ಶಿಕ್ಷಣದಿಂದಷ್ಟೇ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ

KannadaprabhaNewsNetwork | Published : Oct 18, 2023 1:00 AM

ಸಾರಾಂಶ

ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಪಿ.ಬಿ.ಚಂದ್ರಶೇಖರ ಅಭಿಪ್ರಾಯ

* ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಪಿ.ಬಿ.ಚಂದ್ರಶೇಖರ ಅಭಿಪ್ರಾಯ

ವಿದ್ಯಾವಂತರಲ್ಲೇ ಭ್ರಷ್ಟಾಚಾರ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾನವ ಪೀಳಿಗೆಯ ಹುಟ್ಟಿನ ಜೊತೆಗೆ ಭ್ರಷ್ಟಾಚಾರವೂ ಹುಟ್ಟಿಕೊಂಡಿದ್ದು, ವಿದ್ಯಾಭ್ಯಾಸದಿಂದ ಮಾತ್ರವೇ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಪಿ.ಬಿ.ಚಂದ್ರಶೇಖರ ತಿಳಿಸಿದರು.

ನಗರದ ಮಾಸಬ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪಾರ್ವತಮ್ಮ ಸಭಾಂಗಣದಲ್ಲಿ ಮಂಗಳವಾರ ಕಾಲೇಜಿನ ಸಮಾಜ ಶಾಸ್ತ್ರ ವಿಭಾಗ ಮತ್ತು ಕರ್ನಾಟಕ ಲೋಕಾಯುಕ್ತ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ-2023ರಡಿ ದೇಶದ ಅಭಿವೃದ್ಧಿಗಾಗಿ ಭ್ರಷ್ಟಾಚಾರ ಮುಕ್ತ ಭಾರತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ಜಗತ್ತನ್ನೇ ಗೆಲ್ಲಲು ಹೊರಟಿದ್ದ ಅಲೆಕ್ಸಾಂಡರ್‌ ತನ್ನ ಸೈನಿಕರಿಗೆ ಎದುರಾಳಿಗಳ ವಿರುದ್ಧ ಯುದ್ಧ ಮಾಡಲು ಲಂಚ ನೀಡಿದ್ದನು ಎಂದರು. ಬಸವಾದಿ ಶರಣ-ಶರಣೆಯರು ದಯೆಯೇ ಧರ್ಮದ ಮೂಲವಯ್ಯ ಅಂತಾ ಹೇಳಿದ್ದರು. ಆದರೆ, ಭ್ರಷ್ಟರು ಧನವೇ ಧರ್ಮದ ಮೂಲವಯ್ಯ ಎಂಬುದಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಭ್ರಷ್ಟಾಚಾರವಂತೂ ಜಗತ್ತಿನಾದ್ಯಂತ ವ್ಯಾಪಿಸಿ, ದೊಡ್ಡ ಸಾಮಾಜಿಕ ಪಿಡುಗಾಗಿ ಕಾಡುತ್ತಿದೆ. ಅವಿದ್ಯಾವಂತರಿಗಿಂತಲೂ ವಿದ್ಯಾವಂತರಲ್ಲೇ ಭ್ರಷ್ಟಾಚಾರ ಹೆಚ್ಚಾಗಿದೆ. ಲಂಚ ಕೊಟ್ಟವರು ಮತ್ತು ಲಂಚ ಪಡೆದವರು ಇಬ್ಬರೂ ಭ್ರಷ್ಟರು. ಇಬ್ಬರಿಗೂ ಶಿಕ್ಷೆಯಾಗುತ್ತದೆ ಎಂದು ಹೇಳಿದರು.

ಸಂಸ್ಕಾರ, ಸಾಮಾನ್ಯ ಜ್ಞಾನ ಮುಖ್ಯ:

ಶಿಕ್ಷಣದಿಂದ ಭ್ರಷ್ಟಾಚಾರ ತಡೆಯಬಹುದೆಂಬುದು ತಪ್ಪು ಕಲ್ಪನೆ. ವಿದ್ಯಾವಂತರೇ ಸೈಬರ್ ಕ್ರೈಂ ಮೂಲ ಲೂಟಿ ಮಾಡಿ, ಜನರಿಗೆ ವಂಚಿಸುತ್ತಿರುವ ಸಾಕಷ್ಟು ನಿದರ್ಶನ ನಮ್ಮ ಮುಂದಿವೆ. ವಿದ್ಯಾವಂತರಾಗಿದ್ದರಷ್ಟೇ ಸಾಲದು, ಸುಸಂಸ್ಕೃತರಾದರೆ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿದೆ. ಸರ್ಕಾರಿ ಇಲಾಖೆಗಳು ಸೇರಿ ವಿವಿಧೆಡೆ ನಡೆಯುವ ಭ್ರಷ್ಟಾಚಾರ ತಡೆಗಟ್ಟಲು ವಿದ್ಯಾವಂತರಿಂದ ಮಾತ್ರ ಸಾಧ್ಯವೆಂಬುದು ತಪ್ಪು ಕಲ್ಪನೆ. ವಿದ್ಯೆಗಿಂತಲೂ ಮುಖ್ಯವಾದ್ದು ಸಂಸ್ಕಾರ, ಸಾಮಾನ್ಯ ಜ್ಞಾನವಿದ್ದರೆ ಮಾತ್ರ ಭ್ರಷ್ಟಾಚಾರ ತಕ್ಕ ಮಟ್ಟಿಗೆ ತಡೆಯಲು ಸಾಧ್ಯವಿದೆ ಎಂದು ಡಿವೈಎಸ್ಪಿ ಚಂದ್ರಶೇಖರ ಅಭಿಪ್ರಾಯಪಟ್ಟರು.

ಲೋಕಾಯುಕ್ತ ಇನ್ಸಪೆಕ್ಟರ್ ಪ್ರಭು ಬಿ.ಸೂರಿನ ಮಾತನಾಡಿ, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಲೋಕಾಯುಕ್ತ ಕಚೇರಿ ಇದೆ. ಸಾರ್ವಜನಿಕರು ಸರಿಯಾದ ರೀತಿ ಲೋಕಾಯುಕ್ತವನ್ನು ಬಳಸಿಕೊಳ್ಳುತ್ತಿಲ್ಲ. ಲೋಕಾಯುಕ್ತವೆಂದರೆ ಸರ್ಕಾರಿ ಅಧಿಕಾರಿಗಳ ಕಾರ್ಯವೈಖರಿ ಗಮನಿಸುವುದಾಗಿದೆ. ತಪ್ಪಿತಸ್ಥರ ವಿರುದ್ಧ ಕರ್ನಾಟಕ ಲೋಕಾಯುಕ್ತ ಕಾಯ್ದೆ-1984ರ ಭ್ರಷ್ಟಾಚಾರ ತಡೆ ಕಾಯ್ದೆ-1988 ಇವುಗಳ ಮೂಲಕ ಶಿಸ್ತು ಕ್ರಮಕ್ಕೆ ಸರ್ಕಾರಕ್ಕೆ, ಸಕ್ಷಮ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಬಹುದು. ಲೋಕಾಯುಕ್ತರು, ಉಪ ಲೋಕಾಯುಕ್ತರು, ದೂರು ಹೇಗೆ ನೀಡಬೇಕು, ದೂರಿನ ಜೊತೆಗೆ ನಮೂನೆ-1 ಮತ್ತು 2ನ್ನು ಹೇಗೆ ಭರ್ತಿ ಮಾಡಬೇಕೆಂಬ ಬಗ್ಗೆ ವಿವರಿಸಿದರು.

ಕಾಲೇಜು ಪ್ರಾಚಾರ್ಯರಾದ ಪ್ರೊ.ಜಿ.ಸಿ.ನೀಲಾಂಬಿಕೆ ಅಧ್ಯಕ್ಷತೆ ವಹಿಸಿದ್ದರು. ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ಆರ್‌.ರಾಘವೇಂದ್ರ, ಡಾ.ಎಂ.ಮಂಜಪ್ಪ, ಪ್ರೊ.ಟಿ.ಆರ್‌.ರಂಗಸ್ವಾಮಿ, ಡಾ.ಎ.ಬಿ.ವಿಜಯಕುಮಾರ, ಡಾ.ಕಾವ್ಯಶ್ರೀ, ಡಾ.ಓ.ಪ್ರವೀಣಕುಮಾರ, ಡಾ.ಕೆ.ವೈ.ಈಶ್ವರ, ಗ್ರಂಥ ಪಾಲಕ ಸತೀಶ, ಎಸ್‌.ಪರಮೇಶಿ, ವಿದ್ಯಾರ್ಥಿನಿ ಅಂಕಿತಾ ಸೇರಿ ಬೋಧಕ-ಬೋಧಕೇತರ ಸಿಬ್ಬಂದಿ ಇದ್ದರು.

..................

ನಮಗೆ ಅಧಿಕಾರ, ಆಯಸ್ಸು, ಸಂಪತ್ತು ಇದ್ಯಾವುದೂ ಶಾಶ್ವತವಲ್ಲವೆಂಬ ತಿಳಿವಳಿಕೆ ಬಂದರೆ ಭ್ರಷ್ಟಾಚಾರ ತಕ್ಕಮಟ್ಟಿಗೆ ನಿರ್ಮೂಲನೆ ಮಾಡಬಹುದು. ಸರ್ಕಾರಿ ಇಲಾಖೆಯಲ್ಲಿ ಆಗುವ ಭ್ರಷ್ಟಾಚಾರದ ಬಗ್ಗೆ ನಮಗೆ ದೂರವಾಣಿ, ಬರವಣಿಗೆ ಮೂಲಕ ಅಥವಾ ಮೌಖಿಕವಾಗಿ ದೂರು ನೀಡಿದರೆ ಇಲಾಖೆ ಭ್ರಷ್ಟಾಚಾರ ನಿಯಂತ್ರಿಸಲು ಮುಂದಾಗುತ್ತದೆ. ದೂರುದಾರರ ಹೆಸರು ಗೋಪ್ಯವಾಗಿಡಲಾಗುವುದು. ಯಾವುದೇ ಇಲಾಖೆ, ಅಧಿಕಾರಿ, ನೌಕರರಿಂದ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಇದ್ದರೆ ಲೋಕಾಯುಕ್ತಕ್ಕೆ ಮಾಹಿತಿ ನೀಡಿ.

ಪಿ.ಬಿ.ಚಂದ್ರಶೇಖರ, ಲೋಕಾಯುಕ್ತ ಡಿವೈಎಸ್ಪಿ

..................

Share this article