ಮಾಧ್ಯಮಗಳ ಮೇಲೂ ಚುನಾವಣಾ ಆಯೋಗ ಕಣ್ಣು!

KannadaprabhaNewsNetwork |  
Published : Apr 13, 2024, 01:04 AM IST
12ಡಿಡಬ್ಲೂಡಿ1ಟಿವಿ ಚಾಲನ್‌ಗಳನ್ನು ಸೂಕ್ಷ್ಮವಾಗಿ ವೀಕ್ಷಿಸುತ್ತಿರುವ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ (ಎಂಸಿಎಂಸಿ) ಸಮಿತಿಯ ಸದಸ್ಯರು. | Kannada Prabha

ಸಾರಾಂಶ

ಮಾದರಿ ನೀತಿ ಸಂಹಿತೆ ಮಾಧ್ಯಮಗಳಿಗೂ ಅನ್ವಯವಾಗುತ್ತದೆ. ಅಭ್ಯರ್ಥಿಗಳು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಫೇಡ್‌ ಸುದ್ದಿಗಳನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಸಾಧ್ಯತೆಗಳಿವೆ.

ಧಾರವಾಡ:

ಲೋಕಸಭಾ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸಲು ಹಾಗೂ ರಾಜಕೀಯ ಲಾಭಕ್ಕಾಗಿ ಮಾಧ್ಯಮಗಳ ದುರ್ಬಳಕೆ ತಡೆಯಲು ಚುನಾವಣಾ ಆಯೋಗವು ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ (ಎಂಸಿಎಂಸಿ) ಸಮಿತಿಯನ್ನು ರಚಿಸಿ ಮಾಧ್ಯಮಗಳ ಮೇಲೂ ಕಟ್ಟುನಿಟ್ಟಿನ ನಿಗಾವಹಿಸಿದೆ.

ಜಿಲ್ಲಾ ಚುನಾವಣಾಧಿಕಾರಿ ಸಮಿತಿಯ ಅಧ್ಯಕ್ಷರಾಗಿದ್ದು, ವಾರ್ತಾ ಇಲಾಖೆಯ ಮಾಹಿತಿ ಅಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿದ್ದು, ಸಮಿತಿಯು 25 ಜನರನ್ನು ಒಳಗೊಂಡಿದೆ. ವಾರ್ತಾ ಇಲಾಖೆಯಲ್ಲಿ ಸಮಿತಿ ಸದಸ್ಯರು ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ವಿದ್ಯುನ್ಮಾನ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಜಾಹೀರಾತು, ಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ಜಾಹೀರಾತುಗಳ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದೆ.

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಧಾರವಾಡ ಲೋಕಸಭಾ ಕ್ಷೇತ್ರದ ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು, ಮಾದರಿ ನೀತಿ ಸಂಹಿತೆ ಮಾಧ್ಯಮಗಳಿಗೂ ಅನ್ವಯವಾಗುತ್ತದೆ. ಅಭ್ಯರ್ಥಿಗಳು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಫೇಡ್‌ ಸುದ್ದಿಗಳನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಸಾಧ್ಯತೆಗಳಿವೆ. ಆದ್ದರಿಂದ ಸಮಿತಿ ಸದಸ್ಯರು ಎಲ್ಲ ರೀತಿಯ ಮಾಧ್ಯಮಗಳ ಮೇಲೆ ನಿಗಾ ಇಡುತ್ತಿದ್ದಾರೆ. ಸ್ಥಳೀಯ ಕೇಬಲ್ ಆಪರೇಟರ್‌ಗಳು ಸಹ ತಮ್ಮ ಜವಾಬ್ದಾರಿ ಅರಿತು ಯಾವುದೇ ರಾಜಕೀಯ ಜಾಹೀರಾತು ಪ್ರಸಾರ ಮಾಡುವ ಮೊದಲು ಸಮಿತಿಯಿಂದ ಅನುಮತಿ ಪಡೆಯಬೇಕು ಎಂದರು.

ಮತದಾನ ಪೂರ್ಣಗೊಳ್ಳುವವರೆಗೆ ನಿತ್ಯ ಪತ್ರಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುವುದು, ಎಲೆಕ್ಟ್ರಾನಿಕ್ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ವೀಕ್ಷಿಸುವುದು. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದ ಪ್ರತಿಯೊಂದು ಕಾರ್ಯಕ್ರಮವನ್ನು ಪರಿಶೀಲಿಸಬೇಕು ಮತ್ತು ಯಾವುದೇ ಉಲ್ಲಂಘನೆ ಅಥವಾ ಪಾವತಿಸಿದ ಸುದ್ದಿ ವರದಿಯಾದಲ್ಲಿ ತಕ್ಷಣ ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದು ಸಮಿತಿ ಸದಸ್ಯರ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಚುನಾವಣಾ ದಿನಾಂಕಕ್ಕೆ ನಾಲ್ಕು ದಿನಗಳ ಮೊದಲು ರಾಜಕೀಯ ಜಾಹೀರಾತು ಪ್ರಕಟಿಸಲು ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ಚಾನೆಲ್‌ಗಳು ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಸಾಮಾಜಿಕ ಜಾಲತಾಣಗಳು ಸಹ ಇಸಿಐನ ಮಾರ್ಗಸೂಚಿ ಅನುಸರಿಸಬೇಕು. ಇಲ್ಲದೇ ಹೋದಲ್ಲಿ ಅಂತಹ ಚಾನಲ್‌ಗಳ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಲಾಗುವುದು ಎಂದು ದಿವ್ಯಪ್ರಭು ಎಚ್ಚರಿಸಿದರು.

ಅಭ್ಯರ್ಥಿಗಳು ಅಥವಾ ರಾಜಕೀಯ ಪಕ್ಷಗಳು ಯಾವುದೇ ಜಾಹೀರಾತು ಪ್ರಸಾರ ಮಾಡಲು ಮಾಧ್ಯಮ ದೃಢೀಕರಣ ತಂಡದಿಂದ ಅನುಮತಿ ಪಡೆದಿದ್ದಾರೆಯೇ ಎಂಬುದನ್ನು ಸ್ಥಳೀಯ ಕೇಬಲ್ ಆಪರೇಟರ್‌ಗಳು ಪರಿಶೀಲಿಸಬೇಕು. ಈ ನಿಯಮ ಉಲ್ಲಂಘಿಸಿದಲ್ಲಿ ಪ್ರಕರಣ ದಾಖಲಿಸುವ ಮುನ್ನವೇ ಕೇಬಲ್ ಆಪರೇಟರ್ ಕೊಠಡಿ ಹಾಗೂ ಎಲ್ಲ ಉಪಕರಣ ಜಪ್ತಿ ಮಾಡುವ ಅಧಿಕಾರ ಜಿಲ್ಲಾ ಚುನಾವಣಾಧಿಕಾರಿಗೆ ಇದೆ ಎಂದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...