ಯಾದವಾಡ ಪಿಎಚ್‌ಸಿ ಮೇಲ್ದರ್ಜೆಗೆ ಏರಿಸಲು ಪ್ರಯತ್ನ

KannadaprabhaNewsNetwork | Published : Jul 3, 2024 12:21 AM

ಸಾರಾಂಶ

ಮುಂದಿನ ದಿನಗಳಲ್ಲಿ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಲಗಿ

ಮುಂದಿನ ದಿನಗಳಲ್ಲಿ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.ತಾಲೂಕಿನ ಯಾದವಾಡ ಗ್ರಾಮದಲ್ಲಿ ಸೋಮವಾರ ಶಾಸಕರ, ದಾಲ್ಮೀಯಾ ಸಿಮೆಂಟ್ (ಭಾರತ) ಲಿಮಿಟೆಡ್ ಹಾಗೂ ಮೂಡಲಗಿ ತಾಲೂಕು ಪಂಚಾಯತಿಯ ವಿಶೇಷ ಅನುದಾನದಲ್ಲಿ ಸುಮಾರು ₹70 ಲಕ್ಷಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಯಾದವಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಯಾದವಾಡ ಹಾಗೂ ಸುತ್ತ-ಮುತ್ತಲಿನ ಬಡರೋಗಿಗಳಿಗೆ ಅನುಕೂಲವಾಗಲು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡವನ್ನು ಸಾರ್ವಜನಿಕರಿಗೆ ಅರ್ಪಿಸಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸಾರ್ವಜನಿಕರ ಮನವಿ ಮೇರೆಗೆ ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಯಾದವಾಡ ಗ್ರಾಮವು ದಿನದಿಂದ ದಿನಕ್ಕೆ ಬೆಳೆಯುತ್ತ ಅಭಿವೃದ್ಧಿಯಾಗುತ್ತಿದೆ. ಇಲ್ಲಿ ಸಕ್ಕರೆ ಹಾಗೂ ಸಿಮೆಂಟ್ ಕಾರ್ಖಾನೆಗಳು ತಲೆಯೆತ್ತಿವೆ. ರಸ್ತೆ ಸಂಚಾರವು ಕೂಡಾ ಜನದಟ್ಟನೆಯಿಂದ ಕೂಡಿದೆ. ಯಾದವಾಡಕ್ಕೆ ಹೊಂದಿಕೊಂಡಿರುವ ಅಕ್ಕಪಕ್ಕದ ಮುಧೋಳ, ರಾಮದುರ್ಗ, ಲೋಕಾಪೂರಕ್ಕೆ ಹೋಗುವ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಅರಭಾವಿ ಕ್ಷೇತ್ರದಲ್ಲಿ ರಸ್ತೆ ದುರಸ್ತಿ ಕಾಮಗಾರಿಗಳನ್ನು ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಈಗಾಗಲೇ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರಲ್ಲಿ ಮನವಿ ಮಾಡಲಾಗಿದೆ. ಗ್ರಾಮದೊಳಗಿನ ರಸ್ತೆಗಳನ್ನು ಸ್ಥಳೀಯ ಗ್ರಾಮ ಪಂಚಾಯತಿ ಸಮಿತಿಯವರು ಕೈಗೊಳ್ಳಲು ಸಲಹೆ ನೀಡಿದರು.ಅರಬಾವಿ ಕ್ಷೇತ್ರದಲ್ಲಿ ಎಲ್ಲ ಸಮಾಜಗಳ ಬಾಂಧವರು ಅಣ್ಣ-ತಮ್ಮಂದಿರರಂತೆ ಬಾಳುತ್ತಿದ್ದಾರೆ. ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಬದುಕುತ್ತಿದ್ದೇವೆ. ಗ್ರಾಮಾಭಿವೃದ್ಧಿಗೆ ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ದುಡಿಯಬೇಕು. ಅಂದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.ವೇದಿಕೆಯಲ್ಲಿ ದಾಲ್ಮೀಯಾ ಸಿಮೆಂಟ್(ಭಾರತ) ಲಿ, ಯಾದವಾಡ ಘಟಕದ ಮುಖ್ಯಸ್ಥ ಪ್ರಭಾತಕುಮಾರ ಸಿಂಗ್, ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ ಭೂತಾಳಿ, ಮೂಡಲಗಿ ತಾಲೂಕು ಪಂಚಾಯತಿ ಇಒ ಎಫ್.ಜಿ.ಚಿನ್ನನ್ನವರ, ಎಡಿಎಚ್‍ಒ ಡಾ.ಈಶ್ವರ ಗಡೇದ, ತಾಲೂಕು ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ, ತಜ್ಞವೈದ್ಯ ಡಾ.ಆರ್.ಎಸ್.ಬೆಣಚಿನಮರಡಿ, ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಉಪಸ್ಥಿತರಿದ್ದರು.ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಈ ಭಾಗದಲ್ಲಿ ಶಿಥಿಲಗೊಂಡಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪುನಃಶ್ಚೇತನ ನೀಡಲು ಹೊಸ ಕಟ್ಟಡವನ್ನು ನಿರ್ಮಿಸಲು ಯೋಜಿಸಿದ್ದೇವು. ಅದರಂತೆ ಸಾರ್ವಜನಿಕರ ಹಿತವನ್ನು ಗಮನದಲ್ಲಿಟ್ಟು ನಾನು, ದಾಲ್ಮೀಯಾ ಸಿಮೆಂಟ್ ಕಾರ್ಖಾನೆ ಹಾಗೂ ತಾಲೂಕು ಪಂಚಾಯತಿದವರು ಇದಕ್ಕಾಗಿ ಅನುದಾನ ನೀಡಿದ್ದೇವೆ. ಅದಕ್ಕಾಗಿ ಸಾಮಾಜಿಕ ಕಾರ್ಯಗಳಿಗೆ ಹೆಸರುವಾಸಿಯಾದ ದಾಲ್ಮೀಯಾ ಕಾರ್ಖಾನೆಗೆ ಕೃತಜ್ಞತೆ ಸಲ್ಲಿಸುವೆ.

-ಬಾಲಚಂದ್ರ ಜಾರಕಿಹೊಳಿ, ಶಾಸಕರು.

Share this article