ಸಿದ್ದಾಪುರ: ಅಖಂಡ ಭಾರತದ ಭೂಪಟ ಚಿತ್ರಿಸುವ ಮೂಲಕ ಜನತೆಯಲ್ಲಿ ಭಾರತ ದೇಶದ ಪರ್ವತ, ನದಿ, ಗಡಿ ಪರಿಚಯಿಸುತ್ತಿರುವ ಕಾರ್ಯ ಶ್ಲಾಘನೀಯ.ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ನಾನು ಪಾಲ್ಗೊಂಡಿದ್ದರಿಂದ ನನ್ನ ಜೀವನ ಪಾವನವಾದಂತಾಗಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ತಾಲೂಕಿನ ಶ್ರೀರಾಮದೇವಮಠ, ಗೋಸ್ವರ್ಗದಲ್ಲಿ ಮೇ ೧ ರಿಂದ ಜರುಗಲಿರುವ ವಿಶ್ವಾವಸು ಶಂಕರಪಂಚಮೀ ಉತ್ಸವದಲ್ಲಿ ನಡೆಯುವ ಪಂಚಾಯತನ ಹವನದ ಯಾಗ ಮಂಟಪ ಪ್ರತ್ಯಕ್ಷ ಭಾರತ ವರ್ಷದ ಭೂಮಿಪೂಜೆ ನೆರವೇರಿಸಿ ಸಭೆಯಲ್ಲಿ ಮಾತನಾಡಿ, ರಾಮಚಂದ್ರಾಪುರಮಠದ ರಾಘವೇಶ್ವರಭಾರತೀ ಶ್ರೀಗಳ ಆಶೀರ್ವಾದ, ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಈ ಸತ್ಕಾರ್ಯದಲ್ಲಿ ನನ್ನಿಂದ ಅಗತ್ಯ ಸಹಕಾರ ನೀಡಲು ಬದ್ಧನಿದ್ದೇನೆ. ಸರ್ಕಾರದಿಂದಲೂ ನೆರವು ನೀಡಲು ಪ್ರಯತ್ನಿಸುತ್ತೇನೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಂಕರಪಂಚಮೀ ಉತ್ಸವ ಸಮಿತಿ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ ವಹಿಸಿ ಮಾತನಾಡಿ, ಸಮಾಜಕ್ಕೆ ಅಖಂಡ ಭಾರತ ಪರಿಚಯಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಈ ಕಾರ್ಯ ಪ್ರವಾಸೋದ್ಯಮಕ್ಕೂ ಪೂರಕವಾಗಲಿದೆ. ಶಾಸಕರು ಶ್ರೀಮಠದ ಕೆಲಸ ತಾವೇ ಕೇಳಿ ಪೂರೈಸುವ ಕಾರ್ಯಮಾಡುತ್ತಾ ಬಂದಿದ್ದಾರೆ. ಮಠದ ರಸ್ತೆಯ ಇಕ್ಕೆಲಗಳಲ್ಲಿ ಬೀದಿ ದೀಪ ಅಳವಡಿಸಿದ್ದು ಅವುಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಿ ದೀಪ ಬೆಳಗುವಂತೆ ಮಾಡುವಲ್ಲಿ ಶಾಸಕರು ಸಹಕರಿಸಬೇಕು ಎಂದು ಕೋರಿಕೊಂಡರು.
ಅಭ್ಯಾಗತರಾಗಿ ಟಿಎಂಎಸ್ ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ, ಸಾಮಾಜಿಕ ಧುರೀಣ ಎಸ್.ಕೆ. ಭಾಗ್ವತ ಶಿರಸಿಮಕ್ಕಿ, ವಿ.ಎನ್.ನಾಯ್ಕ ಬೇಡ್ಕಣಿ, ಸಿ.ಆರ್. ನಾಯ್ಕ ಪಾಲ್ಗೊಂಡಿದ್ದರು.ಶಂಕರಪಂಚಮೀ ಉತ್ಸವ ಸಮಿತಿ ಗೌರವಾಧ್ಯಕ್ಷ ಜಿ.ಕೆ. ಹೆಗಡೆ ಗೋಳಗೋಡ ಪ್ರಾಸ್ತಾವಿಕ ಮಾತನಾಡಿದರು. ಪದಾಧಿಕಾರಿಗಳಾದ ಎಂ.ಎ. ಹೆಗಡೆ ಮಗೇಗಾರ, ಎಂ.ಜಿ.ರಾಮಚಂದ್ರ ಮರ್ಡುಮನೆ, ಮಹೇಶ ಚಟ್ನಳ್ಳಿ, ಎನ್.ವಿ. ಹೆಗಡೆ ಮುತ್ತಿಗೆ ಸೇರಿದಂತೆ ಅನೇಕ ಗಣ್ಯರು, ಶಿಷ್ಯ-ಭಕ್ತರು ಪಾಲ್ಗೊಂಡಿದ್ದರು.
ಭೂಮಿಪೂಜೆ, ಸಭಾ ಕಾರ್ಯಕ್ರಮದಲ್ಲಿ ಕಾಮಧೇನು ಧ್ವಜಾರೋಹಣ, ಗುರುವಂದನೆ, ಶಂಖನಾದ ನಡೆಯಿತು.