ಶಿವಮೊಗ್ಗ: ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸಿ ತಾಯಿ ಹಾಗೂ ಮಗುವಿನ ಪ್ರಾಣವನ್ನು ಉಳಿಸಿದ ಕೀರ್ತಿ ಸಹ್ಯಾದ್ರಿ ನಾರಾಯಣ ಹೃದಯಾಲಯ ಆಸ್ಪತ್ರೆಯ ಪ್ರಸೂತಿ ವಿಭಾಗದ ವೈದ್ಯರಿಗೆ ಸಲ್ಲಲಿದೆ ಎಂದು ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ತಜ್ಞ ವೈದ್ಯ ಡಾ.ರಾಘವೇಂದ್ರ ಭಟ್ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 37 ವರ್ಷ ವಯಸ್ಸಿನ 7 ತಿಂಗಳು ತುಂಬಿದ ಗರ್ಭೀಣಿ ಅತ್ಯಂತ ಸಂದಿಗ್ಧ ಸಮಸ್ಯೆಯೊಂದಿಗೆ ನಮ್ಮ ಆಸ್ಪತ್ರೆಗೆ ಬಂದಿದ್ದರು. ಅವರನ್ನು ಪರೀಕ್ಷೆ ಮಾಡಿದಾಗ ಅವರಿಗೆ ಗರ್ಭಾವಸ್ಥೆಯಲ್ಲಿ ಗರ್ಭ ಚೀಲದ ಒಳಗೆ ಇರಬೇಕಾದ ಪ್ಲಾಸೆಂಟಾ ಗರ್ಭಕೋಶವನ್ನು ಛೇಧಿಸಿಕೊಂಡು ಹೊರಗೆ ಹೋಗಿದ್ದರಿಂದ ತಾಯಿಯ ಜೀವಕ್ಕೆ ಅಪಾಯ ಖಚಿತವಾಗಿತ್ತು. ಇದು ಎಂತಹ ಗಂಭೀರ ಸಮಸ್ಯೆಯೆಂದರೆ ಮುಂದುವರಿದ ಅಮೇರಿಕಾದಂತಹ ದೇಶದಲ್ಲಿಯೂ ಕೂಡ ಇಂತಹ ಸಮಸ್ಯೆಯಿರುವ ಶೇ.7ರಷ್ಟು ಗರ್ಭೀಣಿ ಮಹಿಳೆಯರು ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿಸಿದರು.ಭಾರತದಲ್ಲಿಯೂ ಕೂಡ ಶೇ.15ರಷ್ಟು ಮಹಿಳೆಯರು ಪ್ರಾಣ ಬಿಟ್ಟಿದ್ದಾರೆ. ಇಂತಹ ಬಹುದೊಡ್ಡ ಸಮಸ್ಯೆಯನ್ನು ಆಸ್ಪತ್ರೆಯ ನಮ್ಮ ವೈದ್ಯರ ಮತ್ತು ಸಿಬ್ಬಂದಿಗಳ ತಂಡ ಎದುರಿಸಲು ಸಿದ್ಧವಾಗಿತ್ತು. ನುರಿತ ವೈದ್ಯರ ತಂಡವು ಅತ್ಯಾಧುನಿಕ ಯಂತ್ರೋಪಕರಣಗಳ ಸಹಾಯದಿಂದ ಅತಿ ಕ್ಲಿಷ್ಟಕರವಾದ ಜೀವಕ್ಕೆ ಅಪಾಯ ತಂದೊಡ್ಡಿದ್ದ, ಈ ಶಸ್ತ್ರಚಿಕಿತ್ಸೆಯನ್ನು ಹಗಲು ರಾತ್ರಿ ಶ್ರಮಿಸಿ ಯಶಸ್ವಿಯಾಗಿ ಪೂರೈಸಿದೆವು ಇಂತಹ ಶಸ್ತ್ರ ಚಿಕಿತ್ಸೆಯನ್ನು ಮಾಡುವಾಗ ನಮ್ಮ ತಂಡದಲ್ಲಿ ಪ್ರಸೂತಿ ತಜ್ಞರು, ಮೂತ್ರಕೂಶ ತಜ್ಞರು, ಅರವಳಿಕೆ ತಜ್ಞರು ಸೇರಿದಂತೆ ಹಲವರು ಇದ್ದರು ಎಂದು ವಿವರಿಸಿದರು.
ಮುಖ್ಯವಾಗಿ ಈ ಶಸ್ತ್ರ ಚಿಕಿತ್ಸೆ ಮಾಡುವಾಗ ರಕ್ತ ಹೆಚ್ಚಾಗಿ ಹೊರಗೆ ಬರುತ್ತಿತ್ತು. ಇದನ್ನು ತಡೆಗಟ್ಟುವುದೇ ವೈದ್ಯರಿಗೆ ಒಂದು ದೊಡ್ಡ ಸವಾಲಾಗಿತ್ತು. ಸುಮಾರು ೮೦ ಬಾಟಲಿ ರಕ್ತವನ್ನು ನಾವು ಈ ಶಸ್ತ್ರಚಿಕಿತ್ಸೆಗೆ ಬಳಸಿದ್ದೇವೆ. ರೇಡಿಯಾಲಾಜಿಸ್ಟ್ ಸಹಾಯದಿಂದ ಗರ್ಭಕೋಶಕ್ಕೆ ರಕ್ತಪೂರೈಸುವ ಎರಡು ಮುಖ್ಯ ಧಮನಿಗಳನ್ನು ಬ್ಲಾಕ್ ಮಾಡಿ ಕೂಡಲೇ ಮಗುವನ್ನು ಹೊರ ತೆಗೆದು ಗರ್ಭೀಣಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಗರ್ಭಕೋಶದ ಸಮೇತ ತೆಗೆಯಲಾಯಿತು. ನಂತರ ಬ್ಲಾಕ್ ಮಾಡಿದ ಧಮನಿಗಳನ್ನು ಕಟ್ಟಿ ಶಸ್ತ್ರಚಿಕಿತ್ಸೆ ಯಶಸ್ವಿಗೊಳಿಸಲಾಯಿತು ಎಂದು ಮಾಹಿತಿ ನೀಡಿದರು.ಬಹುಶಃ ಇಂತಹ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ಮಾಡುವಾಗ ವೈದ್ಯರಾದ ನಾವು ಕೂಡ ದೇವರ ಮೊರೆ ಹೋದೆವು. ಮನುಷ್ಯನ ಭಾವನೆಗಳ ಮೀಟಿ ಈ ಆಪರೇಷನ್ ಮಾಡಲಾಯಿತು. ಇದೊಂದು ಅಪರೂಪದಲ್ಲಿ ಅಪರೂಪದ ಕೇಸಾಗಿತ್ತು. ಅಲ್ಲದೇ ವಿಶ್ವದರ್ಜೆಯ ಶಸ್ತ್ರ ಚಿಕಿತ್ಸೆ ಕೂಡ ಇದಾಗಿದೆ. ಇಂತಹ ಆಪರೇಷನ್ ಯಶಸ್ವಿಯಾಗಲು ತೀವ್ರ ನಿಗಾಘಟಕ ಸೇರಿದಂತೆ ಎಲ್ಲಾ ರೀತಿಯ ಆಧುನಿಕ ಉಪಕರಣಗಳು ಮತ್ತು ನುರಿತ ತಜ್ಞರು ಇರುವುದರಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.ಕೊಲ್ಲಾಪುರದಲ್ಲಿ ನಡೆದ ರಾಷ್ಟ್ರೀಯ ವೈದ್ಯರ ಸಮ್ಮೇಳನದಲ್ಲಿ ಈ ಆಪರೇಷನ್ ಕುರಿತು ಸಂಶೋಧ ಪ್ರಬಂಧ ಮತ್ತು ವೀಡಿಯೋ ಪ್ರದರ್ಶನ ಮಾಡಿದಾಗ ಅಲ್ಲಿನ ವೈದ್ಯರೇ ಬೆರಗಾದರು. ಅಷ್ಟೇ ಅಲ್ಲ ಅಲ್ಲಿ ಹಾಜರಿದ್ದ ಅಮೇರಿಕಾದ ವೈದ್ಯರು ಕೂಡ ಈ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ. ಇದು ನಮಗೆ ಅತ್ಯಂತ ಸಂಭ್ರಮ ತಂದಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಎಸ್.ಎನ್. ಶೈಲೇಶ್ ಇದ್ದರು.ರಾಜ್ಯದಲ್ಲಿ ಬಾಣಂತಿ ಸಾವಿನ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ಓದಿದ್ದೆ. ಬೇರೆ ಆಸ್ಪತ್ರೆಗಳಿಂದ ಕೊನೆ ಘಳಿಗೆಯಲ್ಲಿ ನಮಗೂ 2 ರೋಗಿಗಳ ಬಗ್ಗೆ ಶಿಫಾರಸ್ಸುಗಳು ಬಂದಿದ್ದವು. ನಂಜಿನಿಂದಾಗಿ ರೋಗಿಗಳು ಬಳಲುತ್ತಿದ್ದರು. ಮುಂಚಿತವಾಗಿ ಪ್ಲಾನ್ ಮಾಡದೆ ಶಸ್ತ್ರ ಚಿಕಿತ್ಸೆ ಮಾಡಬಾರದು. ಫೋಕ್ಸಿ ಎಂಬ ರಾಷ್ಟ್ರ ಮಟ್ಟದ ತಮ್ಮ ಸಂಘ ಮತ್ತು ಕಸೊಗಾ ಎಂಬ ರಾಜ್ಯ ಮಟ್ಟದ ಸಂಘಗಳು ಬಾಣಂತಿ ಸಾವಿನ ಪ್ರಕರಣ ತಡೆಗಟ್ಟುವ ಕೆಲಸ ಮಾಡಬೇಕು. ಬಹುಶ: ಅದು ನಮ್ಮ ಸಂಘದಿಂದ ಸಾಧ್ಯವಿಲ್ಲ ಎಂದು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ.ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.