ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತಗೊಳಿಸಲು ವಿವಿಧ ಇಲಾಖೆಗಳು ಹಾಗೂ ಅಧಿಕಾರಿಗಳೊಂದಿಗೆ ಸಾರ್ವಜನಿಕರೂ ಪಣ ತೊಡಬೇಕು ಕೈ ಜೋಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಎನ್.ಸುಬ್ರಮಣ್ಯ ತಿಳಿಸಿದರು.ಶನಿವಾರ ಜಿಲ್ಲಾ ನ್ಯಾಯಾಂಗ ಕಚೇರಿ ಬಳಿ ಆಯೋಜಿಸಿದ್ದ ಬಾಲ್ಯವಿವಾಹ ವಿರೋಧಿ ಬೃಹತ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಾಲ್ಯ ವಿವಾಹ ತಡೆಗಟ್ಟಲು ಮೊದಲು ಹೆಣ್ಣು ಮಕ್ಕಳು ಸಂಕಲ್ಪ ಮಾಡಬೇಕು. ಬಾಲ್ಯ ವಿವಾಹದ ದುಷ್ಪರಿಣಾಮಗಳು, ಕಾನೂನುಗಳ ಬಗ್ಗೆ ತಿಳಿದುಕೊಂಡು ಬಾಲ್ಯ ವಿವಾಹ ವಿರೋಧಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಬಾಲ್ಯ ವಿವಾಹದ ಪ್ರಕರಣ ಎದುರಾದಲ್ಲಿ ಅಥವಾ ಕಂಡುಬಂದಲ್ಲಿ ಮಕ್ಕಳ ಸಹಾಯವಾಣಿ-೧೦೯೮ ಅಥವಾ ೧೧೨ಕ್ಕೆ ಕರೆ ಮಾಡಿದರೆ ತಕ್ಷಣವೇ ಅಧಿಕಾರಿಗಳು ಬಾಲ್ಯ ವಿವಾಹ ನಿಲ್ಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವರು ಎಂದು ನುಡಿದರು.ಅನಕ್ಷರತೆ ಹಾಗೂ ಬಡತನದಿಂದ ಈ ಹಿಂದೆ ಬಾಲ್ಯ ವಿವಾಹಗಳು ನಡೆಯುತ್ತಿತ್ತು, ಇಂದು ಎಲ್ಲರೂ ಅಕ್ಷರಸ್ಥರಾಗಿದ್ದಾರೆ. ಈಗಲೂ ಬಾಲ್ಯ ವಿವಾಹ ನಡೆಯುತ್ತದೆ ಎಂದರೆ ಇಂತಹ ಸಾಮಾಜಿಕ ಪಿಡುಗನ್ನು ತಡೆಗಟ್ಟಲು ಎಲ್ಲರೂ ಜಾಗೃತರಾಗಿ ಹೋರಾಟ ನಡೆಸಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಸಮಾಜದಲ್ಲಿ ಬಡತನ, ಅನಕ್ಷರತೆ, ಮೂಢನಂಬಿಕೆ ಹೆಚ್ಚಿದ್ದ ಕಾರಣ ಬಾಲ್ಯವಿವಾಹಗಳು ನಡೆಯುತ್ತಿತ್ತು. ಆದರೆ, ಇಂದಿನ ಆಧುನಿಕ ಸಮಾಜದಲ್ಲಿ ಶಿಕ್ಷಣ, ತಂತ್ರಜ್ಞಾನ, ವೈಚಾರಿಕತೆಯಲ್ಲಿ ಮುಂದೆ ಬಂದಿದ್ದೇವೆ. ಆದರೂ ನಮ್ಮ ಸುತ್ತಮುತ್ತಲೂ ಬಾಲ್ಯವಿವಾಹದಂತಹ ಪ್ರಕರಣಗಳು ಕಂಡುಬರುತ್ತಿರುವುದು ತಲೆ ತಗ್ಗಿಸುವ ಸಂಗತಿ. ಬಾಲ್ಯ ವಿವಾಹ ಸಮಾಜಕ್ಕೆ ಅಂಟಿಕೊಂಡಿರುವ ಕಳಂಕ. ಇದನ್ನು ತೊಡೆದುಹಾಕಲು ಇಲಾಖೆಗಳೊಂದಿಗೆ ಸಾರ್ವಜನಿಕರು ಜೊತೆಗೆ ನಿಲ್ಲಬೇಕು ಎಂದು ಮನವಿ ಮಾಡಿದರು.ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ನಿರಂತರವಾಗಿ ಗೈರು ಹಾಜರಾದರೆ ತಕ್ಷಣ ಶಿಕ್ಷಕರು ಎಚ್ಚೆತ್ತು ಕೊಂಡು ಅವರ ಪೋಷಕರನ್ನು ಸಂಪರ್ಕಿಸಿ ಕಾರಣ ತಿಳಿದುಕೊಳ್ಳಬೇಕು. ಇದರಿಂದ ಬಾಲ್ಯವಿವಾಹ ಪ್ರಕರಣಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ಗ್ರಾಮೀಣ ಭಾಗದಲ್ಲಿರುವ ಹಲವಾರು ಇಲಾಖೆಗಳ ಅಧಿಕಾರಿ, ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ಕಣ್ಣು ತಪ್ಪಿಸಿ ಬಾಲ್ಯ ವಿವಾಹ ನಡೆಯಲು ಸಾಧ್ಯವಿಲ್ಲ. ಜಾಗೃತರಾಗಿ ಕಾರ್ಯನಿರ್ವಹಿಸಿದರೆ ಬಾಲ್ಯ ವಿವಾಹ ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಬಹಳ ಹಿಂದೆ ಬೀದಿ ನಾಟಕ, ಸಾಕ್ಷ್ಯಚಿತ್ರಗಳು, ಜಾನಪದ ಕಲಾ ಜಾಥಾಗಳ ಮೂಲಕ ಬಾಲ್ಯ ವಿವಾಹ ತಡೆಯಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು, ಈಗ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಗ್ರಾಮ ಸಭೆಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಅವರ ಹಕ್ಕು ಹಾಗೂ ಕರ್ತವ್ಯಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಗ್ರಾಮ ಸಭೆಗಳಲ್ಲಿ ಮಕ್ಕಳು ತಮಗೆ ಉದ್ಭವಿಸುವ ಸಂದೇಹಗಳ ಬಗ್ಗೆ ಪತ್ರ ಮುಖೇನ ಪ್ರಶ್ನೆಗಳನ್ನು ಸಲ್ಲಿಸಿದರೆ ಉತ್ತರ ನೀಡಲಾಗುತ್ತಿದೆ. ಮಕ್ಕಳ ಗ್ರಾಮ ಸಭೆಯಲ್ಲಿ ಬಾಲ್ಯ ವಿವಾಹದ ದುಷ್ಪರಿಣಾಮಗಳ ಕುರಿತು ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ನುಡಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಮಾತನಾಡಿ, ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿಗಳನ್ನು ವಿರೋಧಿಸಿ ಅನೇಕ ಮಹನೀಯರು ಬ್ರಿಟಿಷ್ ಆಡಳಿತ ಅವಧಿಯಲ್ಲೇ ಹೋರಾಟ ನಡೆಸಿದರು. ಬಾಲ್ಯ ವಿವಾಹ ನಿಷೇಧ ಹಾಗೂ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದು ಅನುಷ್ಠಾನ ಹಾಗೂ ಹೋರಾಟದ ನಂತರ ಬಾಲ್ಯ ವಿವಾಹ ಪ್ರಕರಣಗಳು ಕಡಿಮೆಯಾಗುತ್ತಿದೆ. ಆದರೆ, ಪ್ರೇಮ ಪ್ರಕರಣಗಳ ಮೂಲಕ ಬಾಲ ಗರ್ಭಿಣಿಯರ ಪ್ರಕರಣ ಹೆಚ್ಚಾಗುತ್ತಿದ್ದು, ಇದನ್ನು ಸರಿಪಡಿಸುವುದು ಹೊಸ ಸವಾಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಬಕಾರಿ ಉಪ ಆಯುಕ್ತ ನಾಗಶಯನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ನಗರಸಭೆ ಪೌರಾಯುಕ್ತೆ ಪಂಪಾಶ್ರೀ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಲುವಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಶ್ಮಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.