ಚುನಾವಣೆ ಇಲ್ಲಿ, ಮತಯಾಚನೆ ಅಲ್ಲಿ!

KannadaprabhaNewsNetwork |  
Published : Apr 06, 2024, 12:51 AM IST
ಎಲೆಕ್ಷನನ್ | Kannada Prabha

ಸಾರಾಂಶ

ಉಡುಪಿ ಮತ್ತು ದ.ಕ. ಜಿಲ್ಲೆಯ ಗಣನೀಯ ಸಂಖ್ಯೆಯ ಜನರು ಈ ಮಹಾನಗರಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಅವರು ವರ್ಷಗಳಿಂದ ಅಲ್ಲಿದ್ದರೂ ಅವರ ಮತದಾನ ಹಕ್ಕು ಇನ್ನೂ ಊರಿನಲ್ಲಿಯೇ ಇದೆ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ ವಿಧಾನಸಭೆ ಅಥವಾ ಲೋಕಸಭಾ ಚುನಾವಣೆಯೇ ಇರಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಮತಯಾಚನೆಗೆ ಬೆಂಗಳೂರು, ಮುಂಬೈ, ಸಾಂಗ್ಲಿ ಇತ್ಯಾದಿ ಕಡೆಗೆ ಹೋಗುತ್ತಾರೆ.

ಚುನಾವಣೆ ಇಲ್ಲಿ, ಮತಯಾಚನೆ ಅಲ್ಲಿ, ಇದು ಅಚ್ಚರಿಯಾದರೂ ನಿಜ. ಕಾರಣ ಉಡುಪಿ ಮತ್ತು ದ.ಕ. ಜಿಲ್ಲೆಯ ಗಣನೀಯ ಸಂಖ್ಯೆಯ ಜನರು ಈ ಮಹಾನಗರಗಳಲ್ಲಿ ಉದ್ಯೋಗಿಗಳಾಗಿದ್ದಾರೆ. ಅವರು ವರ್ಷಗಳಿಂದ ಅಲ್ಲಿದ್ದರೂ ಅವರ ಮತದಾನ ಹಕ್ಕು ಇನ್ನೂ ಊರಿನಲ್ಲಿಯೇ ಇದೆ. ಆದ್ದರಿಂದ ಚುನಾವಣೆಯ ಸಂದರ್ಭದಲ್ಲಿ ಒಂದು ದಿನದ ಮಟ್ಟಿಗಾದರೂ ಅವರು ಊರಿಗೆ ಬಂದು ತಮ್ಮ ಪರವಾಗಿ ಮತ ಚಲಾಯಿಸಿ ಎಂದು ಅಭ್ಯರ್ಥಿಗಳು ಅಲ್ಲಿಗೆ ಹೋಗಿ ಯಾಚಿಸುವುದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿಬಿಟ್ಟಿದೆ.

ಈ ಬಾರಿ ಲೋಕಸಭಾ ಚುನಾವಣೆಯಲ್ಲಂತೂ ಲೋಕಸಭಾ ಅಭ್ಯರ್ಥಿಗಳ ಜೊತೆಗೆ ಉಭಯ ಜಿಲ್ಲೆಗಳು ಶಾಸಕರೂ ಕೂಡ ಮುಂಬೈ, ಬೆಂಗಳೂರಿನಲ್ಲಿರುವ ಕರಾವಳಿಗರನ್ನು ಭೇಟಿಯಾಗಿ ಮತಯಾಚಿಸುತ್ತಿದ್ದಾರೆ. ಕಾರಣ ಉಭಯ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಮತ್ತು ಬಿಜೆಪಿ ಟಫ್ ಫೈಟ್ ನಡೆಸುತ್ತಿರುವುದರಿಂದ ಒಂದೊಂದು ಮತವೂ ಗೆಲ್ಲುವ ಲೆಕ್ಕಕ್ಕೆ ಬರುತ್ತದೆ.

* ಇಂದು ಬೆಂಗಳೂರಿಗೆ ಕೋಟ-ಚೌಟ

ಉಡುಪಿ-ಚಿಕ್ಕಮಗಳೂರಿನ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ದ.ಕ. ಕ್ಷೇತ್ರದ ಅಭ್ಯರ್ಥಿ ಬ್ರಿಜೇಶ್ ಚೌಟ ಅವರು ಮಾ.6ರಂದು ಬೆಂಗಳೂರಿಗೆ ತೆರಳಿ ಕರಾವಳಿಗರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಾ.7ರಂದು ಮುಂಬೈಗೆ ತೆರಳಿ ಅಲ್ಲಿ ಕರಾವಳಿಗರು ಹೆಚ್ಚಿರುವ ಕಡೆಗಳಲ್ಲಿ ಬೆಂಬಲಯಾಚಿಸಲಿದ್ದಾರೆ. ಅವರಿಗೆ ಎರಡೂ ಜಿಲ್ಲೆಗಳ ಶಾಸಕರೂ ಸಾಥ್ ನೀಡಲಿದ್ದಾರೆ.

ಕಾಂಗ್ರೇಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರು ಈಗಾಗಲೇ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ಮುಂಬೈಯ ಕರಾವಳಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ.

ಮುಂಬೈ ಮಹಾನಗರವೊಂದರಲ್ಲಿ ಉಡುಪಿ ಮತ್ತು ದ.ಕ. ಜಿಲ್ಲೆಯ 50 ಸಾವಿರಕ್ಕೂ ಅಧಿಕ ಉದ್ಯೋಗಿಗಳು, ಉದ್ಯಮಿಗಳು ಇದ್ದಾರೆ. ಬೆಂಗಳೂರಿನಲ್ಲಿ ಅಂದಾಜು 10-15 ಸಾವಿರ ಮಂದಿ ಕರಾವಳಿಗರಿದ್ದಾರೆ. ಕುಂದಾಪುರ ಭಾಗದಿಂದ ಬೆಂಗಳೂರಿನಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಹೊಟೇಲ್ ಉದ್ಯಮಿಗಳು, ಕಾರ್ಮಿಕರಿದ್ದಾರೆ.

ಈ ಬಾರಿ ಎರಡೂ ಪಕ್ಷಗಳಿಗೆ ಒಂದೊಂದು ಮತವೂ ಅಮೂಲ್ಯವಾದ್ದರಿಂದ, ಹೊರಜಿಲ್ಲೆಯಲ್ಲಿರುವ ಇಷ್ಟು ಸಂಖ್ಯೆಯ ಕರಾವಳಿಗರನ್ನು ನಿರ್ಲಕ್ಷ್ಯಿಸುವುದಕ್ಕೆ ಸಾಧ್ಯವಿಲ್ಲ.

ಕರಾವಳಿಯಲ್ಲಿ ನಿರ್ಣಾಯಕರಾಗಿರುವ ಬಿಲ್ಲವ, ಬಂಟ ಜಾತಿಯ ಸಂಘಟನೆಗಳ ಪ್ರಮುಖ ನಾಯಕರು ಇರುವುದು ಮುಂಬೈಯಲ್ಲಿ, ಅವರು ತಮ್ಮ ಸಮುದಾಯದ ಮೇಲೆ ಪ್ರಭಾವ ಬೀರುವಂತಹ ತಾಕತ್ತುಳ್ಳವರು. ಅವರ ಮೂಲಕ ಅವರ ಸಮುದಾಯದ ಮತಗಳನ್ನು ಸೆಳೆಯುವುದು ಉಭಯ ಪಕ್ಷಗಳ ತಂತ್ರಗಾರಿಕೆ, ಗೆಲ್ಲುವುದಕ್ಕೆ ಅದು ಅನಿವಾರ್ಯವೂ ಹೌದು.

ಇತ್ತೀಚಿನ ವರ್ಷಗಳಲ್ಲಿ ಅಭ್ಯರ್ಥಿಗಳ ಈ ಮನವಿ ಮತ್ತು ಪರವೂರಿನಲ್ಲಿರುವ ಕರಾವಳಿಗರಲ್ಲಿ ಮೂಡಿಸುವ ಜಾಗೃತಿಯಿಂದಾಗಿ ಊರಿಗೆ ಬಂದು ಮತದಾನ ಮಾಡುವವರ ಸಂಖ್ಯೆ ಹೆಚ್ಚಿರುವುದು ಮಾತ್ರ ಒಳ್ಳೆಯ ಬೆಳವಣಿಗೆ.

PREV

Recommended Stories

ಜಾತಿಗಣತಿ ಈಗ ಕಗ್ಗಂಟು : ತಡರಾತ್ರಿವರೆಗೆ ಸಭೆ
ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ