- ವಚನ ಪಾಲಿಸದವರಿಂದ ಜೈ ಶ್ರೀರಾಮ್ ಘೋಷಣೆ- ದೇವನೂರ ಮಹಾದೇವ ಕಿಡಿ
ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿ ಜಮಾಯಿಸಿದ ನೂರಾರು ಮಂದಿ ಚಾಮರಾಜ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ, ಸೌಹಾರ್ದತೆಗಾಗಿ ಕೈಜೋಡಿಸುವಂತೆ ಕರೆ ನೀಡಿದರು. ನಂತರ ದೊಡ್ಡ ಗಡಿಯಾರ ವೃತ್ತದ ಮೂಲಕ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಮುಂಭಾಗದಲ್ಲಿ ಜಮಾಯಿಸಿದರು.
ಈ ವೇಳೆ ಹಿರಿಯ ಸಾಹಿತಿ ದೇವನೂರ ಮಹಾದೇವ ಮಾತನಾಡಿ, ವಚನ ಪಾಲನೆಗೆ ಶ್ರೀರಾಮ ಒಂದು ಪ್ರತೀಕ. ಕೊಟ್ಟ ಮಾತನ್ನು ಉಳಿಸಿಕೊಳ್ಳದವರು, ವಚನ ಪಾಲನೆ ಮಾಡದಿದ್ದವರು ಇವತ್ತು ಜೈ ಶ್ರೀರಾಮ್ ಅನ್ನುತ್ತಿದ್ದಾರೆ. ಆ ಮೂಲಕ ವಚನ ಪಾಲನೆಯ ಪ್ರತೀಕವಾದ ಶ್ರೀರಾಮನ ಸ್ಪೀರಿಟ್ ಅನ್ನು ಕೊಲ್ಲುತ್ತಿದ್ದಾರೆ. ವಚನ ಪಾಲಿಸದವರು ಅಸಮರ್ಥರು ಎಂದು ಕಿಡಿಕಾರಿದರು.ಇವತ್ತು ಇಡೀ ದೇಶವೇ ಡೇಂಜರ್ ಜೋನ್ ನಲ್ಲಿದೆ, ಅಪಾಯದ ತುದಿಯಲ್ಲಿದೆ. ಪಾರಾಗಬೇಕಾದರೆ ಪ್ರತಿಯೊಬ್ಬರು ಮಾತಾಡಬೇಕು. ಪ್ರತಿಯೊಬ್ಬರು ಕ್ರಿಯಾಶೀಲರಾಗಬೇಕು. ರಾಜರ ಆಡಳಿತ ಹೊರಟು ಹೋಗುತ್ತದೆ ಎಂದು ಯಾರೂ ನಂಬಿರಲಿಲ್ಲ. ಸರ್ವಾಧಿಕಾರಿಗಳು ಹೋಗಿದ್ದಾರೆ. ದೊಡ್ಡದು ಅಂದುಕೊಳ್ಳುವುದೇ ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರು.
ಮಂಡ್ಯದ ಕೆರಗೋಡಿನಲ್ಲಿ ಬಾವುಟ ಹಾರಿಸಿದ್ದಕ್ಕೆ ಗಲಾಟೆ ಆಗುತ್ತಿದೆ. ಅದರರ್ಥ ಏನು? ನಾವು ಏನೋ ಮಾಡಬೇಕಾಗಿತ್ತು. ಎಷ್ಟೋ ಮಾಡಬೇಕಾಗಿತ್ತು. ಅದನ್ನು ನಾವು ಮಾಡಲಿಲ್ಲ. ಅದಕ್ಕೆ ಇದಾಗುತ್ತದೆ ಅಷ್ಟೇ ಅರ್ಥ. ಸೌಹಾರ್ದತೆಗೆ ನಾವು ದೊಡ್ಡದು ಮಾಡಬೇಕಿಲ್ಲ. ಪರಸ್ಪರ ಹೆಗಲಿಗೆ ಕೈ ಹಾಕುವುದು ದೊಡ್ಡದು. ಮುಗುಳುನಗೆ ಕೂಡ ದೊಡ್ಡದು. 2024ರ ಲೋಕಸಭಾ ಚುನಾವಣೆಗೆ ಎಲ್ಲಾ ಮರೆತು ನಮ್ಮ ನಿಮ್ಮ ಒಳಗಡೆ ಇರುವ ದೌರ್ಬಲ್ಯ ಬಿಟ್ಟು ಹೋರಾಟ ಮಾಡಬೇಕು. ಎಲ್ಲರೂ ಮನಸ್ಸು ಪಟ್ಟರೆ ಅಸಾಧ್ಯಗಳು ಸಾಧ್ಯವಾಗಬಹುದು ಎಂದು ಅವರು ತಿಳಿಸಿದರು.
ಚಿಂತಕರಾದ ಪ್ರೊ.ಕೆ.ಎಸ್. ಭಗವಾನ್, ಪ್ರೊ. ಅರವಿಂದ ಮಾಲಗತ್ತಿ, ಸಿ. ಬಸಲಿಂಗಯ್ಯ, ಪ್ರೊ. ಕಾಳಚನ್ನೇಗೌಡ, ಕೋಟಿಗಾನಹಳ್ಳಿ ರಾಮಯ್ಯ, ಎಚ್. ಜನಾರ್ಧನ್, ಹೊಸಕೋಟೆ ಬಸವರಾಜು, ಸ.ರ. ಸುದರ್ಶನ, ಸವಿತಾ, ಎಚ್. ಜನಾರ್ಧನ್, ಕೃಷ್ಣಪ್ರಸಾದ್, ಟಿ. ಗುರುರಾಜ್, ಬೆಟ್ಟಯ್ಯ ಕೋಟೆ, ಸುನಂದಮ್ಮ, ಆಲಗೂಡು ಶಿವಕುಮಾರ್, ಕಲ್ಲಹಳ್ಳಿ ಕುಮಾರ್, ಕೆ. ಬಸವರಾಜು, ಅಹಿಂದ ಜವರಪ್ಪ, ದೇವದಾಸ್, ದ್ಯಾವಪ್ಪನಾಯಕ, ಚೋರನಹಳ್ಳಿ ಶಿವಣ್ಣ, ಗೋಪಾಲಕೃಷ್ಣ, ಹರಿಹರ ಆನಂದಸ್ವಾಮಿ, ಕಲೀಂ, ಬೊಕ್ಕಹಳ್ಳಿ ನಂಜುಂಡಸ್ವಾಮಿ, ಬಾಲಾಜಿರಾವ್, ಜಗದೀಶ್ ಸೂರ್ಯ ಮೊದಲಾದವರು ಇದ್ದರು.
ಕೋಟ್...
- ದೇವನೂರ ಮಹಾದೇವ, ಹಿರಿಯ ಸಾಹಿತಿ