ಎನ್.ನಾಗೇಂದ್ರಸ್ವಾಮಿ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಕಾವೇರಿ ವನ್ಯ ಧಾಮ ವ್ಯಾಪ್ತಿಯ ಕೊತ್ತನೂರು ವನ್ಯ ಜೀವಿ ವಲಯದ ಮತ್ತೀಪುರ ಅರಣ್ಯ ಬೀಟ್ ನಲ್ಲಿ ತಾಯಾನೆಯೊಂದು ಸಾವಿಗೀಡಾಗಿರುವುದರಿಂದ ಮರಿಯಾನೆ ಕಣ್ಣೀರಿಡುತ್ತಲೇ ಸ್ಥಳ ಬಿಟ್ಟು ಕದಲದೆ ಮುಖವೇದನೆ ಪಡುತ್ತಿರುವ ದೃಶ್ಯ ಮನಕಲಕುವ ಹೃದಯ ವಿದ್ರಾವಕ ಘಟನೆಯೊಂದು ಬುಧವಾರ ವರದಿಯಾಗಿದೆ. ಕಳೆದ ಎರಡು, ಮೂರು ದಿನಗಳಿಂದಲೂ ಒಂದು ಗಂಡಾನೆ, 1 ತಾಯಾನೆ, ಮತ್ತೊಂದು ಮರಿಯಾನೆ ಈ ಮೂರು ಆನೆಗಳು ಮತ್ತೀಪುರ ಅರಣ್ಯ ಬೀಟ್ ಸಂಚರಿಸುತ್ತಿದ್ದ ಬಗ್ಗೆ ಅರಣ್ಯಾಧಿಕಾರಿಗಳಿಗೆ ಆಭಾಗದ ರೈತರು ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಬುಧವಾರ ಬೆಳಂಬೆಳಗ್ಗೆ ತಾಯಾನೆಯೊಂದು ಸಾವಿಗೀಡಾಗಿರುವ ವಿಚಾರ ಅರಣ್ಯಾಧಿಕಾರಿಗಳ ಗಮನಕ್ಕೆ ಬಂದಿದೆ. ಈ ಹಿನ್ನೆಲೆ ಸ್ಥಳಕ್ಕೆ ತೆರಳಿದ ವೇಳೆ ಜೊತೆಯಲ್ಲಿದ್ದ ಮರಿಯಾನೆ ಆಕ್ರಂದನ ಮುಗಿಲು ಮುಟ್ಟಿತ್ತು. ಮರಿಯಾನೆ ತನ್ನ ಸೊಂಡಲಿನಲ್ಲಿ ತಾಯಿ ಮುಖ, ದೇಹವನ್ನು ಸವರುತ್ತ ಸತ್ತು ಮಲಗಿರುವ ತಾಯಾನೆಯ ಎದ್ದೇಳಿಸುವ ಪ್ರಯತ್ನವನ್ನು ಮಾಡುತ್ತಿರುವುದು ಕಂಡು ಬಂತು. ತನ್ನ ತಾಯಾನೆ ಇನ್ನು ಮಲಗಿದೆ ಎಂಬ ಭಾವನೆ ತಳೆದ ಮರಿಯಾನೆ ತನ್ನ ಸೊಂಡಲಿನಿಂದ ತಾಯಾನೆ ಮುಖ ಸವರತ್ತು, ಎಬ್ಬಿಸುವ ಪ್ರಯತ್ನ ಮಾಡುತ್ತಲೆ ಇತ್ತು, ಸ್ವಲ್ಪ ಸಮಯದ ನಂತರ ಅತ್ತ ಕಡೆ, ಇತ್ತ ಕಡೆ ತೆರಳುವುದು ಪುನಃ ತಾಯಾನೆಯನ್ನು ಎಬ್ಬಿಸಿ ಕರೆದುಕೊಂಡು ಹೋಗುವ ಮರಿಯಾನೆಯ ಪ್ರಯತ್ನ ನಿಜಕ್ಕೂ ಮನಕಲಕುವಂತಿತ್ತು.
ತಾಯಿಯ ಮಮತೆ, ಪ್ರೀತಿಗೆ ಬಂಧಿಯಾಗಿ ಬೆಳೆಯಬೇಕಿದ್ದ ಮರಿಯಾನೆ ತಬ್ಬಲಿ ಮಗುವಂತೆ ತಾಯಿಯ ಮೃತ ದೇಹದ ಸುತ್ತಲೂ ಸುತ್ತಾಡುತ್ತಲೆ ತಾಯಿಯ ಕನವರಿಕೆ ಮಾಡುತ್ತಿದೆ. ಜೊತೆಗೆ ರೋದನೆ ಮಾಡುತ್ತಲೆ ಇರುವ ದೃಶ್ಯ ಕಂಡು ಬಂತು. ಈ ಮೂಖ ವೇದನೆ ನಿಜಕ್ಕೂ ಮುಗಿಲು ಮುಟ್ಟುವಂತಿತ್ತು, ತಾಯಾನೆ ಬಳಿ ತೆರಳಲು ಅರಣ್ಯಾ ಸಿಬ್ಬಂದಿಗಳು ಯತ್ನಿಸುತ್ತಿದ್ದಂತೆ ಅಸುನೀಗಿದ ದೂರದ ಸ್ಥಳದಲ್ಲಿರುವ ಆನೆಗಳ ಗುಂಪು ಹಾಗೂ ಮರಿಯಾನೇ ರೋಧನೆಯಿಂದಾಗಿ ಮುಂದಿನ ಕಾರ್ಯಾಚರಣೆಗೂ ಅಡ್ಡಿಯಾಗಿದೆ.ಈ ಹಿನ್ನೆಲೆ ಸ್ಥಳದಲ್ಲಿಯೇ ಆರ್‌ಎಫ್ಒ ಸುಂದರ್, ಡಿ.ಆರ್.ಎಫ್.ಓ ಸೂರ್ಯಕಾಂತ್, ಗಾರ್ಡ್‌ಗಳಾದ ಕಿರಣ್, ಬಸವಣ್ಣ ಮತ್ತಿತರಿದ್ದಾರೆ. ತಾಯಾನೆ ಸಾವಿಗೆ ಏನು ಕಾರಣ ಎಂಬುದು ವ್ಯೆದ್ಯರ ಮರಣೋತ್ತರ ಪರೀಕ್ಷೆ ಬಳಿಕವೇ ತಿಳಿಯಬೇಕಿದೆ. ಹೆಣ್ಣಾನೆಯೊಂದು ಕಾಡಿನಲ್ಲಿ ಮೃತ ಪಟ್ಟಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಸಿಬ್ಬಂದಿಗಳು ಹೋದಾಗ ಎದುರಿಗೆ ಕಾಡಾನೆಗಳ ಹಿಂಡು ಸಹಾ ನಿಂತು ಘೀಳಿಡುತ್ತಿರುವ ಪರಿಣಾಮ ಅರಣ್ಯ ಸಿಬ್ಬಂದಿಗಳು ಮೃತ ಹೆಣ್ಣಾನೆ ಬಳಿ ತೆರಳಾಗದ ಪರಿಸ್ಥಿತಿ ನಿಮಾ೯ಣವಾಗಿದೆ. ಹಾಗಾಗಿ ಮರಿಯಾನೆ ಹಾಗೂ ಆನೆಗಳ ಹಿಂಡು ಸ್ಥಳ ಬಿಟ್ಟು ಕದಲಿದ ನಂತರವೇ ಮರಣೋತ್ತರ ಪರೀಕ್ಷೆ ಮಾಡಬೇಕಿದೆ.