ಬಿಜೆಪಿಯಿಂದ ನೈತಿಕತೆ ಅಧಾರದಲ್ಲಿ ಮತಯಾಚನೆ: ಎಂ.ಕೆ.ಪ್ರಾಣೇಶ್

KannadaprabhaNewsNetwork | Published : Mar 10, 2024 1:49 AM

ಸಾರಾಂಶ

ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರರಹಿತವಾಗಿ ಕಳೆದ 10 ವರ್ಷಗಳಿಂದ ಆಡಳಿತ ನಡೆಸಿದೆ. , ಮೋದಿಗೆ ಸರಿಸಾಟಿಯಾಗುವ ನಾಯಕ ಇಲ್ಲ. ದೇಶ ಉಳಿಯಬೇಕು ಅಂದರೆ ಮೋದಿ ಪ್ರಧಾನಿ ಆಗಬೇಕು ಎಂದು ಪ್ರಾಣೇಶ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಬಿಜೆಪಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ನೈತಿಕತೆಯ ಆಧಾರದ ಮೇರೆಗೆ ಚುನಾವಣೆಗೆ ಹೋಗುತ್ತದೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರ ರಹಿತವಾಗಿ ಜನಸಾಮಾನ್ಯರಿಗೆ ಕೊಟ್ಟಿರುವ ಆಶೋತ್ತರಗಳನ್ನು ಈಡೇರಿಸಿದ್ದೇವೆ. ಇದರಿಂದ ಭಾರತ ವಿಶ್ವದ 5ನೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಇದನ್ನು ಜನತೆಗೆ ಮನವರಿಕೆ ಮಾಡಿ, ಅದನ್ನು ಮುಂದುವರಿಸಲು ಮತ ಕೇಳುತಿದ್ದೇವೆ ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.ಅವರು ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರರಹಿತವಾಗಿ ಕಳೆದ 10 ವರ್ಷಗಳಿಂದ ಆಡಳಿತ ನಡೆಸಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಕೇವಲ ತನ್ನ ರಾಜಕೀಯ ತೀಟೆಗಾಗಿ, ಕೇಂದ್ರ ಸರ್ಕಾರದ ಮೇಲೆ ತೆರಿಗೆ ಹಣ ಹಂಚಿಕೆಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುತ್ತಿದೆ. ಅದೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಾಗಿ ಜನರ ತೆರಿಗೆ ಹಣದ ಮೇಲೆ ಚಪ್ಪಡಿಕಲ್ಲು ಎಳೆಯುತ್ತಿದೆ. ಕಾಂಗ್ರೆಸ್‌ಗೆ ಬಿಜೆಪಿ ಸರ್ಕಾರದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದವರು ಹೇಳಿದರು.ಅಂಬೇಡ್ಕರ್ ಅವರನ್ನು ಸೋಲಿಸಿದ, ಅವರು ನಿಧನರಾದಾಗ ದಫನ ಮಾಡಲು ಭೂಮಿ ನೀಡದ ಕಾಂಗ್ರೆಸ್‌ಗೆ ಈಗ ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದ ಅವರು, ಮೋದಿಗೆ ಸರಿಸಾಟಿಯಾಗುವ ನಾಯಕ ಇಲ್ಲ. ದೇಶ ಉಳಿಯಬೇಕು ಅಂದರೆ ಮೋದಿ ಪ್ರಧಾನಿ ಆಗಬೇಕು. ದೇಶಕ್ಕೆ ಮೋದಿ ಬೇಕು ಅಂತ ಜನ ಮತ್ತೆ ತೀರ್ಮಾನ ಮಾಡಿದ್ದಾರೆ ಎಂದರು.ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ರಾಜ್ಯಕ್ಕೆ ಯುಪಿಎ ಮತ್ತು ಎನ್‌ಡಿಎ ಅವಧಿಯ 20 ವರ್ಷಗಳ ತೆರಿಗೆ ಮತ್ತು ಅನುದಾನ ಲೆಕ್ಕಾಚಾರ ಜನತೆ ಮುಂದೆ ಇಡುತ್ತೇವೆ. ಮನಮೋಹನ್ ಸಿಂಗ್ ಸರ್ಕಾರ ರಾಜ್ಯಕ್ಕೆ 81,000 ಕೋಟಿ ತೆರಿಗೆ ಹಣ ನೀಡಿದೆ. ಮೋದಿ ಅವಧಿಯಲ್ಲಿ 2,82,000 ಲಕ್ಷ ಕೋಟಿ ನೀಡಿದೆ. ರಾಜ್ಯಕ್ಕೆ ಯುಪಿಎ ಸರ್ಕಾರದ ಅನುದಾನ 60 ಸಾವಿರ ಕೋಟಿ, ಬಿಜೆಪಿ ಸರ್ಕಾರದ ಕಾಲದಲ್ಲಿ 2.36 ಲಕ್ಷ ಕೋಟಿ ಅನುದಾನ ಬಂದಿದೆ. ಆದ್ದರಿಂದ ಯಾರಿಗೆ ಮತ ನೀಡಬೇಕು ಎಂದು ಜನರೇ ತೀರ್ಮಾನ ಮಾಡುತ್ತಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ಜಿ.ಪ್ರ.ಕಾರ್ಯದರ್ಶಿಗಳಾದ ರೇಷ್ಮಾ ಉದಯ್ ಶೆಟ್ಟಿ, ರಾಘವೇಂದ್ರ ಕಿಣಿ, ಜಿಲ್ಲಾ ವಕ್ತಾರ ವಿಜಯ್ ಕುಮಾರ್ ಉದ್ಯಾವರ ಉಪಸ್ಥಿತರಿದ್ದರು.

Share this article