಗೆ ಶಿಕ್ಷಕರು ಹಗಲಿರಲು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಮಕ್ಕಳಿಂದ ಹಲವಾರು ಸ್ಪರ್ಧೆಗಳು ಏರ್ಪಡಿಸಿಲಾಯಿತು. ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಗಿರೀಶ ಮಾಸುರಕರ, ಉಪಾಧ್ಯಕ್ಷ ಜಿ ಎನ್ ಕುಲಕರ್ಣಿ, ಮಂಡಳಿಯ ಸದಸ್ಯರುಗಳಾದ ಎಸ್ ಕೆ ಕುಲಕರ್ಣಿ, ಸುಧೀರ ದೇವದಾಸ್, ಪ್ರೌಢಶಾಲಾ ವಿಭಾಗದ ಉಪಸಮಿತಿಯ ಅಧ್ಯಕ್ಷರಾದ ಸಚಿನ್ ಸೇಡಂಕರ ಭಾಗವಹಿಸಿದ್ದರು.

ಸಭೆಯಲ್ಲಿ ಉಪಪ್ರಾಚಾರ್ಯ ಬಿ.ಎಚ್.ಲಮಾಣಿ ಇವರು ಸ್ವಾಗತಿಸಿದರು. ಶಿಕ್ಷಕರ ಕುಂದು ಕೊರತೆಗಳನ್ನು ಆಲಸಿ, ಶಿಕ್ಷಕರ ಪರವಾಗಿ ಎಂ ಎಸ್ ಶಟವಾಜಿ, ಕೆ ಬಿ ಜಂಬಗಿ ಜಿ ಜಿ ಕುಲಕರ್ಣಿ ಆರ್ ಆರ್ ಕಾಳಗಿ ತಮ್ಮ ಅನಿಸಿಕೆ ಹಂಚಿಕೊಂಡರು.

ಮಕ್ಕಳು ತಮ್ಮ ಸ್ವಂತ ಕೌಶಲ್ಯಗಳ ಆಧಾರಿತ ಕನ್ನಡ ಕವಿಗಳ ಚಿತ್ರ ಪಟ, ಸಮಾಜ ವಿಜ್ಞಾನದ ಚಾಟ್ಸ್‌, ವಿಜ್ಞಾನ, ಗಣಿತ ವಿಷಯದಲ್ಲಿ ರಂಗೋಲಿ ಬಿಡಿಸುವುದರ ಮೂಲಕ ತಮ್ಮ ಪ್ರತಿಭೆ ತೋರಿದರು.ಕಾರ್ಯಕ್ರಮದಲ್ಲಿ ಪ್ರೌಢ ಶಾಲಾ ವಿಭಾಗದ ಎಲ್ಲಾ ಅನುದಾನಿತ, ಅನುದಾನ ರಹಿತ ಶಿಕ್ಷಕ/ಶಿಕ್ಷಕೇತರ ಸಿಬ್ಬಂದಿ ಭಾಗವಹಿಸಿದ್ದರು. ಕೆ ವಿಜಯಕುಮಾರ ವಂದಿಸಿದರು.

Share this article