ಚಾರಿತ್ರ್ಯ, ಸನ್ನಡತೆ, ಸದ್ಗುಣಗಳಿಲ್ಲದ ಶಿಕ್ಷಣ ಅರ್ಥಹೀನ

KannadaprabhaNewsNetwork | Published : Oct 25, 2024 1:04 AM

ಸಾರಾಂಶ

ಹೊಸದುರ್ಗ: ಚಾರಿತ್ರ್ಯ, ಸನ್ನಡತೆ, ಸದ್ಗುಣಗಳಿಲ್ಲದ ಶಿಕ್ಷಣ ಅರ್ಥಹೀನ. ಬುದ್ಧಿ ವಿಕಾಸವಾದಂತೆ ಅನೇಕ ರೀತಿ ಕಾಮನೆಗಳಿಗೆ ಬಲಿಯಾಗಿ ಮಕ್ಕಳು ದಾರಿತಪ್ಪುತ್ತಿದ್ದಾರೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ವಿಷಾದಿಸಿದರು.

ಹೊಸದುರ್ಗ: ಚಾರಿತ್ರ್ಯ, ಸನ್ನಡತೆ, ಸದ್ಗುಣಗಳಿಲ್ಲದ ಶಿಕ್ಷಣ ಅರ್ಥಹೀನ. ಬುದ್ಧಿ ವಿಕಾಸವಾದಂತೆ ಅನೇಕ ರೀತಿ ಕಾಮನೆಗಳಿಗೆ ಬಲಿಯಾಗಿ ಮಕ್ಕಳು ದಾರಿತಪ್ಪುತ್ತಿದ್ದಾರೆ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ವಿಷಾದಿಸಿದರು.

ತಾಲೂಕಿನ ಸಾಣೇಹಳ್ಳಿಯ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಬೆಂಗಳೂರಿನ ಆರ್.ವಿ. ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಎನ್.ಎಸ್.ಎಸ್. ಶಿಬಿರದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಜ್ಞಾನ ನಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತದೆಯೇ ಹೊರತಾಗಿ ವಿವೇಕಸ್ಥರನ್ನಾಗಿ ಮಾಡುತ್ತಿಲ್ಲ. ವಿವೇಕ ಯಾವಾಗಲೂ ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುವಂಥದ್ದು. ವಿವೇಕ ಎಂದೂ ನಮ್ಮನ್ನು ದಾರಿ ತಪ್ಪಿಸುವುದಿಲ್ಲ. ಅಂತಹ ವಿವೇಕ ನಮ್ಮ ಮನೆಯಿಂದ, ಮಠದಿಂದ, ಶಾಲೆಯಿಂದ, ಸಮಾಜದಿಂದ ಪ್ರಾರಂಭವಾಗಬೇಕು. ಆದರೆ ಇವತ್ತು ಅಂತಹ ವಿವೇಕ ಯಾವುದೇ ಕ್ಷೇತ್ರದಲ್ಲಿ ಸಿಗದೇ ಇರುವುದು ದುರಂತದ ಸಂಗತಿ ಎಂದರು.

ಇಂದಿನ ವಿದ್ಯೆ ಕೇವಲ ಉದ್ಯೋಗ ಪಡೆದು ಸಂಪಾದನೆಗೆ ಮಾತ್ರ ಸೀಮಿತವಾಗಿದೆ. ಆದರೆ ನಿಜವಾದ ವಿದ್ಯೆ ನಮ್ಮಲ್ಲಿರುವ ಅಹಂಕಾರವನ್ನು ಅಳಿಸಿ ಅಜ್ಞಾನವನ್ನು ತೊಡೆದು ಮಾನವೀಯ ಮೌಲ್ಯಗಳನ್ನು ತುಂಬಬೇಕು. ಮಾನವೀಯ ಮೌಲ್ಯಗಳನ್ನು ತುಂಬದೇ ಇರುವ ಶಿಕ್ಷಣ ಶಿಕ್ಷಣವೇ ಅಲ್ಲ. ನಮ್ಮ ವಿದ್ಯಾರ್ಥಿಗಳು ಗುರುವನ್ನು ಮೀರಿಸುವ ರೀತಿಯಲ್ಲಿ ತಮ್ಮ ನೈತಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಕಾಪಾಡಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ತಲೆಎತ್ತಿ ಬಾಳಲಿಕ್ಕೆ ಸಾಧ್ಯ ಎಂದರು.ವಿಶ್ವದಲ್ಲಿ ಇಂದು ಹೆಣ್ಣು, ಮಣ್ಣು, ಹೊನ್ನಿಗಾಗಿ ಹೋರಾಟ ಮಾಡುತ್ತಿರುವವರನ್ನು ಕಾಣುತ್ತಿದ್ದೇವೆ. ಅವೇ ನಮ್ಮ ಸಂಪತ್ತೆಂದು ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಆದರೆ ನಿಜವಾದ ಸಂಪತ್ತು ಜ್ಞಾನರತ್ನ. ಜ್ಞಾನರತ್ನವನ್ನು ಸಂಪತ್ತೆಂದು ಭಾವಿಸಿಕೊಂಡು ಜ್ಞಾನನಿಧಿಗಳಾದರೆ ಏನುಬೇಕಾದರೂ ಸಂಪತ್ತು ಗಳಿಸಬಹುದು. ಇತ್ತೀಚಿನ ದಿನಮಾನಗಳಲ್ಲಿ ಕಾಲೇಜು ಅಂದರೆ ಭಯ ಪಡುವ ವಾತಾವರಣ ನಿರ್ಮಾಣ ಆಗಿದೆ. ರ‍್ಯಾಗಿಂಗ್ ಸಂಸ್ಕೃತಿ ಕೆಲವು ಕಾಲೇಜುಗಳಲ್ಲಿ ಅವಾಂತರಗಳನ್ನು ಸೃಷ್ಟಿ ಮಾಡಿದೆ. ರ‍್ಯಾಗಿಂಗ್ ಸಂಸ್ಕೃತಿ ನಮ್ಮದಲ್ಲ. ಇನ್ನೊಬ್ಬರನ್ನು ಗೌರವಿಸುವ ಸಂಸ್ಕೃತಿ ನಮ್ಮದಾಗಬೇಕು ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸೈಯಾದ್ ಮೋಸಿನ್ ಮಾತನಾಡಿ ಮಠದಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ಸಂಸ್ಕಾರ ದೊರೆಯುವುದು. ನಾನೂ ಸಿರಿಗೆರೆ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದರಿಂದಲೇ ನನಗೆ ಸಂಸ್ಕಾರ ಬಂದಿರುವುದು. ಓದಿಗಿಂತ ಸಂಸ್ಕಾರ ಮುಖ್ಯ. ಸಂಸ್ಕಾರ ಇದ್ದರೆ ನಿಮ್ಮನ್ನು ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗುವುದು ಎಂದು ತಿಳಿಸಿದರು. ವೇದಿಕೆಯ ಮೇಲೆ ಎನ್‌ಎಸ್‌ಎಸ್ ಶಿಬಿರದ ಅಧಿಕಾರಿ ಡಾ. ಹರೀಶ್‌ಕುಮಾರ್, ಶಿಕ್ಷಕರ ತರಬೇತಿ ಸಂಸ್ಥೆಯ ಉಪನ್ಯಾಸಕ ಶಶಿಧರ ಬಿ.ಆರ್., ಅಶೋಕ ಬಿ.ಈ., ರಾಜಪ್ಪ, ಮುಖೋಪಾಧ್ಯಾಯರಾದ ಬಸವರಾಜ್, ಶಿವಕುಮಾರ ಇದ್ದರು. ೫೦ ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article