ಗಾಳಿಪಟ ತೆಗೆಯಲು ಹೋಗಿ ವಿದ್ಯುತ್‌ಶಾಕ್‌: ಬಾಲಕರಿಬ್ಬರು ಗಂಭೀರ

KannadaprabhaNewsNetwork |  
Published : Sep 27, 2025, 02:00 AM IST

ಸಾರಾಂಶ

ಹೈಟೆನ್ಷನ್‌ ತಂತಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಗಾಳಿಪಟವನ್ನು ತೆಗೆದುಕೊಳ್ಳಲು ಯತ್ನಿಸಿದಾಗ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹೈಟೆನ್ಷನ್‌ ತಂತಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಗಾಳಿಪಟವನ್ನು ತೆಗೆದುಕೊಳ್ಳಲು ಯತ್ನಿಸಿದಾಗ ವಿದ್ಯುತ್ ಪ್ರವಹಿಸಿ ಇಬ್ಬರು ಬಾಲಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿನಾಯಕ ನಗರದ ನಿವಾಸಿಗಳಾದ ಸೈಯದ್ ಮೊಹಿದ್ದೀನ್‌ (10) ಹಾಗೂ ಮೊಹಮ್ಮದ್ ತೌಸಿಫ್‌ (9) ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಇಬ್ಬರು ಜೀವನ್ಮರಣ ಹೋರಾಟ ನಡೆಸಿದ್ದಾರೆ. ಮೂರು ದಿನಗಳ ಹಿಂದೆ ಸಾರಾಯಿಪಾಳ್ಯದಲ್ಲಿ ಗಾಳಿಪಟ ಹಾರಿಸುವಾಗ ವಿದ್ಯುತ್ ದುರಂತಕ್ಕೆ ಸೈಯದ್ ಹಾಗೂ ತೌಸಿಫ್ ಸಿಲುಕಿದ್ದಾರೆ.

ಖಾಸಗಿ ಶಾಲೆಯಲ್ಲಿ 5ನೇ ತರತಿಯಲ್ಲಿ ಸೈಯದ್ ಹಾಗೂ 4ನೇ ತರಗತಿಯಲ್ಲಿ ತೌಸಿಫ್ ಓದುತ್ತಿದ್ದರು. ತಮ್ಮ ಕುಟುಂಬದ ಜತೆ ಅವರು ನೆಲೆಸಿದ್ದರು. ಶಾಲೆಗೆ ದಸರಾ ರಜೆ ಹಿನ್ನಲೆಯಲ್ಲಿ ಸೆ.23 ರಂದು ಮನೆ ಬಳಿ ಗೆಳೆಯರು ಗಾಳಿಪಟ ಹಾರಿಸುತ್ತಿದ್ದರು. ಆಗ ಗಾಳಿ ಪಟ ಹಾರಿಕೊಂಡು ಹೈಟೆನ್ಷನ್‌ ತಂತಿಗೆ ಸಿಲುಕಿಕೊಂಡಿದೆ. ಆ ಗಾಳಿಪಟ ತೆಗೆದುಕೊಳ್ಳಲು ಇಬ್ಬರು ಯತ್ನಿಸಿದ್ದಾರೆ. ತಮ್ಮ ಮನೆಗೆ ಹೋಗಿ ಪರದೆ ಕಟ್ಟುವ ಕಬ್ಬಿಣದ ರೋಲ್ ಅನ್ನು ಬಾಲಕರು ತಂದಿದ್ದಾರೆ. ಬಳಿಕ ಮೂರು ಅಂತಸ್ತಿನ ಕಟ್ಟಡದ ಮಹಡಿಗೆ ಹೋಗಿ ಅಲ್ಲಿಂದ ನಿಂತು ಕಬ್ಬಿಣದ ರೋಲ್ ನಿಂದ ಗಾಳಿಪಟ ತೆಗೆದುಕೊಳ್ಳಲು ಸೈಯದ್ ಹಾಗೂ ತೌಸಿಫ್ ಪ್ರಯತ್ನಿಸಿದ್ದಾರೆ. ಆಗ ಕಬ್ಬಿಣದ ರೋಲ್‌ ತಾಕಿದ ಕೂಡಲೇ ಹೈಟೆನ್ಷನ್ ತಂತಿಯಿಂದ ಬಾಲಕರಿಗೆ ವಿದ್ಯುತ್ ಪ್ರವಹಿಸಿದೆ. ಕೂಡಲೇ ಚೀರಾಟ ಕೇಳಿ ಧಾವಿಸಿದ ಸ್ಥಳೀಯರು, ವಿದ್ಯುತ್‌ ಅವಘಡದಲ್ಲಿ ಸಿಲುಕಿದ್ದ ಬಾಲಕರನ್ನು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಅಲ್ಲಿಂದ ವಿಕ್ಟೋರಿಯಾ ಆಸ್ಪತ್ರೆಗೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಸ್ಥಳಾಂತರಿಸಲಾಗಿದೆ. ಘಟನೆಯಲ್ಲಿ ಶೇ.30 ರಷ್ಟು ಬಾಲಕರ ದೇಹವು ಸುಟ್ಟು ಹೋಗಿದ್ದು, ತುರ್ತು ಚಿಕಿತ್ಸಾ ಘಟಕದಲ್ಲಿ ಅವರಿಗೆ ವೈದ್ಯೋಪಾಚರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ