ಶಿಕ್ಷಣ ಭಾಗೀದಾರರ ಸಮಾವೇಶಕ್ಕೆ ಚಾಲನೆ

KannadaprabhaNewsNetwork |  
Published : Feb 15, 2025, 12:32 AM IST
14ಕೆಪಿಆರ್‌ಸಿಆರ್ 02 : | Kannada Prabha

ಸಾರಾಂಶ

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಶಿಕ್ಷಣ ಭಾಗೀದಾರರ ಸಮಾವೇಶ -2025ಕ್ಕೆ ಗಣ್ಯರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಯಚೂರುಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗೆ ಕಳೆದ ಎರಡು ವರ್ಷಗಳಿಂದ ಶಿಕ್ಷಣ ಭಾಗೀದಾರರ ಸಮಾವೇಶ ನಡೆಸುತ್ತಿದ್ದು, ಇದರಿಂದ ಮಕ್ಕಳ ಕಲಿಕೆಗೆ ಬೇಕಾಗಿರುವ ಪೂರ್ವ ತಯಾರಿಗೆ ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ ಎಂದು ಕಲಬುರಗಿ ವಿಭಾಗದ ಶಿಕ್ಷಣ ಇಲಾಖೆಯ ಆಯುಕ್ತರಾದ ಡಾ. ಆಕಾಶ್ .ಎಸ್ ತಿಳಿಸಿದರು.ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಶಾಲಾ ಶಿಕ್ಷಣ ಇಲಾಖೆ, ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತ ಇವರ ಸಹಯೋಗ ದಲ್ಲಿ ಶಿಕ್ಷಣ ಭಾಗೀದಾರರ ಸಮಾವೇಶ -2025ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು.

ಕಳೆದ ಎರಡು ವರ್ಷದಲ್ಲಿ ಕಲಬುರಗಿ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಸಮಾವೇಶ ನಡೆಸಲಾಗಿದೆ. ರಾಜ್ಯದಲ್ಲಿ 57 ಸಾವಿರ ಶಿಕ್ಷಕರ ಕೊರತೆ ಇದೆ. ಈ ಭಾಗದಲ್ಲಿ 15 ಸಾವಿರ ಕೊರತೆ ಇದೆ. ಜೊತೆಗೆ ಶಾಲಾ ಕಟ್ಟಡ, ನೀರಿನ ಸೌಲಭ್ಯ, ಶೌಚಾಲಯ, ಸೇರಿ ಹಲವು ಸೌಲಭ್ಯಗಳ ಕೊರತೆ ಎದುರಿಸುತ್ತಿದ್ದೇವೆ. ಎಸ್ಎಸ್ಎಲ್ಸಿಯಲ್ಲಿ ಈ ಭಾಗದಲ್ಲಿ ಹೆಚ್ಚು ಫಲಿತಾಂಶ ಮಾಡಲು ಮೊದಲು ಕಾಪಿ ಮಾಡುವುದನ್ನು ತಡೆಗಟ್ಟಲು ವೆಬ್ ಕಾಸ್ಟಿಂಗ್ ಮಾಡಲಾಯಿತು. ನಂತರ ರಾಜ್ಯದಲ್ಲಿ ವಿಸ್ತೀರ್ಣ ಮಾಡಲಾಯಿತು ಎಂದರು.ಸರ್ಕಾರಿ ಶಾಲೆಗಳಲ್ಲಿ ಎಲ್.ಕೆ.ಜಿ., ಯುಕೆಜಿ ಆರಂಭಿಸಲಾಯಿತು. ಆರಂಭದಲ್ಲಿ 65 ಶಾಲೆಗಳು ಸೇರ್ಪಡೆ ಮಾಡಲಾಯಿತು. 3-6 ವರ್ಷ ಮಕ್ಕಳ ಕಲಿಕೆ ಹಂತ ಇದನ್ನು ಮತ್ತಷ್ಟು ಹೆಚ್ಚಿಸಲು ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಿದೆ. ಇದೀಗ ಎಲ್.ಕೆ.ಜಿ., ಯುಕೆಜಿಗೆ 42 ಸಾವಿರ ಮಕ್ಕಳು ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.ಶಿಕ್ಷಣ ಭಾಗೀದಾರರ ಸಮಾವೇಶದಿಂದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣ ಗುಣಮಟ್ಟದ ಸುಧಾರಣೆ ಹೇಗೆ ತಯಾರಿ ಮಾಡಿಕೊಳ್ಳಬೇಕು? ಬೇರೆ ಜಿಲ್ಲೆಗೆ ಮುಂಚೂಣಿಯಲ್ಲಿ ಜಿಲ್ಲೆಯನ್ನು ಮುಂದೆ ಹೋಗಲು ಪ್ರಥಮ ಫೌಂಡೇಶನ್‌ನಿಂದ ಮಾಹಿತಿ ನೀಡುತ್ತಿದೆ. ಸಾಕಷ್ಟು ಶಿಕ್ಷಣ ತಜ್ಞರು ಸಮಾವೇಶದಲ್ಲಿ ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ನಿತೀಶ್ ಕೆ. ಮಾತನಾಡಿ, ಕಲ್ಯಾಣ ಕರ್ನಾಟಕದ ಶಿಕ್ಷಕರಿಗೆ ಸ್ಕಿಲ್ ತರಬೇತಿ ಮುಖ್ಯವಾಗಿದೆ. ಅದನ್ನು ಅವರಿಗೆ ಕೊಡಿಸುವಂಥ ಕಾರ್ಯ ಮಾಡಬೇಕು. ಹಾಗೆಯೇ ಮಕ್ಕಳಿಗೆ ಶಿಕ್ಷಣದ ಮೇಲೆ ಆಸಕ್ತಿ ಬೆಳೆಯುವಂತೆ ಮಾಡುವುದು ಶಿಕ್ಷಕರ ಆದ್ಯ ಕರ್ತವ್ಯ ಮತ್ತು ಈ ಭಾಗದ ಎಲ್ಲ ಜಿಲ್ಲೆಯ ವಿದ್ಯಾರ್ಥಿಗಳಿಗೆ ಕಲಂ 371(ಜೆ) ಅಡಿಯಲ್ಲಿ ಅದರ ಲಾಭದ ಕುರಿತು ಶಿಕ್ಷಕರು ವಿವರಿಸಬೇಕು. ಈ ಭಾಗದ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು. ಖಾಸಗಿಯೇತರ ಶಿಕ್ಷಕರಿಗೆ ಹೋಲಿಸಿದರೆ, ಸರ್ಕಾರದ ಶಿಕ್ಷಕರಿಗೆ ಶಿಕ್ಷಣದ ಮತ್ತು ಮೋಟಿವೇಶನ್ ತರಬೇತಿಯು ಅವಶ್ಯಕವಾಗಿದೆ. ಮತ್ತು ಕಲ್ಯಾಣ ಕರ್ನಾಟಕದ ಪ್ರತಿಯೊಂದು ತಾಲ್ಲೂಕಿನಲ್ಲಿ ಶೈಕ್ಷಣಿಕ ಅಭಿವೃದ್ಧಿಯು ಶಿಕ್ಷಕರ ಕರ್ತವ್ಯ ಆದ್ದರಿಂದ ಕಲ್ಯಾಣ ಕರ್ನಾಟಕದಲ್ಲಿ ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿ ಮಾಡುವಂತಹ ದೇಯೋದ್ದೇಶವು ಪ್ರತಿಯೊಬ್ಬ ಶಿಕಕ್ಷಕರದು ಎಂದರು. ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ಗುರುರಾಜ ಸುಂಕದ ಮಾತನಾಡಿದರು. ಈ ವೇಳೆ ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ, ಡಿಡಿಪಿಐ ಕೆ.ಡಿ.ಬಡಿಗೇರ್, ಡಯಟ್ ಉಪನಿರ್ದೇಶಕಿ ಇಂದಿರಾ. ಆರ್, ಪ್ರಥಮ ಪೌಂಡೇಶನ್ ಮುಖ್ಯಸ್ಥ ಸುಮನ್ ಭಟ್ಟಾಚಾರ್ಯ, ವಿವಿ ಸಿಂಡಿಕೇಟ್ ಸದಸ್ಯರಾದ ಮಲ್ಲಿಕಾರ್ಜುನ, ರಾಜಕುಮಾರ, ಕಾರ್ಯಕ್ರಮ ಅಧಿಕಾರಿ ಲತಾ ಕೋಟೆ, ಇಲಾಖೆ ಅಧಿಕಾರಿ,ಸಿಬ್ಬಂದಿ,ಶಿಕ್ಷಕರು, ವಿದ್ಯಾರ್ಥಿಗಳು ಸೇರಿ ಇತರರು ಇದ್ದರು. ಹಳಿ ತಪ್ಪಿದ ಶಿಕ್ಷಣ ಭಾಗೀದಾರರ ಸಮಾವೇಶ

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಶಿಕ್ಷಣ ತಜ್ಞರು,ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಭಾಗೀದಾರರು ದೂರವಿಟ್ಟು, ನಡೆಸುತ್ತಿರುವ ಶಿಕ್ಷಣ ಭಾಗೀದಾರರ ಸಮಾವೇಶ-2025ರ ಕಾರ್ಯಕ್ರಮ ಸಂಪೂರ್ಣವಾಗಿ ಹಳಿತಪ್ಪಿದೆ.

ಶಾಲಾ ಶಿಕ್ಷಣ ಇಲಾಖೆ, ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಸಹಯೋಗದಲ್ಲಿ ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಜಗಜ್ಯೋತಿ ಬಸವೇಶ್ವರ ಪ್ರೇಕ್ಷಾಗೃಹದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಸಮಾವೇಶದ ಉದ್ದೇಶವೇ ಕಣ್ಮರೆಯಾಗಿರುವುದಕ್ಕೆ ಎಲ್ಲೆಡೆ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗುತ್ತಿವೆ.

ಉದ್ದೇಶ ಬುಡಮೇಲು:

ಕಲ್ಯಾಣ ಕರ್ನಾಟಕ ವಿಭಾಗದ ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಪ್ರಮಾಣದಲ್ಲಿ ಸುಧಾರಣೆ ಕಾಣುವ ಉದ್ದೇಶದಡಿ ಗುಣಾತ್ಮಕ ಶಿಕ್ಷಣಕ್ಕಾಗಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ನವೀನ ವಿಧಾನಗಳ ಮೂಲಕ ಪರಿವರ್ತನೆಯನ್ನು ತರಲು ಶಿಕ್ಷಣ ತಜ್ಞರು,ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಶಿಕ್ಷಣ ಭಾಗೀದಾರರನ್ನು ಒಗ್ಗೂಡಿಸಿ ಸಾಧಕ-ಬಾಧಕಗಳ ಕುರಿತು ಸಮಾಲೋಚನೆ ನಡೆಸಲು ಆಯೋಜಿಸಿರುವ ಸಮಾವೇಶದ ಉದ್ದೇಶ ಬುಡಮೇಲಾಗಿದೆ.ಕೆಂಡಕಾರುತ್ತಿದ್ದಾರೆ: ಈ ಭಾಗದ ಸಮಗ್ರ ಶೈಕ್ಷಣಿಕ ಅಭಿವೃದ್ಧಿಯ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧೀನದಲ್ಲಿ ಕಲ್ಯಾಣ ಕರ್ನಾಟಕ ಶೈಕ್ಷಣಿಕ ಸಮಿತಿ ರಚಿಸಿದ್ದು, ಇದರಲ್ಲಿ ರಾಯಚೂರು, ಯಾದಗಿರಿ ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಅನ್ಯಾಯ ಮಾಡಿರುವ ಸಮಯದಲ್ಲಿಯೇ ಶುಕ್ರವಾರ ಸಮಾವೇಶದ ಚಾಲನೆ ಕಾರ್ಯ ಕ್ರಮದಲ್ಲಿ ಡಿಸಿ, ಇಲಾಖೆ ಆಯುಕ್ತರು, ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಮಾತ್ರ ಭಾಗವಹಿಸಿದ್ದು, ಶಿಕ್ಷಣ ತಜ್ಞರು, ಎನ್‌ಜಿಒಗಳು, ಅನುದಾನಿತ, ಅನುದಾನ ರಹಿತ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿ ಶಿಕ್ಷಣಕ್ಕೆ ಸಂಬಂಧಪಟ್ಟ ವಿವಿಧ ಸಂಘಟನೆಗಳ ಪ್ರಮುಖರು, ಪದಾಧಿಕಾರಿಗಳು,ಸದಸ್ಯರಿಗೆ ಆಹ್ವಾನ ನೀಡದೇ ಸಮಾವೇಶ ಹಮ್ಮಿ ಕೊಂಡಿರುವ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವಿರುದ್ಧ ಶಿಕ್ಷಣ ಪ್ರೇಮಿಗಳು ಕೆಂಡಕಾರುತ್ತಿದ್ದಾರೆ.ಸಂಖ್ಯೆ ತೋರಿಸಲು ಬುಲಾವ್‌

ಸಮಾವೇಶದ ಮೊದಲ ದಿನ ಬರೀ ಶಿಕ್ಷಕರು, ವಿದ್ಯಾರ್ಥಿಗಳನ್ನು ಕರೆಯಿಸಿ ಮ್ಯಾನೇಜ್‌ ಮಾಡಿರುವ ಶಿಕ್ಷಣ ಇಲಾಖೆ ಎರಡನೇ ದಿನ ಮರ್ಯಾದ ಉಳಿಸಿಕೊಳ್ಳುಲು ಪ್ಲಾನ್ ಮಾಡಿದ್ದು, ಅದಕ್ಕಾಗಿ ಜಿಲ್ಲೆ ವಿವಿಧ ತಾಲೂಕುಗಳ ಆಯ್ದ ಶಾಲೆಗಳ ಶಿಕ್ಷಕರಿಗೆ ಬುಲವ್‌ ನೀಡಿದೆ. ನಗರ,ಪಟ್ಟಣ ಹಾಗೂ ಗ್ರಾಮೀಣ ಭಾಗದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಶೇ.50 ಕ್ಕು ಹೆಚ್ಚು ಕಾಯಂ ಶಿಕ್ಷರ ಕೊರತೆಯಿದ್ದು, ಎಲ್ಲೆಡೆ ಬರೀ ಅತಿಥಿ ಶಿಕ್ಷಕರೇ ತುಂಬು ತುಳುಕುತ್ತಿದ್ದಾರೆ ಬಹುತೇಕ ಶಾಲೆಗಳಲ್ಲಿ ಅನರ್ಹ ಅತಿಥಿ ಶಿಕ್ಷಕರೇ ಮಕ್ಕಳಿಗೆ ಕಲಿಸುತ್ತಿದ್ದು, ಶಿಕ್ಷಣ ತಜ್ಞರು, ಎನ್‌ಜಿಒ, ಭಾಗೀದಾರರನ್ನು ಬಿಟ್ಟು, ಇಂತವರನ್ನು ಸಮಾವೇಶದಲ್ಲಿ ಭಾಗಿಯಾಗಿಸಿ ಶಿಕ್ಷಣ ಕ್ಷೇತ್ರದ ಯಾವ ಸುಧಾರಣೆ ತರುತ್ತಾರೆ, ಕೆಕೆಆರ್‌ಡಿಬಿಯಿಂದ ಇತ್ತೀಚೆಗೆ ರಚಿಸಿದ ಕಲ್ಯಾಣ ಕರ್ನಾಟಕ ಶೈಕ್ಷಣೀಕ ಸಮಿತಿಯಲ್ಲಿ ರಾಯಚೂರು, ಯಾದಗಿರಿ, ಕೊಪ್ಪಳದವರಿಗೆ ಆದ್ಯತೆ ನೀಡದೇ ವಂಚಿಸಿರುವ ಈ ತರುಣದಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವುದನ್ನು ಬಿಟ್ಟು ಕೆಕೆಆರ್‌ಡಿಬಿ ಅಧ್ಯಕ್ಷರು, ಶಿಕ್ಷಣ ಇಲಾಖೆಯ ಆಯುಕ್ತರು ತರಾತುರಿಯಲ್ಲಿ ಬೇಕಾಬಿಟ್ಟಿಯಾಗಿ ಎರಡು ದಿನಗಳ ಶಿಕ್ಷಣ ಭಾಗೀದಾರರ ಸಮಾವೇಶವನ್ನು ಯಾವ ಪುರುಷಾರ್ಥಕ್ಕಾಗಿ ಆಯೋಜಿಸಿದ್ದಾರೆ ಎನ್ನುವುದನ್ನು ಬಹಿರಂಗ ಪಡಿಸಬೇಕು ಎಂದು ಜಿಲ್ಲೆ ಶಿಕ್ಷಣ ತಜ್ಞರು ಆಕ್ರೋಶಭರಿತದಿಂದ ಕೂಡಿದ ಒತ್ತಾಯವನ್ನು ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ