ಪ್ರಧಾನಿ ನರೇಂದ್ರ ಮೋದಿಯಿಂದ ಶೈಕ್ಷಣಿಕ ಪ್ರಗತಿಗೆ ಶ್ರಮ

KannadaprabhaNewsNetwork | Published : Feb 21, 2024 2:05 AM

ಸಾರಾಂಶ

ಪ್ರಧಾನಮಂತ್ರಿ ನರೇಂದ್ರ ಮೋದಿ ಜನಸಾಮಾನ್ಯರ ಬದುಕಿಗೆ ಆಸರೆಯಾಗುವಂತಹ ಕಾರ್ಯಕ್ರಮಗಳನ್ನು ದೇಶದಲ್ಲಿ ಅನುಷ್ಠಾನ

ಗಂಗಾವತಿ: ಕಳೆದ ಹತ್ತು ವರ್ಷದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದೇಶದ್ಯಾಂತ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿದೆ ಎಂದು ಸಂಸದ ಸಂಗಣ್ಣ ಕರಡಿ ಹರ್ಷ ವ್ಯಕ್ತಪಡಿಸಿದರು.

ಮಂಗಳವಾರ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದಿಂದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿದ್ದಂತೆ ಗಂಗಾವತಿ ನಗರದ ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಜಮ್ಮು-ಕಾಶ್ಮೀರದಲ್ಲಿ ನಡೆದ ಕಾರ್ಯಕ್ರಮದಿಂದ ವರ್ಚುವಲ್‌ ಮೂಲಕ ರಾಜ್ಯದ ಚಿಕ್ಕಮಗಳೂರು ಮತ್ತು ಗಂಗಾವತಿ ಸೇರಿದಂತೆ 25 ಕೇಂದ್ರೀಯ ವಿದ್ಯಾಲಯದ ನೂತನ ಕಟ್ಟಡ, 19 ಜವಾಹರ್‌ ನವೋದಯ ಶಾಲೆ, 10 ಐಐಟಿ, 2 ಎನ್‍ಐಟಿ, 2 ಕೌಶಲ್ಯಾಭಿವೃದ್ಧಿ ಕೇಂದ್ರ, ಇನ್ನಿತರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಿರುವುದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿದೆ ಎಂದು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಜನಸಾಮಾನ್ಯರ ಬದುಕಿಗೆ ಆಸರೆಯಾಗುವಂತಹ ಕಾರ್ಯಕ್ರಮಗಳನ್ನು ದೇಶದಲ್ಲಿ ಅನುಷ್ಠಾನಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಕೇಂದ್ರೀಯ ವಿದ್ಯಾಲಯ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಜನಪರ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ್ಷ ಸಾಕ್ಷಿಯಾಗಿದೆ. ಹಿಂದೆ ಹಿರಿಯರು ಮಕ್ಕಳಿಗೆ ಬಂಗಾರ, ಭೂಮಿ ಮತ್ತಿತರ ಆಸ್ತಿ ಗಳಿಸುತ್ತಿದ್ದರು. ಆದರೆ ಈಗ ಬಡವರು ಕೂಡಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಶಿಕ್ಷಣ ಮಕ್ಕಳಿಗೆ ಬದುಕು ಕಟ್ಟಿಕೊಡುತ್ತದೆ ಎಂಬ ಜಾಗೃತಿ ಮೂಡಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗಂಗಾವತಿ ನಗರಕ್ಕೆ ರೈಲ್ವೆ, ಕೇಂದ್ರೀಯ ವಿದ್ಯಾಲಯ, ಅಮೃತ ಸಿಟಿ ಯೋಜನೆ ಸಾಕಾರಗೊಳಿಸಿದೆ ಮತ್ತು ಕೊಪ್ಪಳ ಕ್ಷೇತ್ರದಲ್ಲಿ ನನ್ನ ಅಧಿಕಾರದ ಅವಧಿಯಲ್ಲಿ ನನೆಗುದಿಗೆ ಬಿದ್ದಿದ್ದ ಗಿಣಿಗೇರಾ ಮೆಹಬೂಬ್‍ನಗರ ರೈಲ್ವೆ ಯೋಜನೆ ತ್ವರಿತಗೊಳಿಸುವ ಕೆಲಸ ಮಾಡಿದ್ದು, ಸಿಂಧನೂರ ವರೆಗೂ ರೈಲು ಸಂಚಾರ ಈ ತಿಂಗಳ ಪ್ರಾರಂಭವಾಗಲಿದೆ ಮತ್ತು ಗದಗ ವಾಡಿ ಯೋಜನೆ ರೈಲು ಕುಷ್ಟಗಿಗೆ ಪ್ರಾರಂಭವಾಗುತ್ತದೆ. ಜತೆಗೆ ದರೋಜಿ ಗಂಗಾವತಿ ರೈಲ್ವೆ ಮಾರ್ಗಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದ್ದು, ಬಾಗಲಕೋಟೆ ವರೆಗೂ ಇದು ವಿಸ್ತರಿಸಲಿದೆ. ಕನಕಗಿರಿ, ಕುಷ್ಟಗಿ, ಹುನಗುಂದ ಮತ್ತಿತರ ತಾಲೂಕುಗಳಿಗೂ ಯೋಜನೆ ತಲುಪಲಿದೆ. ಐತಿಹಾಸಿಕ ಹುಲಿಗೆಯಲ್ಲಿ ನೂತನ ರೈಲ್ವೆ ನಿಲ್ದಾಣ ಮತ್ತು ಮೇಲ್ಸೆತುವೆ ಕಾಮಗಾರಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೊಪ್ಪಳ ಲೋಕಸಭೆ ವ್ಯಾಪ್ತಿಯ ಸಿಂಧನೂರು ಕುಷ್ಟಗಿಗೂ ರೈಲ್ವೆ ಸಂಚಾರ ಪ್ರಾರಂಭವಾಗಲಿದೆ. ಜನರ ಬೇಡಿಕೆಯಂತೆ ದರೋಜಿಯಿಂದ ಗಂಗಾವತಿ ಬಾಗಲಕೋಟೆ ಮಾರ್ಗದ ರೈಲ್ವೆ ಮಾರ್ಗದ ಸಮೀಕ್ಷೆ ಪೂರ್ಣಗೊಂಡಿದ್ದು, ಶೀಘ್ರ ಕೇಂದ್ರಕ್ಕೆ ಸಲ್ಲಿಸಿ ಈ ಯೋಜನೆ ಅನುಷ್ಠಾನಕ್ಕೆ ಹಸಿರು ನಿಶಾನೆ ದೊರೆಯುವ ವಿಶ್ವಾಸವಿದೆ. ಗಂಗಾವತಿಯಲ್ಲಿ ಕೇಂದ್ರೀಯ ವಿದ್ಯಾಲಯ, ಅಮೃತಸಿಟಿ, ರೈಲ್ವೆ ಪ್ರಾರಂಭ ಸೇರಿದಂತೆ ನನ್ನ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಹಲವು ಯೋಜನೆ ಪ್ರಾಮಾಣಿಕವಾಗಿ ಅನುಷ್ಟಾನಗೊಳಿಸಿದ್ದೇನೆ ಎಂದರು.

ಜಿಲ್ಲಾಧಿಕಾರಿ ನಲೀನ್ ಅತುಲ್ ಮಾತನಾಡಿ, ಕೇಂದ್ರೀಯ ವಿದ್ಯಾಲಯದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ. ನಾನು ಕೂಡಾ ಕೆವಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಯಾಗಿದ್ದು, ಇಂತಹ ಸುಸಜ್ಜಿತ ಕಟ್ಟಡಗಳ ಸೌಲಭ್ಯ ಇರಲಿಲ್ಲ. ಆದರೆ ಈಗ ಸುಸಜ್ಜಿತ ಕಟ್ಟಡದಲ್ಲಿ ಗುಣಮಟ್ಟದ ಶಿಕ್ಷಣ ನೀಡುವಂತ ಶಿಕ್ಷಕರು ಮತ್ತು ಎಲ್ಲ ರೀತಿಯ ಮೂಲಭೂತ ಸೌಕರ್ಯಗಳ ಅನುಕೂಲವಿದೆ. ಪಾಲಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಕರ್ನಾಟಕದ ಕೇಂದ್ರೀಯ ವಿದ್ಯಾಲಯ ಸಂಘಟನೆಯ ಉಪ ಆಯುಕ್ತ ಪಿ.ಸಿ. ರಾಜು, ಪ್ರಾಚಾರ್ಯ ಉಮೇಶ ಪ್ರಜಾಪತಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ. ವೀರಪ್ಪ, ಕಾಡಾ ಮಾಜಿ ಅಧ್ಯಕ್ಷ ಗಿರೇಗೌಡ, ತಿಪ್ಪೇರುದ್ರಸ್ವಾಮಿ, ಜಿಪಂ ಮಾಜಿ ಸದಸ್ಯ ಸಿದ್ಧರಾಮಯ್ಯಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪ ನಾಯಕ, ಕಾಶೀನಾಥ ಚಿತ್ರಗಾರ, ಚೆನ್ನಪ್ಪಮಳಗಿ ಮತ್ತಿತರು ಇದ್ದರು.

Share this article