ಹಿಂದುಳಿದ ಸಮಾಜಕ್ಕೆ ಶಿಕ್ಷಣವೇ ಶಕ್ತಿ

KannadaprabhaNewsNetwork |  
Published : Sep 02, 2025, 01:00 AM IST

ಸಾರಾಂಶ

ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಸಮಾಜಗಳಿಗೆ ಶಿಕ್ಷಣವೇ ಶಕ್ತಿ. ಮಡಿವಾಳ ಸಮಾಜದ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಂಡು ಶಕ್ತಿಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಚಿತ್ರದುರ್ಗದ ಮಾಚಿದೇವ ಮಠದ ಡಾ.ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದಿರುವ ಸಮಾಜಗಳಿಗೆ ಶಿಕ್ಷಣವೇ ಶಕ್ತಿ. ಮಡಿವಾಳ ಸಮಾಜದ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಂಡು ಶಕ್ತಿಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಚಿತ್ರದುರ್ಗದ ಮಾಚಿದೇವ ಮಠದ ಡಾ.ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.

ನಗರದ ಜಿಲ್ಲಾ ಮಡಿವಾಳ ಸಂಘದಲ್ಲಿ ಜಿಲ್ಲಾ ಹಾಗೂ ತಾಲೂಕು ಮಡಿವಾಳರ ಸಂಘಗಳ ಆಶ್ರಯದಲ್ಲಿ ನಡೆದ ಶ್ರಾವಣ ಮಾಸದ ಮನ ಮನೆ ಭೇಟಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ವಿತರಣಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

ಶಿಕ್ಷಣದಿಂದ ಸಾಮಾಜಿಕ ಗೌರವ, ಘನತೆ ಹೆಚ್ಚುತ್ತದೆ, ಆರ್ಥಿಕ ಶಕ್ತಿ ಬೆಳೆಯುತ್ತದೆ. ಅಸಹಾಯಕರಿಗೆ ಸಹಾಯ ಮಾಡುವ ಅವಕಾಶ ದೊರೆಯುತ್ತದೆ ಎಂದು ಹೇಳಿದರು.

ಪ್ರಸ್ತುತ ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿ ಮಡಿವಾಳ ಸಮಜದ ವಿದ್ಯಾರ್ಥಿಗಳು ಶಿಕ್ಷಣದ ಸ್ಪರ್ಧೆಯಲ್ಲಿ ಗೆದ್ದು ಸಾಮರ್ಥ್ಯ ಸಾಬೀತು ಮಾಡುತ್ತಾ ಅಸ್ತಿತ್ವ ಬೆಳೆಸಿಕೊಳ್ಳುವತ್ತ ಗಮನಹರಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಉನ್ನತ ಸ್ಥಾನಮಾನಗಳನ್ನು ಪಡೆಯಬೇಕು. ಸಮಾಜದ ಹಿರಿಯರು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಹಾಯ, ಮಾರ್ಗದರ್ಶನ ಮಾಡಬೇಕು ಎಂದು ಸ್ವಾಮೀಜಿ ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಶ್ರಮಜೀವಿಗಳಾದ ಮಡಿವಾಳ ಸಮಾಜದವರು ಕಾಯಕ ಮಾಡುತ್ತಾ ಎಲ್ಲರೊಂದಿಗೆ ಬೆರೆಯುತ್ತಾ ಬಂದಿದ್ದಾರೆ. ಎಲ್ಲ ಸಮಾಜದವರೂ ಮಡಿವಾಳರೊಂದಿಗೆ ಸ್ಪಂದಿಸಬೇಕು. ಈ ಸಮಾಜಕ್ಕೆ ಆಗಬೇಕಾದ ಕೆಲಸಕಾರ್ಯಗಳನ್ನು ನಿರ್ವಹಿಸಲು ತಾವು ಸದಾ ನಿಮ್ಮೊಂದಿಗಿರುತ್ತೇನೆ ಎಂದು ಹೇಳಿದರು.

ಸಮಾಜದ ಮುಖಂಡ, ಕಾಂಗ್ರೆಸ್ ನಾಯಕ ಕೆ.ವಿ.ಅಮರನಾಥ್ ಮಾತನಾಡಿ, ಬೆಂಗಳೂರಿನಲ್ಲಿ ಮಡಿವಾಳ ಸಮಾಜದ ವಿದ್ಯಾರ್ಥಿಗಳ ಶಿಕ್ಷಣ ಸೌಲಭ್ಯಕ್ಕಾಗಿ ಅನುಕೂಲ ಮಾಡಿಕೊಡಲಾಗುತ್ತಿದೆ. ಇನ್ನೆರಡು ವರ್ಷದಲ್ಲಿ ಅಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದೆ. ಉನ್ನತ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆಯಬಹುದು ಎಂದು ಹೇಳಿದರು.

ಡಾ.ಎಸ್.ನಾಗಣ್ಣ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಅವರು ಸಾಧನೆ ಮಾಡಲು ಸೂಕ್ತ ತರಬೇತಿ, ಮಾರ್ಗದರ್ಶನ ದೊರಕಿಸಲು ಸಮಾಜದ ಹಿರಿಯರು ಕಾಳಜಿವಹಿಸಬೇಕು ಎಂದರು.

ಸ್ಫೂರ್ತಿ ಡೆವಲಪರ್ಸ್ ಮಾಲೀಕ ಎಸ್.ಪಿ.ಚಿದಾನಂದ್ ಅವರು, ಹಿಂದುಳಿದ ವರ್ಗಗಳಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಮಡಿವಾಳ ಸಮಾಜಕ್ಕೆ ಪರಿಚಯ ಮಾಡಿಸಿ, ಅವರು ಯೋಜನೆಗಳ ಸದುಪಯೋಗ ಮಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ರಾಜ್ಯ ಮಡಿವಾಳರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಆರ್.ಪ್ರಕಾಶ್ ಮಾತನಾಡಿ, ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂಬುದು ಹಲವು ವರ್ಷಗಳ ಹೋರಾಟವಿದೆ. ಇಂದಿನ ಪರಿಸ್ಥಿತಿಯಲ್ಲಿ ನಮ್ಮನ್ನು ಪರಿಶಿಷ್ಟ ಜಾತಿಯಲ್ಲಿ ಶೇಕಡ 6 ರಷ್ಟು ಮೀಸಲಾತಿ ಪಡೆಯುತ್ತಿರುವ ಬಲಗೈನವರೊಂದಿಗೆ ಸೇರಿಸಬೇಕೆ, ಎಡಗೈನವರೊಂದಿಗೆ ಸೇರಿಸಿಕೊಳ್ಳಬೇಕೆ ಎಂದು ಕೇಳುವಂತಾಗಿದೆ. ಆ ಸಮಾಜದ ಜೊತೆ ಮಡಿವಾಳ ಸಮಾಜದವರು ಪೈಪೋಟಿ ಮಾಡಲು ಸಾಧ್ಯವೆ? ನೋಡೋಣ, ಸರ್ಕಾರ ಯಾವ ರೀತಿಯ ತೀರ್ಮಾನ ಮಾಡುವುದೋ, ಪರಿಶಿಷ್ಟ ಜಾತಿಗೆ ಸೇರಬೇಕೆಂಬ ಮಡಿವಾಳರ ಹೋರಾಟ ನಿಲ್ಲುವುದಿಲ್ಲ, ಮುಂದುವರೆಯುತ್ತದೆ ಎಂದರು.

ಜಿಲ್ಲಾ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ ಮತ್ತಿತರರು ಮಾತನಾಡಿದರು. ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ್, ನಗರಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್, ಮುಖಂಡರಾದ ಬಿ.ರಂಗಸ್ವಾಮಿ, ಮಂಜುನಾಥ್, ಲಕ್ಷೀನಾರಾಯಣ, ಚಂದ್ರು ಭೂಪಾಲ್, ನಾಗರಾಜಸ್ವಾಮಿ, ಧನಿಯಾಕುಮರ್, ಮಲ್ಲಸಂದ್ರ ಶಿವಣ್ಣ, ಎಲ್ಲಾ ತಾಲ್ಲೂಕು ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಿದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ