ಮಾರುತಿ ಶಿಡ್ಲಾಪೂರಕನ್ನಡಪ್ರಭ ವಾರ್ತೆ ಹಾನಗಲ್ಲ ಪರಿಸರ ಸ್ನೇಹಿ ಗಣೇಶನ ಮೂರ್ತಿ ತಯಾರಿಸುತ್ತಾ ಸುಮಾರು ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲದಿಂದ ಪರಿಸರಕ್ಕೆ ತಮ್ಮದೆ ಆದ ಕೊಡುಗೆ ನೀಡುತ್ತಿದ್ದಾರೆ ಮುಕಪ್ಪ ಚಕ್ರಸಾಲಿ (ಕುಂಬಾರ).ತಾಲೂಕಿನ ಅಜಗುಂಡಿಕೊಪ್ಪ ಗ್ರಾಮದ ನಿವಾಸಿಯಾಗಿರುವ ಇವರು, ಸುಮಾರು ಒಂದೂವರೆ ತಿಂಗಳ ಮುಂಚೆಯಿಂದ ವಿಶೇಷ, ವಿಭಿನ್ನ ಬಗೆಯ ಗಣೇಶ ಮೂರ್ತಿಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ. ತಮ್ಮ ಇಪ್ಪತ್ತನೇ ವಯಸ್ಸಿನಿಂದಲೇ ಗಣೇಶ ಮೂರ್ತಿ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪರಿಸರ ಸ್ನೇಹಿ ಮೂರ್ತಿ ತಯಾರಿಸುವಲ್ಲಿ ನಿಪುಣರಾಗಿರುವ ಇವರು ಇದುವರೆಗೂ ಮೂವತ್ತು ಸಾವಿರಕ್ಕೂ ಹೆಚ್ಚು ಮಣ್ಣು ಮುದ್ದೆಗೆ ರೂಪ ನೀಡಿದ್ದಾರೆ.ವಿನಾಯಕನ ವಿಭಿನ್ನ ರೂಪ: ಜನರ ಅಭಿರುಚಿಗೆ ತಕ್ಕಂತೆ ಮೂರ್ತಿ ಮಾಡುವುದರ ಜೊತೆಗೆ ಸುರುಳಿ ಆಕಾರದ ಹಾವಿನ ಮೇಲೆ ಕುಳಿತುಕೊಂಡಿರುವ ಗಣೇಶ, ಮಹಾರಾಜ ಅವತಾರ ಮೂರ್ತಿ, ನಂದಿಯ ಜತೆಯಲ್ಲಿ ಗಣೇಶ, ಇಡಗುಂಜಿ ಗಣೇಶ, ಕೊಳಲನ್ನು ಊದುತ್ತಿರುವ ಗಣೇಶ, ಈಶ್ವರನನ್ನು ಅಪ್ಪಿಕೊಂಡ ಗಣೇಶ, ಇಲಿಯ ಮೇಲೆ ಕುಳಿತ ಗಣೇಶ, ದೋಣಿ ವಿಹಾರಿ ಗಣೇಶ, ಸಿಂಹಾರೂಢ ಗಣೇಶ, ನಂದಿವಾಹನ ಗಣೇಶ, ಬಾಲ ಗಣೇಶ ಹೀಗೆ ಹಲವಾರು ರೀತಿಯ ಭಂಗಿಗಳ ವಿಘ್ನೇಶ್ವರ ಮೂರ್ತಿಗಳನ್ನು ಸಿದ್ಧಗೊಳಿಸಿದ್ದಾರೆ.ಮೂಡೂರು, ಹಿರೇಕಾಂಶಿ, ಗೊಂದಿ, ಆನವಟ್ಟಿ, ಮಕರವಳ್ಳಿ, ಕೊಂಡೋಜಿ, ಜಂಗಿನಕೊಪ್ಪ, ಮಾವಕೊಪ್ಪ, ಅಕ್ಕಿ ಆಲೂರು, ಹಾನಗಲ್ ಹೀಗೆ ಸುತ್ತಮುತ್ತಲಿನ ಗ್ರಾಮ ಹಾಗೂ ನಗರ ಪ್ರದೇಶಗಳಿಂದ ಈ ಕುಟುಂಬದ ಮೂರ್ತಿಗಳಿಗೆ ಬೇಡಿಕೆ ಇದೆ. ಪರಿಸರಕ್ಕೆ ಧಕ್ಕೆ ಆಗದಂತ ಬಣ್ಣ ಸೇರಿದಂತೆ ಇತರೆ ಕಚ್ಚಾ ವಸ್ತುಗಳನ್ನೇ ಬಳಸುವ ಮೂಲಕ ಚಕ್ರಸಾಲಿ(ಕುಂಬಾರ) ಕುಟುಂಬ ಕಾಳಜಿ ಮೆರೆಯುತ್ತಿದೆ.ಕುಟುಂಬದವರ ಸಾಥ್: ಮನೆಗಳಲ್ಲಿ ಪ್ರತಿಷ್ಠಾಪನೆಗೆ ತಯಾರಿಸುವ ಚಿಕ್ಕ ಗಣೇಶ ಮೂರ್ತಿಗಳನ್ನು ತಯಾರಿಸಲು ೨ರಿಂದ ೩ ದಿನ ಬೇಕಾಗುತ್ತದೆ. ಹಾಗೇ ಸಾರ್ವಜನಿಕ ಗಣೇಶೋತ್ಸವಕ್ಕೆ ತಯಾರಿಸುವ ಗಣೇಶ ಮೂರ್ತಿಗಳು ೪ರಿಂದ ೬ ದಿನಗಳು ಬೇಕಾಗುತ್ತವೆ. 1 ಅಡಿಯಿಂದ ನಾಲ್ಕೈದು ಅಡಿಗಳವರೆಗಿನ ಮೂರ್ತಿ ತಯಾರಿಸಿ ಕನಿಷ್ಠ ₹೫೦೦ - ₹೩೦೦೦ ವರೆಗೆ ಮೂರ್ತಿಗಳ ದರ ನಿಗದಿ ಮಾಡಿದ್ದಾರೆ. ಈ ಕಾರ‍್ಯಕ್ಕೆ ಪತ್ನಿ ಶಾಂತವ್ವ, ಸೊಸೆ ಪುಷ್ಪಾ, ಮಗ ಚನ್ನಬಸಪ್ಪ ಕೈಯಾಸರೆ ಆಗಿದ್ದಾರೆ.ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳು ಪೂಜೆಗೆ ಶ್ರೇಷ್ಠ. ಹಾಗಾಗಿ ನಾವು ಮುಕಪ್ಪ ಕುಂಬಾರ ತಯಾರಿಸಿದ ಮಣ್ಣಿನ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುತ್ತೇವೆ ಎನ್ನುತ್ತಾರೆ. ಗ್ರಾಹಕ ಮನೋಜ ಪಾಟೀಲ.
ಪರಿಸರಕ್ಕೆ ಪೂರಕವಾಗಿರುವಂತೆ ಮಣ್ಣಿನಿಂದಲೇ ಗಣೇಶನ ಮೂರ್ತಿಯನ್ನು ತಯಾರಿಸುತ್ತೇನೆ. ಸಂಘ-ಸಂಸ್ಥೆಯವರು ಮೊದಲೇ ಆರ್ಡರ್ ಮಾಡಿ ವಿಭಿನ್ನ ಶೈಲಿಯಲ್ಲಿ ಗಣೇಶನ ಮೂರ್ತಿಯನ್ನು ಮಾಡಿಸಿಕೊಳ್ಳುತ್ತಾರೆ ಎನ್ನುತ್ತಾರೆ ಮೂರ್ತಿ ತಯಾರಕ ಮೂಕಪ್ಪಚಕ್ರಸಾಲಿ (ಕುಂಬಾರ) ಹೇಳುತ್ತಾರೆ.