ಎನ್.ವಿಶ್ವನಾಥ್, ಶ್ರೀರಾಂಫುರ
ಕನ್ನಡಪ್ರಭ ವಾರ್ತೆ, ಹೊಸದುರ್ಗಶ್ರೀರಾಂಫುರ ಹೇಳೋಕೆ ತಾಲೂಕಿಗೆ ಅತಿ ದೊಡ್ಡ ಹೋಬಳಿ ಕೇಂದ್ರ, ಪ್ರಮುಖ ಧಾರ್ಮಿಕ ಕ್ಷೇತ್ರಗಳ ತವರೂ ಹೌದು ಆದರೆ, ಇಲ್ಲಿಗೆ ಬರುವ ಪ್ರಯಾಣಿಕರಿಗೆ ನಿಲ್ಲೋಕೆ ನೆರಳಿಲ್ಲ, ಕೂರೋಕೂ ಜಾಗವಿಲ್ಲ. ಕೋಟಿ ಖರ್ಚುಮಾಡಿ ನಿರ್ಮಾಣ ಮಾಡಿರುವ ಪ್ರಯಾಣಿಕರ ತಂಗುದಾಣ ಸಾರ್ವಜನಿಕರ ಸೇವೆಗೆ ಲಭ್ಯವಿಲ್ಲ. ಇದು ಹೊಸದುರ್ಗ ತಾಲೂಕಿನ ಅತಿ ದೊಡ್ಡ ಹೋಬಳಿ ಕೇಂದ್ರವೆನಿಸಿ ಕೊಂಡಿರುವ ಶ್ರೀರಾಂಪುರ ಹೋಬಳಿ ಕೇಂದ್ರ ಬಸ್ ನಿಲ್ದಾಣ ದುಸ್ಥಿತಿ.
ಶ್ರೀರಾಂಪುರ ಹೋಬಳಿ ಕೇಂದ್ರ ಸ್ಥಾನವಾಗಿರುವ ಕಾರಣ ಗ್ರಾಮೀಣ ಭಾಗದಿಂದ ಸರ್ಕಾರಿ ಕಛೇರಿ ಸೇರಿದಂತೆ ವ್ಯಾಪಾರ ವಹಿವಾಟಿಗೆ ಇಲ್ಲಿಗೆ ಜನ ಬರುತ್ತಾರೆ. ಅಲ್ಲದೆ ಇದೊಂದು ಧಾರ್ಮಿಕ ಕೇತ್ರವಾಗಿದ್ದು, ರಾಜ್ಯದಾದ್ಯಂತ ಪ್ರತಿದಿನ ಸಹಸ್ರಾರು ಮಂದಿ ಇಲ್ಲಿನ ಬಸ್ ನಿಲ್ದಾಣದಲ್ಲಿ ಬಂದು ಹೊಗುತ್ತಾರೆ. ಈಗೆ ಬರುವಂತಹ ಪ್ರಯಾಣಿಕರಿಗೆ ಬಸ್‌ಗಳು ಬರುವವರೆಗೂ ಕಾಯಲು ಸೂಕ್ತವಾದ ಪ್ರದೇಶವಿಲ್ಲ. ಬಸ್‌ಗಳನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸುವುದರಿಂದ ಪ್ರಯಾಣಿಕರಿಗೆ ಬಿಸಿಲು , ಮಳೆಯಿಂದ ರಕ್ಷಣೆಯಿಲ್ಲ. ಕೂರಲು ಜಾಗವಿಲ್ಲದಂತಾಗಿದೆ.ಸುಮಾರು 10 ವರ್ಷಗಳ ಹಿಂದೆ ಶಾಸಕರಾಗಿದ್ದ ಬಿ.ಜಿ.ಗೋವಿಂದಪ್ಪನವರು ಸುಮಾರು 50 ಲಕ್ಷ ರು. ವೆಚ್ಚದಲ್ಲಿ ಸುಸಜ್ಜಿತ ವಾದ ಬಸ್ ನಿಲ್ದಾಣ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ನಿರ್ಮಿತಿ ಕೇಂದ್ರಕ್ಕೆ ಹೊಣೆ ನೀಡಿದ್ದರು. ಆದರೆ ಅನುದಾನದ ಕೊರೆತೆಯಿಂದ ಅರ್ಧಕ್ಕೆ ನಿಂತಿತ್ತು, ನಂತರ ಬಂದ ಶಾಸಕ ಗೂಳೀಹಟ್ಟಿ ಶೇಖರ್ ಬಾಕಿ ಉಳಿದಿರುವ ಕಾಮಗಾರಿ ಪೂರ್ಣ ಗೊಳಿಸುವಂತೆ ನಿರ್ಮಿತಿ ಕೇಂದ್ರಕ್ಕೆ ಮತ್ತೊಂದು ಕೋಟಿ ಅನುದಾನ ನೀಡಿದರು. ಆದರೆ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಕೇವಲ ಮುಖ್ಯ ರಸ್ತೆಯಿಂದ ಬಸ್ ನಿಲ್ದಾಣದವರೆಗೆ ಕಾಂಕ್ರೀಟ್ ರಸ್ತೆ ಹಾಗೂ ನಿಲ್ದಾಣ ಆವರಣಕ್ಕೆ ಕಾಂಕ್ರೀಟ್ ಅಳವಡಿಸಿ ಅನುದಾನ ಮುಗಿಯಿತು ಎಂದು ಹೇಳಿ ಸುಮ್ಮನಾದರು. ಈಗ ಮತ್ತೆ ಬಿ.ಜಿ.ಗೋವಿಂದಪ್ಪನವರೇ ಶಾಸಕರಾಗಿ ಮತ್ತೆ ಆಯ್ಕೆ ಯಾಗಿ ಬಂದಿದ್ದಾರೆ. ಕಾಮಗಾರಿ ಪೂರ್ಣಗೊಳಿಸಲು ಮತ್ತೆ ಅನುದಾನವನ್ನು ಹಾಕಿದ್ದಾರೆಯಾದರೂ ಅದಿನ್ನೂ ಕಾರ್ಯಗತ ವಾಗಿಲ್ಲ.
ಈಗಾಗಲೇ ನಿರ್ಮಾಣಗೊಂಡಿರುವ ಬಸ್ ನಿಲ್ದಾಣ ನಿರ್ವಹಣೆಯಿಲ್ಲದೆ ಉದ್ಘಾಟನೆಗೂ ಮುನ್ನವೇ ಬಿರುಕು ಬಿಟ್ಟಿದೆ. ವಾಣಿಜ್ಯ ಮಳಿಗೆಗಳ ಷಟರ್‌ಗಳು ಹಾಳಾಗಿವೆ, ಮೇಲ್ಚಾವಣಿ ಸೋರಲಾರಂಭಿಸಿವೆ, ಶೌಚಾಲಯವಂತೂ ಕೇಳುವಂತಿಲ್ಲ ಯಾವಾಗ ಬೀಳೋತ್ತೋ ಎನ್ನುವಂತಾಗಿದೆ.ಹಳೆ ಬಸ್ ನಿಲ್ದಾಣ ಕಣ್ಮರೆ:
ಈ ಹಿಂದೆ ಇದ್ದ ತಂಗುದಾಣವನ್ನು ಪಟ್ಟಭದ್ರರು ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಳ್ಳುವ ಮೂಲಕ ಅದನ್ನೂ ಮುಚ್ಚಿ ಹಾಕಿದ್ದಾರೆ. ಅಲ್ಲದೆ ಮುಖ್ಯ ರಸ್ತೆಯನ್ನು ಅಂಗಡಿಯವರು ಒತ್ತುವರಿ ಮಾಡಿದ್ದಾರೆ. ಇದರಿಂದ ಬಸ್‌ಗಳಿಗಾಗಿ ಕಾಯುವ ಜನ ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ. ಹಳೆ ತಂಗುದಾಣವನ್ನು ಪೆಟ್ಟಿಗೆ ಅಂಗಡಿಯವರಿಂದ ಮುಕ್ತಗೊಳಿಸುವ ಸಾಮರ್ಥ್ಯ ಇಲ್ಲಿನ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಗಿಲ್ಲ. ಬಸ್ ನಿಲ್ದಾಣದಿಂದ ಬರುವ ಚಿಲ್ಲರೆ ಆದಾಯ ಮಾತ್ರ ಗ್ರಾಮಾಡ ಳಿತಕ್ಕೆ ಬೇಕು ಆದರೆ ಅಲ್ಲಿ ಪ್ರಯಾಣಿಕರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಇಚ್ಛಾಶಕ್ತಿ ಯಾವೊಬ್ಬ ಚುನಾಯಿತ ಪ್ರತಿನಿಧಿಗೂ ಇಲ್ಲದಿರುವುದು ವಿಪರ್ಯಾಸ.ಶ್ರೀರಾಂಪುರ ವ್ಯಾಪಾರಿ ವೈ.ಬಿ. ಮಂಜುನಾಥ್ ಮಾತನಾಡಿ, ಶ್ರೀರಾಂಪುರ ಎಂಬುದು ಹೆಸರಿಗೆ ಮಾತ್ರ ಹೋಬಳಿ ಕೇಂದ್ರ. ಇಲ್ಲಿ ಬಸ್ ನಿಲ್ದಾಣವೇ ಇಲ್ಲ. ಬಸ್‌ಗಳಲ್ಲಿ ಬರುವ ಮಹಿಳಾ ಪ್ರಯಾಣಿಕರ ಗೋಳೂ ಹೇಳತೀರದು. ಶೌಚಾಲಯ ಎಂಬುದು ಮರೀಚಿಕೆಯಾಗಿದೆ. ಬಿಲ್‌ಗಾಗಿ ಹಲವಾರು ಶೌಚಾಲಯ ಗಳನ್ನು ಮಾಡಿದ್ದಾರೆ ಅವ್ಯಾವೂ ಜನರಿಗೆ ಸಿಗುತ್ತಿಲ್ಲ. ಸುಡು ಬಿಸಿಲಿನಲ್ಲಿ ಬಸ್‌ಗಾಗಿ ಕಾಯುವ ಜನ ಇಲ್ಲಿನ ಗ್ರಾಮಾಡಳಿತಕ್ಕೆ ಹಿಡಿಶಾಪ ಹಾಕುತ್ತಾರೆ. ಇಲ್ಲಿ ಸ್ಥಳೀಯ ಆಡಳಿತ ಇದೆಯಾ? ಎಂಬುದೇ ಅನುಮಾನ ಎಂದು ಹೀಗಳೆದರು.
ಧಾರ್ಮಿಕ ಕ್ಷೇತ್ರಗಳ ನೆಲೆ: ಶ್ರೀರಾಂಪುರ ಐತಿಹಾಸಿಕ ಹಿನ್ನೆಲೆಯ ಪಾಳೇಗಾರಿಕೆಯ ಗ್ರಾಮ. ಈ ಕೇಂದ್ರಕ್ಕೆ ಹೊಂದಿಕೊಂಡಂತೆ ಪ್ರಮುಖ ಧಾರ್ಮಿಕ ಕ್ಷೇತ್ರ ಗಳಾದ ಗವಿರಂಗಾಪುರ ಕ್ಷೇತ್ರ, ಬೆಲಗೂರು ವೀರ ಪ್ರತಾಪ ಆಂಜನೇಯ ಕ್ಷೇತ್ರ, ಮೈಲಾರಪುರ ಕ್ಷೇತ್ರ, ಸೋಮಸಂದ್ರ ಆಂಜನೇಯಸ್ವಾಮಿ, ಕಡವಿಗೆರೆ ವಜ್ರ ಕ್ಷೇತ್ರವಲ್ಲದೆ ಸ್ಥಳೀಯವಾಗಿರುವ ಪರಪ್ಪಸ್ವಾಮಿ ಮಠ ಹಾಗೂ ಬೂದಾಳು ಬನಶಂಕರಿ ದೇವಾಲಯ ಇವುಗಳು ರಾಜ್ಯದಾದ್ಯಂತ ಸಹಸ್ರಾರು ಭಕ್ತರನ್ನು ಹೊಂದಿವೆ. ಇಲ್ಲಿಗೆ ಪ್ರತಿ ದಿನ ನೂರಾರು ಭಕ್ತರು, ಪ್ರವಾಸಿಗರು ಬಂದು ಹೊಗುತ್ತಾರೆ.