ಶ್ರೇಷ್ಠ ಚಲನಚಿತ್ರಗಳ ನಿರ್ಮಾಣಕ್ಕೆ ಶಿಕ್ಷಣದ ಹಿನ್ನೆಲೆ ಬೇಕು: ರಾಜೇಂದ್ರಸಿಂಗ್ ಬಾಬು

KannadaprabhaNewsNetwork | Published : Feb 20, 2024 1:52 AM

ಸಾರಾಂಶ

ಸಿನಿಮಾ ಅಧ್ಯಯನ ಉನ್ನತ ಶಿಕ್ಷಣದ ಭಾಗವಾಗಬೇಕು. ಶ್ರೇಷ್ಠ ಚಲನಚಿತ್ರಗಳ ನಿರ್ಮಾಣಕ್ಕೆ ಶಿಕ್ಷಣದ ಹಿನ್ನೆಲೆ ಬೇಕು ಎಂದು ಚಲನಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ತುಮಕೂರು

ಸಿನಿಮಾ ಅಧ್ಯಯನ ಉನ್ನತ ಶಿಕ್ಷಣದ ಭಾಗವಾಗಬೇಕು. ಶ್ರೇಷ್ಠ ಚಲನಚಿತ್ರಗಳ ನಿರ್ಮಾಣಕ್ಕೆ ಶಿಕ್ಷಣದ ಹಿನ್ನೆಲೆ ಬೇಕು ಎಂದು ಚಲನಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಡಿವಿಜಿ ಕನ್ನಡ ಅಧ್ಯಯನ ಮತ್ತು ಸಂಶೋಧನ ಕೇಂದ್ರವು ‘ತಿಳಿಯ ಪೇಳುವೆ ಇಳೆಯ ಕಥೆಯನು’ ಎಂಬ ಪರಿಕಲ್ಪನೆಯಲ್ಲಿ ಆಯೋಜಿಸಿರುವ ‘ಸಿನಿಹಬ್ಬ’ ಐದು ದಿನಗಳ ಕಾಲ ಚಲನಚಿತ್ರೋತ್ಸವ ಪ್ರದರ್ಶನವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ವರ್ಷಕ್ಕೆ 4 ಸಾವಿರ ಸಿನಿಮಾಗಳನ್ನು ಜಗತ್ತಿಗೆ ಕೊಡುವ ಭಾರತದಲ್ಲಿ ಇನ್ನೂ ಸಿನಿಮಾ ಶಿಕ್ಷಣವಾಗಿ ರೂಪುಗೊಂಡಿಲ್ಲ. ವಿಶ್ವವಿದ್ಯಾನಿಲಯಗಳಲ್ಲಿ ಸಿನಿಮಾ ಶಿಕ್ಷಣದ ಭಾಗವಾಗಿ ಅಭ್ಯಾಸ ಮಾಡುವಂತಾಗಬೇಕು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್, ಗುರುದತ್, ಸಿದ್ಧಲಿಂಗಯ್ಯ - ಇವರೆಲ್ಲರೂ ಸಿನಿಮಾ ಕುರಿತು ಯಾವುದೇ ಕೋರ್ಸ್ ಅಭ್ಯಾಸ ಮಾಡಿ ಬಂದವರಲ್ಲ. ಅವರಲ್ಲಿದ್ದ ಉತ್ಸಾಹದಿಂದ ಬೌದ್ಧಿಕ ಸಾಹಸ, ಸೃಜನಶೀಲ ವಿಸ್ಮಯವೂ ಆದ ನೂರಾರು ಸಿನಿಮಾಗಳು ಗೆದ್ದವು ಎಂದು ತಿಳಿಸಿದರು.

ಬದುಕಿನ ಭಾಗವಾಗಿ, ಸಮಾಜದ ಎಲ್ಲ ಅಂಶಗಳನ್ನು, ವಿಷಯಗಳನ್ನು ಪ್ರಯೋಗಿಸುವ ವೇದಿಕೆಯಾಗಿ, ಹೃದಯಗಳ ಭಾವನೆಗಳನ್ನು ನಿವೇದಿಸುವ ಜಾತಿ ಸಿನಿಮಾವಾಗಿದೆ. 2 ಸಾವಿರ ವರ್ಷಗಳಲ್ಲಿ ಚಿಂತಕರು, ಸಾಹಿತಿಗಳು ಪ್ರಚುರ ಪಡಿಸಿದ್ದನ್ನು ಸಿನಿಮಾ ಕಳೆದ 110 ವರ್ಷಗಳಲ್ಲಿ ತನ್ನಲ್ಲಿರುವ ಕಲೆ, ವಿಜ್ಞಾನವನ್ನು ಸಮಾಜಕ್ಕೆ ಮುಟ್ಟಿಸಿದೆ. 21 ಬಗೆಯ ಕಲೆಗಳನ್ನೊಳಗೊಂಡ ಸಿನಿಮಾ ಕಲೆ-ವಿಜ್ಞಾನದ ಬೇಸುಗೆಯಾಗಿದೆ ಎಂದು ತಿಳಿಸಿದರು.

ಕ್ಯಾಮೆರಾ ಲೆನ್ಸ್, ಕಂಪ್ಯೂಟರ್‌ ಗಾಫಿಕ್ಸ್, ಫೋಟೋಗ್ರಫಿಯೊಂದಿಗೆ ಎಐ-ಕೃತಕ ಬುದ್ಧಿಮತ್ತೆ ಹೊಸ ಕ್ರಾಂತಿಯೊಂದನ್ನು ಸಿನಿಮಾರಂಗದಲ್ಲಿ ಸೃಷ್ಟಿಸಲು ಮುಂದಾಗಿದೆ. ಸ್ಕ್ರಿಪ್ಟ್, ಸಿನಿಮಾ ಪರಿಕಲ್ಪನೆಗೆ ಅಗತ್ಯವಾದ ಎಲ್ಲವನ್ನು ಎಐ ಒದಗಿಸುತ್ತಿದೆ. ೧೯ನೆಯ ಶತಮಾನದ ಆರಂಭದಲ್ಲಿ ಅಮೆರಿಕ ದೇಶದ ನಿರ್ದೇಶಕ ಗ್ರಿಫಿಥ್, ರಷ್ಯಾ ರಾಜಕೀಯ ನಾಯಕರಾದ ಲೆನಿನ್, ಸ್ಟಾಲಿನ, ಜರ್ಮನಿಯ ಹಿಟ್ಲರ್‌ ಸಿನಿಮಾ ಒಂದು ಪ್ರಬಲ ಮಾಧ್ಯಮವೆಂದು ಪರಿಗಣಿಸಿ ಅದರಿಂದ ಮುನ್ನಲೆಗೆ ಬರುವ ಎಲ್ಲ ಪ್ರಯತ್ನಗಳನ್ನು ಮಾಡಿದರು ಎಂದು ತಿಳಿಸಿದರು.

ವಿವಿ ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ಬಿದರೆಕಟ್ಟೆಯಲ್ಲಿರುವ ವಿವಿಯ ಹೊಸ ಕ್ಯಾಂಪಸ್‌ನಲ್ಲಿ ೧೦ಎಕರೆ ವಿಸ್ತೀರ್ಣದಲ್ಲಿ ಸಿನಿಮಾ ಸ್ಟುಡಿಯೋ ಸ್ಥಾಪಿಸುವ ಭರವಸೆ ನೀಡಿದರು. ಮೌಲ್ಯಾಧಾರಿತ ಸಿನಿಮಾಗಳು ಬರುತ್ತಿದ್ದ ಕಾಲವೊಂದಿತ್ತು. ವಿಷಯಾಧಾರಿತ ಸಿನಿಮಾಗಳ ಸಂಖ್ಯೆ ಪ್ರಸ್ತುತಕಡಿಮೆಯಾಗಿದೆ. ಸಮಾಜದ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ವಿಶ್ವವಿದ್ಯಾನಿಲಯಗಳ ಅವಶ್ಯಕತೆ ಇರುವಂತೆ, ಸಮಾಜ ಹೊರ-ಒಳ ಹರಿವನ್ನು ಚಿತ್ರಿಸುವುದಕ್ಕಾಗಿ ಸಿನಿಮಾ ಇರುವುದು ಎಂದರು.

ಕುಲಸಚಿವೆ ನಾಹಿದಾ ಜಮ್‌ ಜಮ್ ಮಾತನಾಡಿ, ಡಾ. ರಾಜಕುಮಾರ್‌ ಅವರ ಬಂಗಾರದ ಮನುಷ್ಯ ಸಿನಿಮಾ ನೋಡಿ ನಗರದಲ್ಲಿದ್ದ ಹಲವರು ಹಳ್ಳಿಗಳಿಗೆ ಮರಳಿ ರೈತರಾದರು. ಸ್ಪರ್ಧಾತ್ಮಕ ಪರೀಕ್ಷೆಗಳ ಸ್ಫೂರ್ತಿಯ ಮೂಲವಾಗಿ ಪುನೀತ್‌ ರಾಜಕುಮಾರ್‌ ಅವರ ಪೃಥ್ವಿ ಸಿನಿಮಾ ಜನಮಾನಸದಲ್ಲಿ ಇನ್ನೂ ಉಳಿದಿದೆ. ನಟರ ಬದುಕನ್ನು ಬದಲಾಯಿಸಲು ಸಾಧ್ಯವಿರುವುದು ನಿರ್ದೇಶಕನಿಗೆ ಮಾತ್ರ ಎಂದು ಹೇಳಿದರು.

ವಿವಿಯ ಡಿವಿಜಿ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ.ಶೆಟ್ಟಿ ಮಾತನಾಡಿ, ಸಿನಿಮಾ ಮನೋರಂಜನೆಯ, ದುಡ್ಡು ಬಿತ್ತಿ ಬೆಳೆಯುವ ಸರಕಾಗದೆ, ವಿಶ್ವವಿದ್ಯಾನಿಲಯಗಳಲ್ಲಿ ಶೈಕ್ಷಣಿಕ-ಸಾಮಾಜಿಕ ಶಿಸ್ತಿನ ಭಾಗವಾಗಬೇಕು. ಸರ್ಕಾರಕ್ಕೆ ನಮ್ಮ ವಿವಿಯಲ್ಲಿ ಸಿನಿಮಾ ಕುರಿತು ಅಭ್ಯಾಸ ಮಾಡವ ವಿಭಾಗವನ್ನು ತೆರೆಸುವ ಜವಾಬ್ದಾರಿ ಹೊರಬೇಕು ಎಂದು ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರಿಗೆ ಮನವಿ ಮಾಡಿದರು.

ಮೊದಲ ದಿನ ಕಿಮ್ ಕಿ-ಡುಕ್‌ ನಿರ್ದೇಶನದ ಕೊರಿಯನ್ ಭಾಷೆಯ ಬೌದ್ಧ ತಾತ್ವಿಕತೆಯನ್ನೊಳಗೊಂಡ ‘ಸ್ಪ್ರಿಂಗ್ ಸಮ್ಮರ್‌ ಫಾಲ್ ವಿಂಟರ್‌ ಅಂಡ್ ಸ್ಪ್ರಿಂಗ್’ ಸಿನಿಮಾ ಮತ್ತು ಪ್ರಶಾಂತ್ ಪಂಡಿತ್ ನಿರ್ದೇಶನದ ಆಧುನಿಕ ಕನ್ನಡಕ್ಕೆ ಸಾಂಸ್ಥಿಕ ರೂಪಕೊಟ್ಟ ಬಾಸೆಲ್ ಮಿಷನರಿಗಳ ಕಥೆಯನ್ನು ಒಳಗೊಂಡ ಸಾಕ್ಷ್ಯಚಿತ್ರ ‘ಅರಿವು ಮತ್ತು ಗುರುವು- ವಾಗರ್ಥದ ಹುಡುಕಾಟ’ ಸಿನಿಮಾ ಪ್ರದರ್ಶನವಾಯಿತು. ಸಿನಿಮಾ ತಜ್ಞರಾದ ಶ್ರೀಧರ್‌ ಸಿ.ಆರ್‌. ಕೊಪ್ಪ, ಪ್ರಶಾಂತ್ ಪಂಡಿತ್ ಪ್ರದರ್ಶನಗೊಂಡ ಸಿನಿಮಾಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚೆ ಹಾಗೂ ಸಂವಾದ ನಡೆಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ವಸಂತ ನಿರೂಪಿಸಿ, ವಂದಿಸಿದರು.

BOX

3 ಸಿನಿಮಾ ಸಂಸ್ಥೆಗಳು ಇತರೆ ರಾಜ್ಯಗಳಲ್ಲಿ ಸ್ಥಾಪನೆ

ಕರ್ನಾಟಕದ ಪಾಲಾಗಬೇಕಿದ್ದ ಪ್ರಮುಖ ಮೂರು ಸಿನಿಮಾ ಸಂಸ್ಥೆಗಳು ಬದಲಾದ ಸರ್ಕಾರಗಳಿಂದ, ಸಂಬಂಧಪಟ್ಟ ಸಚಿವರು, ಅಧಿಕಾರಿ ವರ್ಗದವರ ಅನಾಸಕ್ತಿ, ಅಸಡ್ಡೆಯಿಂದ ಇತರೆ ರಾಜ್ಯಗಳಲ್ಲಿ ಸ್ಥಾಪನೆಯಾಯಿತು. 10 ಎಕರೆ ಜಾಗವನ್ನು ಒದಗಿಸಲು ತೋರಿದ ನಿರ್ಲಕ್ಷ್ಯದ ಕಾರಣ ಕರ್ನಾಟಕದಲ್ಲಿ ಆರಂಭವಾಗಬೇಕಿದ್ದ ಸಿನಿಮಾ ಸಂಸ್ಥೆ ಪುನಾ ಸಿನೆಮಾ ಸಂಸ್ಥೆಯಾಗಿ ಮಹಾರಾಷ್ಟ್ರದಲ್ಲಿ, ಬೆಂಗಳೂರಿನಲ್ಲಿ ಆರಂಭವಾಗಬೇಕಿದ್ದ ಜಯಾ ಬಚ್ಚನ್‌ ಅವರ ಮಕ್ಕಳ ಸಿನಿಮಾ ಸಂಸ್ಥೆ 25 ಎಕರೆ ವಿಸ್ತೀರ್ಣದಲ್ಲಿ ಆಂಧ್ರಪ್ರದೇಶದಲ್ಲಿ, ಕೆಆರ್‌ಎಸ್‌ ಡ್ಯಾಮ್ ಪಕ್ಕದಲ್ಲಿ ಆರಂಭವಾಗಬೇಕಿದ್ದ ಕೊಡಕ್ ಸಂಸ್ಥೆಯ ನೆಗೆಟಿವ್ ಸಂಸ್ಕರಣಾ ಘಟಕ ತಮಿಳುನಾಡಿನ ಊಟಿಯಲ್ಲಿ ಸ್ಥಾಪಿಸಲಾಯಿತು. ಈ ಎಲ್ಲಕ್ಕೂ ಸೃಜನಶೀಲ ಮನಸ್ಸಿಲ್ಲದ ಸರ್ಕಾರವೇ ಕಾರಣ ಎಂದು ಚಲನಚಿತ್ರ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ವಿಷಾದ ವ್ಯಕ್ತಪಡಿಸಿದರು.

Share this article