ಕುಡಿವ ನೀರು ಪೂರೈಕೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗದು

KannadaprabhaNewsNetwork | Published : Mar 7, 2024 1:51 AM

ಸಾರಾಂಶ

ಲೋಕಸಭೆ ಚುನಾವಣೆ ಘೋಷಣೆಯಾದರೂ ಕುಡಿವ ನೀರು ಪೂರೈಕೆಗೆ ಚುನಾವಣೆ ನೀತಿ ಸಂಹಿತಿ ಅಡ್ಡಿಯಾಗದು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಗಮನಹರಿಸಬೇಕು

ಚಿತ್ರದುರ್ಗ: ಲೋಕಸಭೆ ಚುನಾವಣೆ ಘೋಷಣೆಯಾದರೂ ಕುಡಿವ ನೀರು ಪೂರೈಕೆಗೆ ಚುನಾವಣೆ ನೀತಿ ಸಂಹಿತಿ ಅಡ್ಡಿಯಾಗದು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಜನ-ಜಾನುವಾರುಗಳಿಗೆ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಡಿಯುವ ನೀರಿನ ಸಮಸ್ಯೆಯ ದೂರುಗಳು ಬಂದಾಗ ಅಧಿಕಾರಿಗಳು ಚುನಾವಣೆ ಕೆಲಸ ಎಂದು ಹೇಳದೇ ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು. ಬೇಸಿಗೆ ಗಂಭೀರವಾಗಿರುವುದರಿಂದ ಕುಡಿಯುವ ನೀರಿಗೆ ಹೆಚ್ಚಿನ ಗಮನ ನೀಡಬೇಕು ಎಂದು ಹೇಳಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಮಾತನಾಡಿ, ಜಿಲ್ಲೆಯಲ್ಲಿ 189 ಗ್ರಾಮ ಪಂಚಾಯಿತಿಗಳಿದ್ದು, 1069 ಗ್ರಾಮಗಳಿವೆ. 19 ಗ್ರಾಮ ಪಂಚಾಯಿತಿಗಳ 47 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಈಗಾಗಲೇ 35 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ಕೆಲವು ದಿನಗಳಲ್ಲಿ 364 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವೂ 13 ಅಡಿ ಕೆಳಗೆ ಹೋಗಿದೆ. ಈಗಾಗಲೇ ಖಾಸಗಿ ಬೋರ್‌ವೆಲ್‌ಗಳನ್ನು ಗುರುತಿಸಲಾಗಿದ್ದು, 13 ಬೋರ್‌ವೆಲ್ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಹಾಗೂ ಹೊಸ ಕೊಳವೆಬಾವಿ ಕೊರೆಸಲು ನಿರ್ಧರಿಸಲಾಗಿದೆ ಎಂದರು.

ಜಿಲ್ಲೆಯ ಎಲ್ಲ ತಾಲೂಕಿಗೂ ಈಗಾಗಲೇ ಆರ್‌ಡಿಪಿಆರ್‌ವತಿಯಿಂದ 25 ಲಕ್ಷ ರು. ಬಿಡುಗಡೆ ಮಾಡಲಾಗಿದೆ. ಕುಡಿಯುವ ನೀರಿಗೆ ಸಂಬಂಧಪಟ್ಟಂತೆ 2.70 ಕೋಟಿ ರು. ಬಿಡುಗಡೆಯಾಗಿದ್ದು, ಸಮಸ್ಯೆ ಬಂದ ತಕ್ಷಣ, ಸ್ಪಂದಿಸಿ ಪರಿಹರಿಸಲಾಗುವುದು. ಜಿಲ್ಲಾ ಹಾಗೂ ತಾಲೂಕು ಕಚೇರಿಗಳಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಇದಕ್ಕಾಗಿ ನೋಡಲ್ ಅಧಿಕಾರಿ ನೇಮಕ ಮಾಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಕುಡಿಯುವ ನೀರು ಸಮಸ್ಯೆ ನಿವಾರಣೆಗಾಗಿ ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳು ಒಳಗೊಂಡಂತೆ ಜೂನ್ ಮಾಹೆಯವರಗೂ ಕ್ರಿಯಾ ಯೋಜನೆ ರೂಪಿಸಬೇಕು. ಈ ಬಾರಿಯ ಬೇಸಿಗೆ ತುಂಬಾ ಗಂಭೀರವಾಗಿದೆ. ಜನ-ಜಾನುವಾರುಗಳಿಗೆ ನೀರು ಕೊಡಲು ಗಮನಹರಿಸಬೇಕು. ಜವಾಬ್ದಾರಿಯುತ ಅಧಿಕಾರಿಯನ್ನು ಗ್ರಾಮ ಪಂಚಾಯಿತಿಗೆ ನಿಯೋಜನೆ ಮಾಡಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಸಲಹೆ ನೀಡಿದರು.

ದಿಶಾ ಸಭೆಯಲ್ಲಿಯೂ ಸಿಜೇರಿಯನ್ ಮಾರ್ದನಿ: ದಿಶಾ ಸಭೆಯಲ್ಲಿಯ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿರುವ ಸಿಜೇರಿಯನ್ ಹೆರಿಗೆ ಸಂಗತಿ ಮಾರ್ದನಿಸಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಕೇಂದ್ರ ಸಚಿವ ಎ.ನಾರಾಯಣಸ್ವಮಿ, ಹೆಚ್ಚಿನ ಸಿಜೇರಿಯನ್ ಹೆರಿಗೆ ಪ್ರಮಾಣ ಜರುಗುವ ಜಿಲ್ಲೆಗಳ ಪೈಕಿ ಚಿತ್ರದುರ್ಗ ಜಿಲ್ಲೆ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದೆ. ಸಿಜೇರಿಯನ್ ಹೆರಿಗೆ ಪ್ರಮಾಣ ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಕುರಿತು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಾಸದ್ ಅವರನ್ನು ಪ್ರಶ್ನಿಸಿದರು. ಸಿಜೇರಿಯನ್‍ನಲ್ಲಿ ಚಿತ್ರದುರ್ಗ ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದಿರುವುದು ಅವಮಾನಕರ ಸಂಗತಿಯಾಗಿದೆ. ಯಾವ ಕಾರಣಕ್ಕಾಗಿ ಸಿಜೇರಿಯನ್ ಹೆರಿಗೆ ಹೆಚ್ಚಾಗುತ್ತಿದೆ? ವೈದ್ಯರು ಹಣ ಪಡೆಯುವ ಇಚ್ಛೆಯಿಂದ ಸಿಜೇರಿಯನ್ ಮಾಡಲು ಮುಂದಾಗುತ್ತಿದ್ದಾರಾ? ಎಂದರು.

ಕೇಂದ್ರ ಸಚಿವರ ಮಾತಿಗೆ ಧ್ವನಿಗೂಡಿಸಿದ ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಚಿತ್ರದುರ್ಗ ಜಿಲ್ಲೆಯ ಹೆಣ್ಣು ಮಕ್ಕಳಿಗೆ ಸಾಮಾನ್ಯ ಹೆರಿಗೆ ಆಗುವುದಿಲ್ಲವೇ? ಎಲ್ಲರೂ ಸಿಜೇರಿಯನ್‍ಗೆ ಒಳಗಾಗಬೇಕೆ? ಎಂದು ಖಾರವಾಗಿ ಪ್ರಶ್ನಿಸಿ, ಕೂಡಲೇ ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಸಿಜೇರಿಯನ್ ಪ್ರಕರಣಗಳ ಕಾರಣ ಪತ್ತೆ ಹಚ್ಚುವಂತೆ ಸೂಚನೆ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರೇಣುಪ್ರಾಸದ್ ಉತ್ತರಿಸಿ, ಅಧಿಕಾರವಹಿಸಿಕೊಂಡು 5 ತಿಂಗಳು ಆಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುತ್ತಿದೆ. ಇದುವರೆಗೂ ಕರ್ತವ್ಯ ಲೋಪ ಎಸಗಿದ ನಾಲ್ಕು ವೈದ್ಯಾಧಿಕಾರಿಗಳನ್ನು ಅನುಮಾನತು ಮಾಡಿ, ಎಂಬುದಾಗಿ ಇಲಾಖೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಜಿಲ್ಲೆಯ ಗರ್ಭಿಣಿಯರಲ್ಲಿ ಅನೀಮಿಯಾ ಹಾಗೂ ಅಪೌಷ್ಠಿಕತೆ ಹೆಚ್ಚಾಗಿ ಕಂಡುಬರುವುದರಿಂದ ಹೆರಿಗೆ ಸಂದರ್ಭದಲ್ಲಿ ಹೆಚ್ಚಿನ ಸಿಜೇರಿಯನ್ ಮಾಡಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂಧರ್ ಕುಮಾರ್ ಮೀನಾ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Share this article