ಉಪ್ಪಾರ ಸಮುದಾಯಕ್ಕೆ ಶಿಕ್ಷಣವೇ ಆಸ್ತಿ: ಪಿ.ಲಿಂಗರಾಜು

KannadaprabhaNewsNetwork | Published : Jun 9, 2024 1:37 AM

ಸಾರಾಂಶ

ಚಾಮರಾಜನಗರದ ಚೆನ್ನಿಪುರದ ಮೋಳೆಯಲ್ಲಿರುವ ಭಗೀರಥ ಫೌಂಡೇಶನ್ ಕಚೇರಿಯಲ್ಲಿ ನಡೆದ ಶ್ರೀಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದಿದ್ದ ಹರ್ಷಿತ, ಸಂಜನಶ್ರೀ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಉಪ್ಪಾರ ಸಮುದಾಯಕ್ಕೆ ಶಿಕ್ಷಣವೇ ಆಸ್ತಿಯಾಗಿರುವುದರಿಂದ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಪಿ.ಲಿಂಗರಾಜು ಸಲಹೆ ನೀಡಿದರು.

ನಗರದ ಚೆನ್ನಿಪುರದ ಮೋಳೆಯಲ್ಲಿರುವ ಭಗೀರಥ ಫೌಂಡೇಶನ್ ಕಚೇರಿಯಲ್ಲಿ ನಡೆದ ಶ್ರೀಮಹರ್ಷಿ ಭಗೀರಥ ಜಯಂತಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಗೀರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಸಮುದಾಯದ ಮಕ್ಕಳು ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ.೯೦ ರಷ್ಟು ಫಲಿತಾಂಶ ಪಡೆಯುತ್ತಿರುವುದು ತುಂಬಾ ಖುಷಿಯಾಗಿದೆ. ವಿದ್ಯಾರ್ಥಿಗಳು ದೊಡ್ಡಕನಸ್ಸುನ್ನು ಇಟ್ಟುಕೊಂಡು ಶ್ರದ್ಧೆ, ಭಕ್ತಿಯಿಂದ ವ್ಯಾಸಂಗ ಮಾಡಬೇಕು. ಪೋಷಕರು ಕೂಡ ಮಕ್ಕಳ ವಿದ್ಯಾರ್ಜನೆಗೆ ಪೋತ್ಸಾಹ ನೀಡಬೇಕಿದೆ ಎಂದರು. ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸಿ ಬದುಕು ಹಸನು ಮಾಡಿಕೊಳ್ಳಬೆಕಾದರೆ ಶಿಕ್ಷಣ ಅತ್ಯಗತ್ಯವಾಗಿದೆ. ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಅಂಬೇಡ್ಕರ್‌ ಅವರ ಆಶಯದಂತೆ ಶಿಕ್ಷಣವೇ ಮೂಲವಾಗಿದೆ. ಸರ್ಕಾರ ಅನೇಕ ಸವಲತ್ತುಗಳನ್ನು ನೀಡುತ್ತಿದ್ದರೂ ಕೂಡ ಉಪ್ಪಾರ ಸಮುದಾಯ ಶಿಕ್ಷಣದಿಂದ ವಂಚಿತರಾಗಿರುವುದು ಬಹಳ ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬೇರೆ ಬೇರೆ ಸಮಾಜಗಳು ಶಿಕ್ಷಣಕ್ಕೆ ಒತ್ತು ನೀಡಿದ ಕಾರಣದಿಂದ ಅಭಿವೃದ್ಧಿ ಹೊಂದಿ ಉನ್ನತ ಸ್ಥಾನಮಾನ ಪಡೆದು ಮಕ್ಕಳ ಜೀವನವನ್ನು ಹಸನು ಮಾಡುತ್ತಿದ್ದಾರೆ. ಹಾಗಾಗಿ ಉಪ್ಪಾರ ಸಮಾಜವು ಕೂಡ ಬದಲಾವಣೆಯಾಗಬೇಕು. ಮಕ್ಕಳಿಗೆ ಪ್ರೋತ್ಸಾಹ ಕೊಟ್ಟರೆ ಸಮಾಜದಲ್ಲಿ ಒಳ್ಳೆಯ ವಿದ್ಯಾವಂತರಾಗಿ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಕೀರ್ತಿ ತರುತ್ತಾರೆ. ಕಂದಚಾರ, ಮೂಡನಂಬಿಕೆಗಳನ್ನು ತ್ಯಜಿಸಿ ಶಿಕ್ಷಣಕ್ಕೆ ಆದ್ಯತೆ ನೀಡುವ ಸಮಾಜ ಮುಖ್ಯವಾಹಿನಿಗೆ ಬರಬೇಕಿದೆ ಎಂದರು. ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರಂಗಸ್ವಾಮಿ ದೊಡ್ಡಮೋಳೆ ಮಾತನಾಡಿ, ಎಲ್ಲಕ್ಕಿಂತ ಮಿಗಿಲಾದದ್ದು ಶಿಕ್ಷಣ. ಶಿಕ್ಷಣ ಕಲಿತರೆ ಹೆಚ್ಚಿನ ಗೌರವ ಲಭಿಸುತ್ತದೆ. ಸಮುದಾಯದ ಮಕ್ಕಳು ಚೆನ್ನಾಗಿ ಓದಿ ಅಧಿಕಾರಿಗಳಾಗುತ್ತಿದ್ದಾರೆ. ಈಗಾಗಲೇ ವೈದ್ಯರು, ನ್ಯಾಯಾಧೀಶರು, ವಕೀಲರು, ಎಂಜಿನಿಯರ್ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣ ಪಡೆದು ಅಧಿಕಾರಿಗಳಾಗಿ ಸಮಾಜಸೇವೆ ಮಾಡಬೇಕು. ನಮ್ಮ ವತಿಯಿಂದ ಸಹಾಯ, ಸಹಕಾರ ಮಾಡಲಾಗುವುದು. ಈಗ ಪ್ರತಿಭಾ ಪುರಸ್ಕಾರ ಪಡೆದಿರುವ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳ ಓದಿಗೆ ಮಾದರಿಯಾಗಿದ್ದಾರೆ. ನಿಮ್ಮ ಜೀವನ ಉಜ್ವಲವಾಗಲಿ ಎಂದು ಆಶಿಸಿದರು. ಪ್ರತಿಭಾ ಪುರಸ್ಕಾರ: ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಹರ್ಷಿತ, ಸಂಜನಶ್ರೀ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಭಗೀರಥ ಫೌಂಢೇಶನ್ ಅಧ್ಯಕ್ಷ ಡೇರಿ ಮಹದೇವಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಉಪ್ಪಾರ ಸಂಘದ ಉಪಾಧ್ಯಕ್ಷ ಆರ್ .ಮಹದೇವಶೆಟ್ಟಿ, ಗೌರವಾಧ್ಯಕ್ಷ ಸಿ.ಬಿ. ನಾಗರಾಜು, ಸಿ. ರಾಜು, ಮಹದೇವಶೆಟ್ಟಿ, ನಾಗರಾಜು, ಕೋರಿಯರ್‌ ಮಹದೇವಸ್ವಾಮಿ, ಪ್ರವೀಣ್‌ಕುಮಾರ್ ಇತರರು ಹಾಜರಿದ್ದರು.

Share this article