ಶಿಕ್ಷಣಕ್ಕೆ ಸಾಮಾಜಿಕ ಸಮಾನತೆ, ಮನುಷ್ಯ ಪರ ನಿಲುವಿರಲಿ: ಸಿದ್ದಪ್ಪ ಮೂಲಗೆ

KannadaprabhaNewsNetwork |  
Published : Oct 21, 2024, 12:48 AM IST
ಚಿತ್ರ 20ಬಿಡಿಆರ್4ಬಸವಕಲ್ಯಾಣ ನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಹಮ್ಮಿಕೊಂಡಿದ್ದ 'ಉನ್ನತ ಶಿಕ್ಷಣ ಹಾಗೂ ಯುವ ಜನತೆ ' ಕುರಿತಾದ ಉಪನ್ಯಾಸ ಸಮಾರಂಭದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್‌ ಸದಸ್ಯ ಸಿದ್ದಪ್ಪ ಮೂಲಗೆ ಮಾತನಾಡಿದರು. | Kannada Prabha

ಸಾರಾಂಶ

ಬಸವಕಲ್ಯಾಣದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಹಮ್ಮಿಕೊಂಡಿದ್ದ ‘ಉನ್ನತ ಶಿಕ್ಷಣ ಹಾಗೂ ಯುವ ಜನತೆ’ಕುರಿತಾದ ಉಪನ್ಯಾಸ ಸಮಾರಂಭ ಏರ್ಪಡಿಸಲಾಗಿತ್ತು.

ಕನ್ನಡಪ್ರಭ ವಾರ್ತೆ, ಬಸವಕಲ್ಯಾಣ

ಸಮಾಜದ ಹಾಗೂ ವ್ಯವಸ್ಥೆಯ ವೈಚಾರಿಕವಾದ ವಿಮರ್ಷೆಯ ಜೊತೆಗೆ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಅನ್ವೇಷಣೆಗಳು ಉನ್ನತ ಶಿಕ್ಷಣದ ಪ್ರಧಾನ ಧೋರಣೆಯಾಗಿದೆ. ಒಂದು ಸಮಾಜ, ದೇಶವನ್ನು ಕ್ರಿಯಾಶೀಲವಾಗಿಡುವ ಕೆಲಸ ಶಿಕ್ಷಣದಿಂದ ಮಾತ್ರ ನಡೆಯುತ್ತದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್‌ ಸದಸ್ಯ ಸಿದ್ದಪ್ಪ ಮೂಲಗೆ ಹೇಳಿದರು.

ಅವರು ನಗರದ ಬಸವೇಶ್ವರ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ವತಿಯಿಂದ ಹಮ್ಮಿಕೊಂಡಿದ್ದ ‘ಉನ್ನತ ಶಿಕ್ಷಣ ಹಾಗೂ ಯುವ ಜನತೆ’ಕುರಿತಾದ ಉಪನ್ಯಾಸ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಜ್ಞಾನ ಉತ್ಪಾದಿಸುವ, ಸಾಮಾಜಿಕ ಸಮಾನತೆ ತರಬಲ್ಲ, ಮನುಷ್ಯ ಪರವಾಗಿ ಆಲೋಚಿಸುವ ನಿಲುವುಗಳು ಉನ್ನತ ಶಿಕ್ಷಣದಲ್ಲಿದ್ದರೆ ದೇಶದ ಪ್ರಗತಿ ಸಾಧ್ಯ ಎಂದರು.

ಲೋಕವನ್ನು ಅರಿಯಲು, ಗ್ರಹಿಸಲು ದಾರಿಯಾಗಬೇಕಾದ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ನಿರ್ಬಂಧಗಳಿವೆ. ನಿಸರ್ಗ, ಸಮಾಜ, ಲೋಕವನ್ನು ಅರಿಯಲು ಸರಿಯಾದ ಶಿಕ್ಷಣದ ಅಗತ್ಯವಿದೆ. ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಧ್ಯಯನ ಮಾಡುವ ಮೂಲಕ ಹೊಸದನ್ನು ಕಂಡುಕೊಳ್ಳಲು ಸಾಧ್ಯವಿದೆ. ಓದಿನಲ್ಲಿ ತನ್ಮಯತೆ ಅಗತ್ಯ ಎಂದರು.

ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳನ್ನು ಯಂತ್ರಗಳನ್ನಾಗಿ ಮಾಡಲಾಗುತ್ತದೆ. ಅತ್ಯಂತ ಬೌದ್ಧಿಕತೆಯನ್ನು ಹೊಂದಿದ ಬಿಎ, ಬಿಕಾಂ ಮತ್ತು ಬಿಎಸ್ಸಿ ಪದವಿಗಳ ಬಗೆಗೆ ತಾತ್ಸಾರ , ಉದಾಸೀನತೆ ಬೇಡ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ.ಮಲ್ಲಿಕಾರ್ಜುನ ಲಕಶಟ್ಟಿ ಮಾತನಾಡಿ, ವಿಶ್ವವಿದ್ಯಾಲಯದ ಆಡಳಿತಾತ್ಮಕ ಸುಧಾರಣೆಗಾಗಿ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ನೀಡಿ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಸಿಂಡಿಕೇಟ್‌ ಸದಸ್ಯರನ್ನು ಸರ್ಕಾರ ಆಯ್ಕೆ ಮಾಡುತ್ತದೆ. ಉನ್ನತ ಶಿಕ್ಷಣದಲ್ಲಿ ಉತ್ತಮ ಭವಿಷ್ಯವಿದೆ. ಉನ್ನತ ಶಿಕ್ಷಣ ಅತ್ಯುತ್ತಮ ಭವಿಷ್ಯ ರೂಪಿಸಿಕೊಳ್ಳಲು ಮಾರ್ಗವಾಗಿದೆ ಎಂದರು.

ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ಸಂಶೋಧನಾತ್ಮಕ ಅಧ್ಯಯನ, ಸೈದ್ಧಾಂತಿಕ ಹಾಗೂ ತಾತ್ವಿಕ ನೆಲೆಯ ಅನುಸಂಧಾನ ಉನ್ನತ ಶಿಕ್ಷಣದ ಗುಣವಾಗಿದೆ. ಅದು ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ದಾರಿಯಾಗಿದೆ. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ವೈಚಾರಿಕ ಹಾಗೂ ವೈಜ್ಞಾನಿಕ ಪರಂಪರೆಯನ್ನು ಗಟ್ಟಿಗೊಳಿಸುವ ಮತ್ತು ಕಟ್ಟಿ ಬೆಳೆಸುವ ಅರಿವಿನ ಜಾಗಗಳಾಗಿವೆ ಎಂದರು.

ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ ಅಧ್ಯಕ್ಷತೆ ವಹಿಸಿದ್ದರು. ಬಿಡಿಪಿಸಿ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಐಕ್ಯೂಎಸಿ ಸಂಯೋಜಕ ಪವನ ಪಾಟೀಲ್‌, ಅಶೋಕ ರೆಡ್ಡಿ ಗದಲೇಗಾಂವ್‌, ವಿವೇಕಾನಂದ ಶಿಂಧೆ, ರೋಶನ್‌ ಬೀ, ಗುರುದೇವಿ ಕಿಚಡೆ, ನೀಲಮ್ಮ ಮೇತ್ರೆ, ಡಾ‌. ಬಸವರಾಜ ಖಂಡಾಳೆ, ಪ್ರವೀಣ ಬಿರಾದಾರ, ಶ್ರೀನಿವಾಸ ಉಮಾಪುರೆ, ಪ್ರಶಾಂತ ಬುಡಗೆ ಹಾಗೂ ಬಸವರಾಜ ಗುಂಗೆ ಮತ್ತಿತರರಿದ್ದರು.

ಡಾ. ಶಾಂತಲಾ ಪಾಟೀಲ್‌ ಸ್ವಾಗತಿಸಿ ಜಗದೇವಿ ಜವಳಿಗೆ ನಿರೂಪಿಸಿದರೆ ಗಂಗಾಧರ ಸಾಲಿಮಠ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!