ಸಂವಿಧಾನ ಉಳಿಸಲು ಕಾಂಗ್ರೆಸ್ ಬೆಂಬಲಿಸಿ: ಡಾ. ಯತೀಂದ್ರ

KannadaprabhaNewsNetwork | Published : Apr 6, 2024 12:46 AM

ಸಾರಾಂಶ

ಕೇಂದ್ರ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ. ದಿನನಿತ್ಯ ಬಳಕೆಯ ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆಗಳನ್ನು ಏರಿಸಿ ಬಡವರು ಬದುಕುವುದೇ ಕಷ್ಟವಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ದೇಶದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದ್ದು, ಸಂವಿಧಾನವನ್ನು ಉಳಿಸಲು ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರನ್ನು ಬೆಂಬಲಿಸಬೇಕು ಎಂದು ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

ಚಾಮುಂಡೇಶ್ವರಿ ಕ್ಷೇತ್ರದ ಗುಂಗ್ರಾಲ್ ಛತ್ರ ದೊಡ್ಡಗೌಡನಕೊಪ್ಪಲು, ಆನಂದೂರು, ನಾಗವಾಲ, ಬೆಳವಾಡಿ, ಬಸವನಪುರ ಗ್ರಾಮಗಳಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ ಪರವಾಗಿ ನಡೆದ ಚುನಾವಣಾ ಪ್ರಚಾರ ಸಮಾರಂಭಗಳಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಬಡವರು ಬಡವರಾಗಿಯೇ ಇದ್ದಾರೆ, ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಎಂದು ಟೀಕಿಸಿದರು.

ಕೇಂದ್ರ ಸರ್ಕಾರ ಬಡವರ ವಿರೋಧಿ ಸರ್ಕಾರವಾಗಿದೆ. ದಿನನಿತ್ಯ ಬಳಕೆಯ ಡೀಸೆಲ್, ಪೆಟ್ರೋಲ್, ಗ್ಯಾಸ್ ಬೆಲೆಗಳನ್ನು ಏರಿಸಿ ಬಡವರು ಬದುಕುವುದೇ ಕಷ್ಟವಾಗಿದೆ. ಮೋದಿ ಸರ್ಕಾರ ಕೊಟ್ಟ 600 ಭರವಸೆಗಳಲ್ಲಿ ಶೇ. 10ರಷ್ಟು ಭರವಸೆಗಳನ್ನು ಈಡೇರಿಸಿಲ್ಲ. ಆದರೆ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. 2013 ರಿಂದ 2018 ರವರೆಗೆ ರಾಜ್ಯದಲ್ಲಿ ಇದ್ದ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿತ್ತು. ಈಗ 5 ಗ್ಯಾರಂಟಿ ಈಡೇರಿಸಿ ನುಡಿದಂತೆ ನಡೆದಿದೆ. ಒಂದು ಕುಟುಂಬಕ್ಕೆ ತಿಂಗಳಿಗೆ 4 ರಿಂದ 5 ಸಾವಿರ ಹಣ ಸಿಗುತ್ತಿರುವುದರಿಂದ ಬಡವರು ನೆಮ್ಮದಿಯಾಗಿದ್ದಾರೆ ಎಂದರು.

ಕೇಂದ್ರದಲ್ಲಿ ಈ ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಒಂದು ವರ್ಷಕ್ಕೆ 1 ಲಕ್ಷ ರೂ. ನೀಡುತ್ತಾರೆ. ರೈತರ ಸಾಲ ಮನ್ನಾ ಮಾಡುತ್ತೇವೆ. ಕೃಷಿ ಕ್ಷೇತ್ರದ ಜಿ.ಎಸ್.ಟಿ ತೆಗೆಯುತ್ತೇವೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ತಿಳಿಸಿ ಜನಪರ ಹೋರಾಟಗಾರರಾದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಗೆಲುವಿಗೆ ಎಲ್ಲರೂ ಶ್ರಮಿಸಬೇಕು ಎಂದು ಕರೆ ನೀಡಿದರು.

ಸಮಾರಂಭಗಳಲ್ಲಿ ಮೈಮುಲ್ ಮಾಜಿ ಅಧ್ಯಕ್ಷ ಸಿದ್ದೇಗೌಡ, ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವ್, ಜಿಪಂ ಮಾಜಿ ಸದಸ್ಯರಾದ ಅರುಣ್ ಕುಮಾರ್, ಬೀರಿಹುಂಡಿ ಬಸವಣ್ಣ, ಮಾದೇಗೌಡ, ರಾಕೇಶ್ ಪಾಪಣ್ಣ, ಕಾಂಗ್ರೆಸ್ ಸೇವಾದಳದ ಮಾಜಿ ಅಧ್ಯಕ್ಷ ಜಯರಾಮೇಗೌಡ, ಆನಂದೂರು ರಾಮೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ಗುರುಸ್ವಾಮಿ, ಮುಖಂಡರಾದ ಕೃಷ್ಣಕುಮಾರ ಸಾಗರ್, ನಾಗವಾಲ ನರೇಂದ್ರ, ಜಿ.ಕೆ. ಬಸವಣ್ಣ, ಡಾ. ಪ್ರಕಾಶ್, ಯದುಕುಮಾರ್, ಮಾರ್ಬಳ್ಳಿ ಕುಮಾರ್, ಹರೀಶ್ ಮೊಗಣ್ಣ, ಮಹೇಶ್, ಡಾ. ಪ್ರಕಾಶ್, ಚಲುವೇಗೌಡ, ಸೀಗಳ್ಳಿ ಕುಮಾರ್, ಹುಯಿಲಾಳು ರಾಘವೇಂದ್ರ, ಕಾಮಾಕ್ಷಮ್ಮ, ಭಾಗ್ಯ, ಸ್ವಾಮಿ ಇದ್ದರು.

Share this article