ಸಕ್ಕರೆ ಕಾರ್ಖಾನೆ ಮಾದರಿಯಾಗಿಸಲು ಪ್ರಯತ್ನ

KannadaprabhaNewsNetwork | Published : Oct 13, 2024 1:02 AM

ಸಾರಾಂಶ

ಲೋಕಾಪೂರ ಸಮೀಪದ ತಿಮ್ಮಾಪೂರ ಗ್ರಾಮದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆ ಕೀಯನ್ನು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ಬಾಡಗಂಡಿ ಬೀಳಗಿ ಶುಗರ್‌ ಮಿಲ್‌ ಲಿಮಿಟೆಡ್‌ ರವರಗೆ ಹಸ್ತಾಂತರಿಸಿದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಜಿಲ್ಲೆಯಲ್ಲಿಯೇ ಒಂದು ಮಾದರಿ ಕಾರ್ಖಾನೆಯಾಗಿ ಮಾಡುತ್ತೇನೆಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಭರವಸೆ ನೀಡಿದರು.

ಸಮೀಪದ ತಿಮ್ಮಾಪೂರ ಗ್ರಾಮದಲ್ಲಿರುವ ರೈತರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಬಾಡಗಂಡಿ ಬೀಳಗಿ ಶುಗರ್‌ ಮಿಲ್‌ ಲಿಮಿಟೆಡ್‌ ಇವರ ಸಹಯೋಗದಲ್ಲಿ ನಡೆದ ಕಾರ್ಖಾನೆ ಪುನಾರಂಭ ಹಾಗೂ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಕಾರ್ಖಾನೆ ಹಣ ಸಂಪಾದನೆ ಮಾಡುವುದಕ್ಕಾಗಿ ೩೦ ವರ್ಷಗಳ ಕಾಲ ಲೀಸ್ ಮೇಲೆ ಪಡೆದಿಲ್ಲ. ಕಾರ್ಖಾನೆಯಲ್ಲಿನ ಕಾರ್ಮಿಕರು ಹಾಗೂ ರೈತರು ಉಳಿಬೇಕು, ಕಾರ್ಖಾನೆ ಬೆಳೆಸಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಹೊಂದಿದ್ದೇನೆ. ಈ ಕಾರ್ಖಾನೆ ನನ್ನದಲ್ಲ, ಕಾರ್ಮಿಕರು ನಿಮ್ಮದೆಂದು ಭಾವಿಸಿ ಶ್ರದ್ಧೆಯಿಂದ ಕೆಲಸ ಮಾಡಿದರೆ ಕಾರ್ಖಾನೆ ಉಳಿಸಿ ಬೆಳೆಸಲು ಸಾಧ್ಯವೆಂದು ಹೇಳಿದರು.

ಸಹಕಾರಿ ಎಂಬುದು ಮುಖ್ಯಮಂತ್ರಿಗಿಂತ ದೊಡ್ಡದೆಂದು ನಂಬಿದವ ನಾನು. ಸಹಕಾರಿ ಕ್ಷೇತ್ರ ಸಮಾಜದ ಕಟ್ಟಕಡೆ ವ್ಯಕ್ತಿಗೂ ಸಹಾಯ ಮಾಡುವ ಕ್ಷೇತ್ರ ಯಾವುದಾದರು ಈ ದೇಶದಲ್ಲಿ ಇದೆ ಅಂದರೆ ಅದು ಸಹಕಾರ ಕ್ಷೇತ್ರವಾಗಿದೆ. ಈ ಕಾರ್ಖಾನೆ ಪ್ರಾರಂಭಿಸುವಲ್ಲಿ ಸಚಿವ ಆರ್.ಬಿ.ತಿಮ್ಮಾಪೂರ ಶ್ರಮ ಹಾಗೂ ಪ್ರಯತ್ನ ಸಾಕಷ್ಟಿದ್ದು, ಹಗಲಿರುಳು ಶ್ರಮಿಸಿದ್ದಾರೆ. ಒಂದು ವೇಳೆ ಅವರೇನಾದರು ಕಾರ್ಖಾನೆಗಾಗಿ ಆಸಕ್ತಿ ತೋರಿಸದೆ ಕೈಕಟ್ಟಿ ಸುಮ್ಮನೆ ಕುಳಿತಿದ್ದರೆ, ಇಂದು ಕಾರ್ಖಾನೆ ಪ್ರಾರಂಭವಾಗುತ್ತಿರಲಿಲ್ಲ. ಕಾರ್ಮಿಕರು, ರೈತರು ಹಾಗೂ ಷೇರುದಾರರು ಸಚಿವ ಆರ್.ಬಿ.ತಿಮ್ಮಾಪೂರ ಅವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದರು.

ಅಬಕಾರಿ ಹಾಗೂ ಜಿಲ್ಲಾ ಉಸ್ತುವರಿ ಸಚಿವ ಆರ್.ಬಿ.ತಿಮ್ಮಾಪೂರ ಮಾತನಾಡಿ, ಚುನಾವಣೆ ಪೂರ್ವದಲ್ಲಿ ನಾನು ಬಂದ್‌ ಆಗಿರುವ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದಾಗಿ ಮಾತು ಕೊಟ್ಟಂತೆ ಈಗ ಪ್ರಾರಂಭಿಸುವ ಮೂಲಕ ನುಡಿದಂತೆ ನಡೆದಿದ್ದೇನೆ. ಈ ಕಾರ್ಖಾನೆ ಪ್ರಾರಂಭಿಸಲು ನಮ್ಮ ನೆಚ್ಚಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಹಕಾರದ ಫಲವಾಗಿ ಕಾರ್ಖಾನೆ ಪ್ರಾರಂಭವಾಗಿದೆ. ಈ ಕಾರ್ಖಾನೆ ಪ್ರಾರಂಭಕ್ಕಾಗಿ, ಉಳಿಸುವುದಕ್ಕಾಗಿ ನಾನು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ, ಕಾರ್ಖಾನೆಗಳು ಬದುಕಿದರೆ ಮಾತ್ರ ಕಾರ್ಮಿಕರು ಮತ್ತು ರೈತರು ಬದುಕಲು ಸಾಧ್ಯ. ಹೀಗಾಗಿ ಕಾರ್ಮಿಕರು ಈ ಕಾರ್ಖಾನೆ ತಮ್ಮದೆಂದು ತಿಳಿದು ರಾಜಕೀಯ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಕಾರ್ಖಾನೆ ಮತ್ತು ಮಾಲೀಕರು ಉಳಿಯಲು ಸಾಧ್ಯ ಎಂದು ಹೇಳಿದರು.

ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಸರ್ಕಾರ ಮಾಡದೇ ಇರುವ ಕೆಲಸಗಳನ್ನು ಸಹಕಾರಿಗಳು ಮಾಡಿವೆ. ಕಾರ್ಖಾನೆಗಳ ಸ್ಥಾಪನೆಯಲ್ಲಿ ಸಹಕಾರಿ ರಂಗ ದೊಡ್ಡ ಕ್ರಾಂತಿಯನ್ನೇ ಮಾಡಿವೆ. ಬಂದ್‌ ಆಗಿರುವ ಸಕ್ಕರೆ ಕಾರ್ಖಾನೆಯನ್ನು ಎಸ್.ಆರ್.ಪಾಟೀಲ ಪ್ರಾರಂಭಿಸಲು ಮುಂದೆ ಬಂದಿದ್ದಾರೆ. ಕಾರ್ಮಿಕರು ಹಾಗೂ ರೈತರು ಅವರಿಗೆ ಸಹಾಯ ಸಹಕಾರ ಮಾಡಿದ್ದಲ್ಲಿ ಈ ಕಾರ್ಖಾನೆ ಉತ್ತಮವಾಗಿ ನಡೆಸಲು ಸಾಧ್ಯ. ಯಾವುದೇ ಕಾರಣಕ್ಕೂ ಈ ಕಾರ್ಖಾನೆ ಬಂದ್‌ ಆಗಬಾರದು. ಏಕೆಂದರೆ ಈ ಕಾರ್ಖಾನೆ ಪ್ರಾರಂಭಕ್ಕೆ ಸಚಿವ ಆರ್.ಬಿ. ತಿಮ್ಮಾಪೂರ ಅವರು ಬಹಳಷ್ಟು ಆಸಕ್ತಿ ವ್ಯಕ್ತಪಡಿಸಿದ್ದಾರೆ ಹಾಗೂ ಹಗಲಿರುಳು ಶ್ರಮಿಸಿದ್ದಾರೆ ಅವರ ಶ್ರಮದ ಫಲ ಇಂದು ಕಾರ್ಖಾನೆ ಪ್ರಾರಂಭಿಸಲು ಸಾಧ್ಯವಾಗಿದೆ ಎಂದರು.

ಈ ವೇಳೆ ಶಾಸಕ ಎಚ್.ವೈ.ಮೇಟಿ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಜಯಕುಮಾರ ಸರನಾಯಕ, ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ಕಾರ್ಖಾನೆ ಷೇರುದಾರರು, ರೈತರು, ಕಾರ್ಮಿಕರು, ಬಾಡಗಂಡಿ ಬೀಳಗಿ ಶುಗರ್‌ ಮಿಲ್‌ ಲಿಮಿಟೆಡ್‌ ಸಿಬ್ಬಂದಿ ವರ್ಗ ಇದ್ದರು.

Share this article