ಬೌದ್ಧಿಕ ಆಸ್ತಿಯ ಹಕ್ಕಿನ ರಕ್ಷಣೆಯಿಂದ ಆರ್ಥಿಕ ಬೆಳವಣಿಗೆ

KannadaprabhaNewsNetwork | Published : Jun 8, 2024 12:31 AM

ಸಾರಾಂಶ

ಬೌದ್ಧಿಕ ಆಸ್ತಿಯ ಹಕ್ಕಿನ ಪ್ರಚಾರ ಮತ್ತು ರಕ್ಷಣೆ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಹೊಸ ಉದ್ಯೋಗಗಳು ಮತ್ತು ಉದ್ಯಮಗಳನ್ನು ಸೃಷ್ಟಿಸುತ್ತದೆ ಮತ್ತು ಜೀವನದ ಗುಣಮಟ್ಟ ಹೆಚ್ಚಿಸುತ್ತದೆ ಎಂದು ಕೆಎಸ್‌ಸಿಎಸ್‌ಟಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಯು.ಟಿ.ವಿಜಯ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೌದ್ಧಿಕ ಆಸ್ತಿಯ ಹಕ್ಕಿನ ಪ್ರಚಾರ ಮತ್ತು ರಕ್ಷಣೆ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ. ಹೊಸ ಉದ್ಯೋಗಗಳು ಮತ್ತು ಉದ್ಯಮಗಳನ್ನು ಸೃಷ್ಟಿಸುತ್ತದೆ ಮತ್ತು ಜೀವನದ ಗುಣಮಟ್ಟ ಹೆಚ್ಚಿಸುತ್ತದೆ ಎಂದು ಕೆಎಸ್‌ಸಿಎಸ್‌ಟಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಯು.ಟಿ.ವಿಜಯ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಕೆ.ಎಸ್‌.ಸಿ.ಎಸ್.ಟಿ ಸಹಯೋಗದೊಂದಿಗೆ ಬೌದ್ಧಿಕ ಆಸ್ತಿ ಹಕ್ಕು ಮಾಹಿತಿ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಯೋಗಕ್ಷೇಮಕ್ಕಾಗಿ ವೇಗವರ್ಧಕವಾಗಿ ಬೌದ್ಧಿಕ ಆಸ್ತಿ ಹಕ್ಕು ಕೆಲಸ ಮಾಡುತ್ತದೆ. ಒಂದು ರಾಷ್ಟ್ರದ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಮರ್ಥ ಮತ್ತು ಸಮಂಜಸವಾದ ಬೌದ್ಧಿಕ ಆಸ್ತಿ ಹಕ್ಕಿನ ವ್ಯವಸ್ಥೆಯು ಎಲ್ಲ ದೇಶಗಳಿಗೆ ಸಹಾಯ ಮಾಡುತ್ತದೆ. ಬೌದ್ಧಿಕ ಆಸ್ತಿ ವ್ಯವಸ್ಥೆಯು ಹೊಸತನದ ಮತ್ತು ಸಾರ್ವಜನಿಕ ಹಿತಾಸಕ್ತಿಗಳ ನಡುವಿನ ಸಮತೋಲನವನ್ನು ತಡೆಗಟ್ಟುತ್ತದೆ. ಎಲ್ಲರ ಅನುಕೂಲಕ್ಕಾಗಿ ಸೃಜನಶೀಲತೆ ಮತ್ತು ಆವಿಷ್ಕಾರವು ವೃದ್ಧಿಯಾಗಬಲ್ಲ ಪರಿಸರವನ್ನು ಒದಗಿಸುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂದು ರಾಷ್ಟ್ರದ ಗೌರವವನ್ನು ಮತ್ತು ಬೇಡಿಕೆ ಹೆಚ್ಚಿಸುತ್ತದೆ ಎಂದು ತಿಳಿಸಿದರು.ಭಾರತಕ್ಕೆ ಇದನ್ನು ಸಾಧಿಸಲು ಈ ರೀತಿಯ ಪ್ರೋತ್ಸಾಹದ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಟಿಯು ಈಐಪಿಆರ್ ಕೇಂದ್ರವನ್ನು ಉದ್ಘಾಟಿಸುವುದರೊಂದಿಗೆ ವಿದ್ಯಾರ್ಥಿಗಳ ಶ್ರೇಷ್ಠ ಭವಿಷ್ಯಕ್ಕೆ ಬುನಾದಿ ಹಾಕಿದೆ. ಈ ನಿಟ್ಟಿನಲ್ಲಿ ಕೆಎಸ್‌ಸಿಎಸ್‌ಟಿ ಬೌದ್ಧಿಕ ಆಸ್ತಿ ಹಕ್ಕುಗಳ ನೋಂದಣಿ, ಅರಿವು ಮತ್ತು ವಾಣಿಜ್ಯೀಕರಣ ಕುರಿತಂತೆ ವಿಟಿ ಯುನ ವಿದ್ಯಾರ್ಥಿಗಳಿಗೆ ಸಹಾಯ ಮಾಡಲಿದೆ ಎಂದರು.ವಿಟಿಯು ಕುಲಪತಿ ಪ್ರೊ.ವಿದ್ಯಾಶಂಕರ್‌.ಎಸ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಐಪಿಆರ್ ಕೇಂದ್ರವು ಕೇವಲ ವಿಟಿಯುಗೆ ಸೀಮಿತವಾಗದೇ ಎಲ್ಲ ಸಂಯೋಜಿತ ಕಾಲೇಜುಗಳಿಗೆ ಕೆಲಸ ಮಾಡುತ್ತದೆ ಮತ್ತು ಪೇಟೆಂಟ್, ಐಪಿ ನೋಂದಣಿ ಮತ್ತು ವಾಣಿಜ್ಯೀಕರಣದ ಸಾಧ್ಯತೆಗಳ ಬಗ್ಗೆ ತಿಳಿಸಿ ಮಾರ್ಗದರ್ಶನ ಮಾಡಲಿದೆ ಎಂದರು.ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ಹೇಗೆ ಸ್ವಾವಲಂಬಿ ರಾಷ್ಟ್ರದ ನಿರ್ಮಾಣದಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸ್ತುತ ಜಗತ್ತಿನಲ್ಲಿ ಸುಸ್ಥಿರ ಮತ್ತು ಸ್ವಾವಲಂಬಿ ಸಮಾಜ ಅಥವಾ ದೇಶವನ್ನು ಹೊಂದಲು ಇಂತಹ ಕೇಂದ್ರಗಳ ಅವಶ್ಯಕವಾಗಿದೆ ಎಂದರು.ವಿದ್ಯಾರ್ಥಿಯ ಸೃಜನಶೀಲತೆ ಅಥವಾ ಹೊಸ ಆಲೋಚನಾ ಸಾಮರ್ಥ್ಯವು ವಿದ್ಯಾರ್ಥಿಗಳನ್ನು ತರಗತಿ ಕೊಠಡಿಯಿಂದ ಬೋರ್ಡ್ ಕೋಣೆಗೆ (ಸ್ಟಾರ್ಟ್-ಆಪ್‌ಗಳು) ಕರೆತರುವ ಅಂದರೆ ಅವರನ್ನು ಸ್ವಯಂ ಉದ್ಯೋಗಿಗಳನ್ನಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆದ್ದರಿಂದ ಜವಾಬ್ದಾರಿ ಸ್ಥಾನದಲ್ಲಿರುವ ನಾವೆಲ್ಲರೂ ರಾಷ್ಟ್ರವನ್ನು ಸ್ವಾವಲಂಬಿಯನ್ನಾಗಿಸಲು ಸೃಜನಶೀಲತೆಯನ್ನು ಉತ್ತೇಜಿಸುವ ಅತ್ಯಾಧುನಿಕ ಮೂಲಸೌಕರ್ಯವನ್ನು ನಮ್ಮ ಯುವ ಜನತೆಗೆ ವಹಿಸಿಕೊಡಬೇಕು ಎಂದು ತಿಳಿಸಿದರು.ಇದೇ ವೇಳೆ ವಿಟಿಯು ಮತ್ತು ಕೆ.ಎಸ್‌.ಸಿ.ಎಸ್.ಟಿ ಒಡಂಬಡಿಕೆಗೆ ಸಹಿ ಹಾಕಲಾಯಿತು. ಈ ಸಂದರ್ಭದಲ್ಲಿ ವಿಟಿಯು ಕುಲಸಚಿವರಾದ ಪ್ರೊ. ಬಿ.ಈ.ರಂಗಸ್ವಾಮಿ, ವಿಟಿಯು ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ.ಬಸವಕುಮಾರ್ ಕೆ.ಜಿ, ಕೆಎಸ್‌ಸಿಎಸ್‌ಟಿ ಐ.ಪಿ.ಆಟರ್ನಿ, ವಿವೇಕ್ ಆನಂದ ಸಾಗರ ಮತ್ತು ನಾಗಾರ್ಜುನ, ವಿನೀತ್ ಕುಮಾರ್ ಉಪಸ್ಥಿತರಿದ್ದರು. ಪ್ರೊ.ಮೇಘಾ ಗಲಗಲಿ ನಿರೂಪಿಸಿದರು. ವಿಶೇಷಾಧಿಕಾರಿ ಪ್ರೊ.ವಿರೂಪಾಕ್ಷಪ್ಪ ಬೆಟಗೇರಿ ವಂದಿಸಿದರು.

Share this article