ಬೆಳೆ ಸಾಲ ಎಕರೆಗೆ ಕನಿಷ್ಟ ₹1ಲಕ್ಷ ಏರಿಸಲು ಪ್ರಯತ್ನ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork | Published : Jan 27, 2024 1:16 AM

ಸಾರಾಂಶ

ಬೆಳೆ ಸಾಲದ ಕನಿಷ್ಠ ಮಿತಿಯನ್ನು ಯಾವುದೇ ಬೆ‍ಳೆ ಇರಲಿ ಎಕರೆಗೆ 1ಲಕ್ಷ ರು.ಗಳಿಗೆ ಏರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡುವದಕ್ಕೆ ಶ್ರಮಿಸುವದಲ್ಲದೆ ಸಧ್ಯ ಶೂನ್ಯ ಬಡ್ಡಿ ದರದಲ್ಲಿ ಸಿಗುತ್ತಿರುವ 3ಲಕ್ಷ ರು.ವರೆಗಿನ ಸಾಲವನ್ನು 5ಲಕ್ಷ ರು.ಗಳಿಗೆ ಏರಿಸುವದಕ್ಕೆ ಶೀಘ್ರದಲ್ಲಿ ಕ್ರಮವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೀದರ್‌

ಜಿಲ್ಲೆಯ ರೈತರಿಗೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಸೇರಿ ವಿವಿಧ ಬ್ಯಾಂಕ್‌ಗಳು ನೀಡುವ ಬೆಳೆ ಸಾಲದ ಹಣಕಾಸು ನೆರವಿನ ಪ್ರಮಾಣವನ್ನು ಎಕರೆಗೆ ಒಂದು ಲಕ್ಷ ರು.ಗಳಿಗೆ ಏರಿಸುವ ಕುರಿತಂತೆ ರಾಜ್ಯ ಮಟ್ಟದ ಬೆಲೆ ನಿರ್ಧರಣಾ ಸಮಿತಿಯೊಂದಿಗೆ ಚರ್ಚಿಸಿ ಕ್ರಮವಹಿಸಲು ಪ್ರಯತ್ನಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಶುಕ್ರವಾರ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ನೆಹರು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ 75ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಧ್ಯ ರೈತರಿಗೆ ಬೆಳೆ ಸಾಲದ ರೂಪದಲ್ಲಿ ಸಿಗುತ್ತಿರುವ ಸಾಲ ಸೌಲಭ್ಯ ಕಡಿಮೆ. ಬೆಳೆ ಆಧಾರಿತ ಸಾಲ ನೀಡುವಿಕೆಯಿಂದ ಕಷ್ಟಕ್ಕೆ ಸಿಲುಕುತ್ತಿರುವದು ಸರ್ಕಾರದ ಗಮನಕ್ಕೆ ಬಂದಿದೆ ಎಂದರು.

ಬೆಳೆ ಸಾಲದ ಕನಿಷ್ಠ ಮಿತಿಯನ್ನು ಯಾವುದೇ ಬೆ‍ಳೆ ಇರಲಿ ಎಕರೆಗೆ 1ಲಕ್ಷ ರು.ಗಳಿಗೆ ಏರಿಸುವ ಮೂಲಕ ರೈತರಿಗೆ ಅನುಕೂಲ ಕಲ್ಪಿಸಿಕೊಡುವದಕ್ಕೆ ಶ್ರಮಿಸುವದಲ್ಲದೆ ಸಧ್ಯ ಶೂನ್ಯ ಬಡ್ಡಿ ದರದಲ್ಲಿ ಸಿಗುತ್ತಿರುವ 3ಲಕ್ಷ ರು.ವರೆಗಿನ ಸಾಲವನ್ನು 5ಲಕ್ಷ ರು.ಗಳಿಗೆ ಏರಿಸುವದಕ್ಕೆ ಶೀಘ್ರದಲ್ಲಿ ಕ್ರಮವಾಗಲಿದೆ ಎಂದು ತಿಳಿಸಿದರು.

ಜಿಲ್ಲಾ ಕೇಂದ್ರ ಬೀದರ್‌ನಲ್ಲಿ, ಜಿಲ್ಲಾಧಿಕಾರಿಗಳ ಕಚೇರಿ ಸ್ಥಳದ 5 ಎಕರೆ ಪ್ರದೇಶದಲ್ಲಿಯೇ ₹100ಕೋಟಿ ವೆಚ್ಚದಲ್ಲಿ ಸುಸಜ್ಜಿತ ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಬರುವ ಸಚಿವ ಸಂಪುಟದಲ್ಲಿ ಸರ್ಕಾರದ ಅನುಮೋದನೆ ಪಡೆಯಲು ಪ್ರಯತ್ನಿಸಲಾಗುವದು ಎಂದು ತಿಳಿಸಿದರು.

ಬೀದರ್‌ ನಗರಸಭೆ ಕಟ್ಟಡ ಪ್ರದೇಶವನ್ನೂ ಜಿಲ್ಲಾ ಸಂಕೀರ್ಣಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ್ದು, ಬೀದರ್‌ ನಗರಸಭೆಗೆ ಹೈದ್ರಾಬಾದ್‌ ರಸ್ತೆ ಮಾರ್ಗದಲ್ಲಿ ಜಮೀನು ನೀಡಲು ಯೋಜಿಸಲಾಗಿದೆ ಎಂದು ತಿಳಿಸಿದರು.

ಇನ್ನು ರಾಜ್ಯದಲ್ಲಿ 2ಲಕ್ಷ ಎಕರೆ ಅರಣ್ಯ ಪ್ರದೇಶ ಒತ್ತುವರಿಯಾಗಿದ್ದು, ಈ ಪೈಕಿ ನಾನು ಅಧಿಕಾರ ವಹಿಸಿಕೊಂಡ ನಂತರ 2ಸಾವಿರ ಎಕರೆಗೂ ಹೆಚ್ಚು ಪ್ರದೇಶವನ್ನು ವಶಕ್ಕೆ ಪಡೆದಿದ್ದು, ಈ ಕಾರ್ಯಾಚರಣೆ ಮುಂದುವರೆಯುತ್ತದೆ. ಅರಣ್ಯೀಕರಣ ಹೆಚ್ಚಳಕ್ಕೆ ಕ್ರಮವಹಿಸುತ್ತೇವೆ. ಬೀದರ್‌ ಜಿಲ್ಲೆಯಲ್ಲಿ ಈ ವರ್ಷ 20ಲಕ್ಷ ಸಸಿ ನೆಟ್ಟು ಬೆಳೆಸುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.

Share this article