ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಲೋಕಾಯುಕ್ತ ಪೊಲೀಸರು ಸಲ್ಲಿಕೆ ಮಾಡಿರುವ ಬಿ ರಿಪೋರ್ಟ್ ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಐದು ಪುಟಗಳ ತಕರಾರು ಅರ್ಜಿಯಲ್ಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ನಡೆದಿರುವುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಈ ಬಗ್ಗೆ ವಿಸ್ತೃತ ತನಿಖೆಯಾಗಬೇಕಿರುವ ಕಾರಣ ವರದಿ ತಿರಸ್ಕರಿಸಬೇಕು ಎಂದು ಮನವಿ ಮಾಡಿದೆ. ಸುಮಾರು 4 ರಿಂದ 5 ಅಂಶಗಳನ್ನು ಪ್ರಸ್ತಾಪಿಸಿರುವ ಇ.ಡಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸರು ತನಿಖೆ ವೇಳೆ ಈ ಅಂಶಗಳನ್ನು ಪರಿಗಣಿಸಿಲ್ಲ. ಹೀಗಾಗಿ ತನಿಖೆ ಸಮರ್ಪಕ ಅಲ್ಲ ಎಂದು ಇಡಿ ಉಲ್ಲೇಖಿಸಿದೆ.
ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂ.464 ರಲ್ಲಿ 3 ಎಕರೆ 16 ಗುಂಟೆ ಜಮೀನನ್ನು ಮುಡಾದಿಂದ ಎಲ್ ಆ್ಯಂಡ್ ಟಿ ಸಂಸ್ಥೆ ನಿವೇಶನವನ್ನಾಗಿ ಅಭಿವೃದ್ಧಿಪಡಿಸಿತ್ತು. ಬಳಿಕ ಮಲ್ಲಿಕಾರ್ಜುನ ಸ್ವಾಮಿಯವರು ದೇವರಾಜ ಅವರಿಂದ ಈ ಜಮೀನನ್ನು ಖರೀದಿ ಮಾಡಿದ್ದಾರೆ ಎಂದು ಇ.ಡಿ ಆರೋಪಿಸಿದೆ. ದೂರುದಾರ ಸ್ನೇಹಮಯಿ ಕೃಷ್ಣ ಅವರು ಸಹ ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಇ.ಡಿ ಸಹ ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ಪ್ರಶ್ನಿಸಿರುವುದರಿಂದ ಪ್ರಕರಣಕ್ಕೆ ಮತ್ತಷ್ಟು ಬಲ ಬರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಮುಡಾ ಕೇಸಿ: ನಟೇಶ್ ಬಿಟ್ಟು ಇತರರ ತನಿಖೆಗೆ ಅನುಮತಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) 14 ಬದಲಿ ನಿವೇಶನ ಹಂಚಿಕೆ (ಸದ್ಯ ವಾಪಸ್ ಪಡೆದಿರುವ) ಮಾಡಿದ ಪ್ರಕರಣದಲ್ಲಿ ಮುಡಾ ಮಾಜಿ ಆಯುಕ್ತ ಡಾ। ಬಿ.ಬಿ.ನಟೇಶ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಜಾರಿಗೊಳಿಸಿದ್ದ ಸಮನ್ಸ್ ರದ್ದುಪಡಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪಿಗೆ ತಡೆ ನೀಡಲು ವಿಭಾಗೀಯ ಪೀಠ ನಿರಾಕರಿಸಿದೆ. ಜತೆಗೆ, ಪ್ರಕರಣದ ಇತರೆ ಆರೋಪಿಗಳ ವಿರುದ್ಧ ತನಿಖೆ ನಡೆಸಲು ಇ.ಡಿಗೆ ಅನುಮತಿಸಿದೆ.ಏಕಸದಸ್ಯ ನ್ಯಾಯಪೀಠದ ಆದೇಶ ರದ್ದುಪಡಿಸಲು ಕೋರಿ ವಿಭಾಗೀಯ ಪೀಠಕ್ಕೆ ಇ.ಡಿ ಮೇಲ್ಮನವಿ ಸಲ್ಲಿಸಿತ್ತು.
ಈ ಮೇಲ್ಮನವಿಯಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿತ್ತು.ಮಧ್ಯಂತರ ಅರ್ಜಿ ಇತ್ಯರ್ಥಪಡಿಸಿರುವ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂಬ ಮನವಿ ಪುರಸ್ಕರಿಸಲಾಗದು. ಆದರೆ, ಪ್ರಕರಣದಲ್ಲಿ ಇತರೆ ಆರೋಪಿಗಳ ವಿರುದ್ಧದ ತನಿಖೆಯನ್ನು ನಿರ್ಬಂಧಿಸಲಾಗದು. ಹೀಗಾಗಿ, ತನಿಖೆ ಮುಂದುವರಿಸಲು ಇ.ಡಿಗೆ ಅನುಮತಿಸಲಾಗಿದೆ. ನಟೇಶ್ ಅವರ ಮನೆ ಶೋಧದ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ ದಾಖಲೆಗಳು ಮತ್ತು ಅವರ ಹೇಳಿಕೆ ದಾಖಲಿಸಿಕೊಂಡಿರುವುದನ್ನು ಬಾಕಿ ತನಿಖೆಗೆ ಕಾನೂನು ಅನ್ವಯ ಬಳಕೆ ಮಾಡಿಕೊಳ್ಳಬಹುದು ಎಂದು ಆದೇಶಿಸಿದೆ. ಇದರಿಂದ ಮುಡಾ ಪ್ರಕರಣದಲ್ಲಿ ಇತರೆ ಆರೋಪಿಗಳ ವಿರುದ್ಧದ ತನಿಖೆ ಮುಂದುವರಿಸಲು ಇ.ಡಿಗೆ ಹಸಿರು ನಿಶಾನೆ ಸಿಕ್ಕಂತಾಗಿದೆ.
ತನಿಖೆಗೆ ಏಕೆ ಅನುಮತಿ?:ತನಿಖಾ ಸಂಸ್ಥೆ ನಡೆಸುತ್ತಿರುವ ತನಿಖಾ ಪ್ರಕ್ರಿಯೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಬಾರದು ಎಂದು ಸ್ಥಾಪಿತ ಕಾನೂನು ಹೇಳುತ್ತದೆ. ಹಣದ ಅಕ್ರಮ ಸಾಗಣೆ ತಡೆ ಕಾಯ್ದೆಯಡಿ ಅಪರಾಧವಾಗಲಿ ಅಥವಾ ಮತ್ಯಾವುದೇ ಅಪರಾಧ ಸಂಬಂಧ ತನಿಖೆ ಮುಂದುವರಿಸಲು ಅನುಮತಿಸುವುದು ಈ ನೆಲದ ಕಾನೂನಿನ ಭಾಗ. ಪ್ರಕರಣದಲ್ಲಿ ಇತರೆ ವ್ಯಕ್ತಿಗಳಿಗೆ ಸಂಬಂಧಿಸಿ ತನ್ನ ತನಿಖೆ ಮುಂದುವರಿಸಲು ಇ.ಡಿಗೆ ಅನುಮತಿಸದೆ ಇರಲು ಯಾವುದೇ ಸರಿಯಾದ ಕಾರಣಗಳಿಲ್ಲ ಎಂದು ಪೀಠ ಆದೇಶದಲ್ಲಿ ಹೇಳಿದೆ.
ಏಕಸದಸ್ಯ ಪೀಠದ ಆದೇಶದ ಕಾನೂನುಬದ್ಧತೆ ಮತ್ತು ಸೂಕ್ತತೆ ಕುರಿತು ಮುಂದೆ ಪರಿಗಣಿಸಬೇಕಿದೆ. ಈ ಮಧ್ಯೆ ಇ.ಡಿ ತನಿಖೆಯಲ್ಲಿ ಮಧ್ಯಪ್ರವೇಶ ಮಾಡುವುದು ಸೂಕ್ತವಲ್ಲ. ಅಪರಾಧದ ತನಿಖೆ ಸ್ಥಗಿತಗೊಳಿಸಲು ಬಿಡಬಾರದು. ಅದರಲ್ಲೂ ವಿಲಕ್ಷಣ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ತನಿಖೆ ಮುಂದುವರಿಸಲು ಇ.ಡಿಗೆ ಅನುಮತಿ ನೀಡಬೇಕಾಗಿದೆ. ಹಗರಣಕ್ಕೆ ಸಂಬಂಧಿಸಿ ಪಿಎಂಎಲ್ ಕಾಯ್ದೆಯಡಿ ತನಿಖೆಗೆ ಅಡ್ಡಿಯಾಗಬಾರದು ಅಥವಾ ತಡೆಹಿಡಿಯಬಾರದು. ಅದರಂತೆ ಪ್ರಕರಣದ ಇತರೆ ಆರೋಪಿಗಳ ವಿರುದ್ಧದ ತನಿಖೆ ನಡೆಸಲು ಇ.ಡಿಗೆ ಅನುಮತಿ ನೀಡಲಾಗುತ್ತಿದೆ ಎಂದು ವಿಭಾಗೀಯ ಪೀಠ ತೀರ್ಪಿನಲ್ಲಿ ಹೇಳಿದೆ.
ಏಕಸದಸದ್ಯ ಪೀಠದ ಆದೇಶಕ್ಕೆ ತಡೆ ನಕಾರ:
ಮೇಲ್ಮನವಿಯಲ್ಲಿ ಇ.ಡಿ ಮಂಡಿಸಿರುವ ವಾದ ಒಪ್ಪಲಾಗದು. ಈಗಾಗಲೇ ತನಿಖೆ ಸಂಸ್ಥೆ ಮುಂದೆ ನಟೇಶ್ ನೀಡಿರುವ ಹೇಳಿಕೆ ಹಿಂಪಡೆಯಬಹುದೇ ಎಂಬ ವಿಚಾರವನ್ನು ಮೇಲ್ಮನವಿ ವಿಚಾರಣೆ ಸಂದರ್ಭದಲ್ಲಿ ವಿಸ್ತೃತ ನೆಲೆಯಲ್ಲಿ ಪರಿಗಣಿಸಬೇಕಿದೆ. ಹಾಗಾಗಿ, ಸದ್ಯ ನಟೇಶ್ ವಿರುದ್ಧದ ಇ.ಡಿ ಜಾರಿ ಮಾಡಿದ್ದ ಸಮನ್ಸ್ ರದ್ದುಪಡಿಸಿರುವ ಏಕಸದಸ್ಯ ನ್ಯಾಯಪೀಠದ ಆದೇಶಕ್ಕೆ ತಡೆ ನೀಡಲಾಗುತ್ತಿಲ್ಲ. ನಟೇಶ್ ಪ್ರಕರಣ ಬಾಕಿ ಉಳಿದಿರುವುದರಿಂದ ಅವರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆಕ್ಷೇಪಾರ್ಹ ಏಕಸದಸ್ಯ ಪೀಠದ ಆದೇಶದ ಹೊರತಾಗಿ ಪಿಎಂಎಲ್‌ಎ ಅಡಿ ಕಾನೂನು ಅನ್ವಯ ತನಿಖೆಗೆ ಅನುಮತಿಸಲಾಗಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ:ಮುಡಾ ಪ್ರಕರಣ ಸಂಬಂಧ ನಟೇಶ್ ಅವರ ಮನೆಯಲ್ಲಿ 2024ರ ಅ.28 ಮತ್ತು 29ರಂದು ಇ.ಡಿ.ಶೋಧ ನಡೆಸಿತ್ತು. ಜೊತೆಗೆ ನಟೇಶ್ ಹೇಳಿಕೆ ದಾಖಲಿಸಿಕೊಂಡಿತ್ತು. ಅ.29 ಮತ್ತು ನ.6ರಂದು ಸಮನ್ಸ್ ಜಾರಿ ಮಾಡಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ನಟೇಶ್ ತಕರಾರು ಅರ್ಜಿ ಸಲ್ಲಿಸಿದ್ದರು. ಸಮನ್ಸ್ ರದ್ದುಪಡಿಸಿದ್ದ ಏಕಸದಸ್ಯ ಪೀಠ, ಇ.ಡಿ. ಮುಂದೆ ನಟೇಶ್ ನೀಡಿರುವ ಹೇಳಿಕೆ ಹಿಂಪಡೆಯಲಾಗಿದೆ. ಇ.ಡಿ.ಯು ನಟೇಶ್ ಮನೆಯಲ್ಲಿ ನಡೆಸಿರುವ ಶೋಧ ಅಕ್ರಮವೆಂದು 2025ರ ಜ.27ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಇ.ಡಿ. ಮೇಲ್ಮನವಿ ಸಲ್ಲಿಸಿತ್ತು.