ಕನ್ನಡಪ್ರಭ ವಾರ್ತೆ ಮಂಗಳೂರು
ಯಕ್ಷಗಾನಕ್ಕೆ ಒಂದು ವಿಶ್ವವಿದ್ಯಾನಿಲಯ ಇದೆ ಎಂದು ಕಲ್ಪಿಸಿಕೊಂಡರೆ ಖಂಡಿತವಾಗಿಯೂ ಅದು ಎಡನೀರು ಶ್ರೀಮಠ ಎಂದು ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಸಮಿತಿಯ ಅಧ್ಯಕ್ಷ ಡಾ ಶ್ರೀಪತಿ ಕಲ್ಲೂರಾಯ ಅಭಿಪ್ರಾಯಪಟ್ಟಿದ್ದಾರೆ.ಕಾಸರಗೋಡು ಜಿಲ್ಲೆ ಎಡನೀರು ಶ್ರೀ ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಚಾತುರ್ಮಾಸ್ಯದ ಸಂದರ್ಭದಲ್ಲಿ ಭಾನುವಾರ ಎಡನೀರು ಮಠದಲ್ಲಿ ನಡೆದ ಹಿರಿಯ ಕಲಾವಿದ ಕೀರ್ತಿಶೇಷ ಕುಂಬಳೆ ಶ್ರೀಧರ ರಾವ್ ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಅವರು ಸ್ಮೃತಿ ಭಾಷಣ ಮಾಡಿದರು.
ಸ್ವತಃ ಕಲಾವಿದರಾಗಿದ್ದ ಬ್ರಹ್ಮೈಕ್ಯ ಕೇಶವಾನಂದ ಭಾರತೀ ಸ್ವಾಮೀಜಿ ಯಕ್ಷಗಾನಕ್ಕೆ ನೀಡಿದ ಕೊಡುಗೆ ಮತ್ತು ಕುಂಬಳೆ ಶ್ರೀಧರ ರಾಯರ ಮಠದೊಂದಿಗಿನ ಒಡನಾಟಗಳನ್ನು ಶ್ರೀಪತಿ ಕಲ್ಲೂರಾಯ ನೆನಪಿಸಿಕೊಂಡರು. ದಕ್ಷಿಣ ಕನ್ನಡೋತ್ತರ ಜಿಲ್ಲೆಗಳ ಅನೇಕ ಕ್ಷೇತ್ರಗಳಲ್ಲಿ ಯಕ್ಷಗಾನದ ಕಲೆ ಹಾಸುಹೊಕ್ಕಾಗಿದೆ. ಆದರೆ ಎಡನೀರಿನಲ್ಲಿ ಯಕ್ಷಗಾನಕ್ಕೆ ವಿಶೇಷವಾದ ಮಹತ್ವವಿದ್ದು ಕಳೆದ 50 ವರ್ಷಗಳಿಂದಲೂ ಇಲ್ಲಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಾ ಬಂದಿದೆ. ಈ ವೇಳೆ ಕುಂಬಳೆ ಶ್ರೀಧರರಾಯರು ಶ್ರೀಮಠವೆಂಬ ಯಕ್ಷಗಾನ ವಿಶ್ವವಿದ್ಯಾನಿಲಯದ ಅವಿಭಾಜ್ಯ ಅಂಗವಾಗಿದ್ದರು ಎಂದು ಅಭಿಪ್ರಾಯಪಟ್ಟರು.ಯಕ್ಷಗಾನ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಮಾಜವನ್ನು ಒಂದಾಗಿ ಹಿಡಿದಿಟ್ಟುಕೊಳ್ಳುವ ಕಲೆ. ಇದು ಕೇವಲ ಮನರಂಜನೆಯನ್ನು ನೀಡುವ ಕಲೆಯಲ್ಲ. ಟಿವಿ ಇತರ ಮಾಧ್ಯಮಗಳು ಬಂದಾಗ ಉಳಿದ ಕಲೆಗಳು ನಶಿಸಿ ಹೋಗಿವೆ. ಅದೇ ಯಕ್ಷಗಾನದ ವಿಚಾರ ಬಂದಾಗ ಹಾಗಲ್ಲ. ಅದು ಎಲ್ಲಾ ವೈರುಧ್ಯಗಳ ನಡುವೆಯೂ ಬೆಳೆದು ನಿಂತಿದೆ ಎಂದರು.ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಕುಂಬಳೆ ಶ್ರೀಧರ ರಾಯರು ಭಾಗವಹಿಸದ ಶ್ರೀ ಮಠದ ಕಾರ್ಯಕ್ರಮವೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಇಲ್ಲಿ ತೊಡಗಿಸಿಕೊಂಡಿದ್ದವರು. ಹಾಗಾಗಿ ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದರು. ಕುಂಬಳೆ ಶ್ರೀಧರ ರಾವ್ ಸ್ಮೃತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹಿರಿಯ ಯಕ್ಷಗಾನ ಕಲಾವಿದ ಕೆಎಚ್ ದಾಸಪ್ಪ ರೈ ಅವರು, ಕುಂಬಳೆ ಮೇಳವನ್ನು ನಡೆಸಿದ ದಿನಗಳ ನೋವು ನಲಿವಿನ ಜೊತೆಗೆ ತನ್ನ ಕಲಾ ಬದುಕನ್ನು ನೆನಪಿಸಿಕೊಂಡರು. ಕುಂಬಳೆ ಶ್ರೀಧರ ರಾಯರ ಪತ್ನಿ ಕೆ. ಸುಲೋಚನಾ ಇದ್ದರು. ಸಹೋದರ ಗೋಪಾಲ ಕುಂಬಳೆ ಪ್ರಾಸ್ತಾವಿಕವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ, ಭಾಗವತ ರಾಮಕೃಷ್ಣ ಮಯ್ಯ ಸಿರಿಬಾಗಿಲು ಹಾಗೂ ಕುಂಬಳೆ ಕಣಿಪುರ ಶ್ರೀಕ್ಷೇತ್ರದ ವ್ಯವಸ್ಥಾಪಕ ವೆಂಕಟಕೃಷ್ಣ ಹಿಳ್ಳೆಮನೆ ಮತ್ತು ಹಿರಿಯ ಪತ್ರಕರ್ತ ನಾ ಕಾರಂತ ಪೆರಾಜೆ ಅವರನ್ನು ಗೌರವಿಸಲಾಯಿತು.ಡಾ ಸತೀಶ್ ಪುಣಂಚಿತ್ತಾಯ ಮತ್ತು ನಾ ಕಾರಂತ ಪೆರಾಜೆ ಅವರು ಕಾರ್ಯಕ್ರಮ ನಿರ್ವಹಿಸಿದರು. ಗಣೇಶ ಪ್ರಸಾದ್ ಕುಂಬಳೆ ವಂದಿಸಿದರು.
ಧರ್ಮಸ್ಥಳ ಯಕ್ಷಗಾನ ಮಂಡಳಿಯ ಮತ್ತು ಕುಂಬಳೆಯವರ ಒಡನಾಡಿ ಕಲಾವಿದರು ‘ಚಕ್ರವ್ಯೂಹ’ ಮತ್ತು ‘ದಮಯಂತಿ ಪುನಃಸ್ವಯಂವರ’ ಎಂಬ ಪ್ರಸಂಗಗಳನ್ನು ಪ್ರದರ್ಶಿಸಿದರು.