ಆರೋಗ್ಯಕರ ಸಮಾಜಕ್ಕಾಗಿ ಅಸಮಾನತೆ, ಅಸ್ಪೃಶ್ಯತೆ ನಿವಾರಣೆ ಅಗತ್ಯ: ಡಾ.ಕಾಳೇಗೌಡ ನಾಗವಾರ

KannadaprabhaNewsNetwork | Published : May 1, 2024 1:15 AM

ಸಾರಾಂಶ

ಪ್ರಸ್ತುತ ಪ್ರಜಾಪ್ರಭುತ್ವ ಹಾಗೂ ಸಂವಿಧಾನದಡಿಯಲ್ಲಿ ದೇಶ ಸಮಾನತೆಯಿಂದ ಸಾಗಬೇಕಾಗಿದೆ. ತೊಂದರೆಗಳು, ಸಮಸ್ಯೆಗಳು ನಮ್ಮ ಅವಿವೇಕತನದಿಂದಲೇ ಹುಟ್ಟಿಕೊಳ್ಳುತ್ತವೆ. ತೊಂದರೆಗೆ ಅವಿವೇಕತನವೇ ಮುಖ್ಯ ಕಾರಣವಾಗಿದೆ. ಆದ್ದರಿಂದ ವಿವೇಕದಿಂದ ಉತ್ತಮ ಸಮಾಜ ಕಟ್ಟಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಅಸಮಾನತೆ, ಅಸ್ಪೃಶ್ಯತೆ ನಿವಾರಣೆ ಮಾಡುವುದು ಅಗತ್ಯವಾಗಿದೆ ಎಂದು ಪ್ರಗತಿಪರ ಚಿಂತಕ ಡಾ.ಕಾಳೇಗೌಡ ನಾಗವಾರ ತಿಳಿಸಿದರು.

ನಗರದ ಅನನ್ಯ ಕ್ರಿಯೇಷನ್ಸ್ 10 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಸಂಗೀತ, ಸಾಹಿತ್ಯ, ಕೃಷಿ ಸಂವಾದದಲ್ಲಿ ಸಂವಿಧಾನ ಮತ್ತು ಮುಂದೇನು ಕುರಿತು ಮಾತನಾಡಿದರು.

ಪ್ರಸ್ತುತ ಪ್ರಜಾಪ್ರಭುತ್ವ ಹಾಗೂ ಸಂವಿಧಾನದಡಿಯಲ್ಲಿ ದೇಶ ಸಮಾನತೆಯಿಂದ ಸಾಗಬೇಕಾಗಿದೆ. ತೊಂದರೆಗಳು, ಸಮಸ್ಯೆಗಳು ನಮ್ಮ ಅವಿವೇಕತನದಿಂದಲೇ ಹುಟ್ಟಿಕೊಳ್ಳುತ್ತವೆ. ತೊಂದರೆಗೆ ಅವಿವೇಕತನವೇ ಮುಖ್ಯ ಕಾರಣವಾಗಿದೆ. ಆದ್ದರಿಂದ ವಿವೇಕದಿಂದ ಉತ್ತಮ ಸಮಾಜ ಕಟ್ಟಬೇಕಾಗಿದೆ ಎಂದರು.

ಯುವಜನತೆ ಹೊಸ ಸಮಾಜ ಕಟ್ಟಲು ಅರ್ಪಣಾ ಮನೋಭಾವ ಅಗತ್ಯವಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಮೌಢ್ಯ, ಅಸಮಾನತೆ, ಹೆಣ್ಣು ಭ್ರೂಣಹತ್ಯೆ, ಮರ್ಯಾದೆ ಹತ್ಯೆಗಳು ನಡೆಯುತ್ತಿವೆ. ಇದಕ್ಕೆ ಅರಿವಿನ ಕೊರತೆಯೇ ಕಾರಣವಾಗಿದೆ. ನಿತ್ಯ ಸಚಿವ ಕೆ.ವಿ.ಶಂಕರಗೌಡ ರಂತಹ ನಾಯಕರು ಜಿಲ್ಲೆಯಲ್ಲಿ ಶಿಕ್ಷಣ ಹಾಗೂ ಸಹಕಾರ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ. ಇದರಿಂದ ಜಿಲ್ಲೆ ಸುಶಿಕ್ಷಿತವಾಗಿದೆ. ಅಂಥವರ ಮಾರ್ಗದಲ್ಲಿ ಎಲ್ಲರೂ ನಡೆಯಬೇಕಾಗಿದೆ ಎಂದು ಸಲಹೆ ನೀಡಿದರು.

ಮೌಢ್ಯ, ಅವಿವೇಕತನ ಪ್ರಸ್ತುತ ಹೆಚ್ಚಾಗಿದೆ. ನಮಗೆ ಸಮಸ್ಯೆ ಬಂದಾಗ ನಮ್ಮನ್ನು ಕಾಪಾಡುವುದು ಸಂವಿಧಾನವೇ ಹೊರತು ಬೇರೆ ಯಾರೂ ಕಾಪಾಡಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಬಿಟ್ಟು ಇರಲು ಸಾಧ್ಯವಿಲ್ಲ. ಸಂವಿಧಾನದ ಕಾನೂನಿನ ಚೌಕಟ್ಟಿನಲ್ಲಿಯೇ ಎಲ್ಲರೂ ನಡೆದುಕೊಳ್ಳಬೇಕಾಗಿದೆ. ಎಷ್ಟೇ ದೊಡ್ಡವರಾದರೂ ಕೆಟ್ಟದ್ದನ್ನು ಮಾಡಿದರೆ ತಿಪ್ಪೆಗುಂಡಿಯಲ್ಲಿ ಕೊಳೆಯಬೇಕಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರೂ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಹಿಂದುಳಿದ, ದಲಿತ ಹಾಗೂ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದರು. ಬ್ರಿಟಿಷರು ದೇಶಕ್ಕೆ ಬಂದಿದ್ದರಿಂದ ಒಳ್ಳೆಯದು ಹಾಗೂ ಕೆಟ್ಟದ್ದು ಎರಡೂ ಆಗಿವೆ. ಸಮಾಜದಲ್ಲಿ ಮೌಢ್ಯ, ಅಸಮಾನತೆ ತೊಲಗಬೇಕು. ಅಪರಾಧ ಇಲ್ಲದೆ ಇದ್ದರೆ ಆಗ ಎಲ್ಲರೂ ನೆಮ್ಮದಿಯಿಂದ ಬದುಕಬಹುದು. ಇದರಿಂದ ಒಬ್ಬ 120 ವರ್ಷ ಜೀವನ ಮಾಡಬಹುದು. ಅದಕ್ಕಾಗಿ ದೇವರಾಗಿರುವ ಶಿವನ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಶಿವ ತ್ಯಾಗಮಯಿ, ಎಲ್ಲರೂ ಒಂದೇ ಎಂದು ಪ್ರತಿಪಾದನೆ ಮಾಡಿದ್ದಾನೆ. ಹೆಣ್ಣು ಸಹ ನಮ್ಮಲ್ಲಿ ಅರ್ಧ ಭಾಗ ಎಂದು ಅರ್ಧ ನಾರೀಶ್ವರನಾಗಿದ್ದಾನೆ. ಇನ್ನೊಬ್ಬರಿಗೆ ತೊಂದರೆ ಕೊಡಬಾರದು. ಎಲ್ಲರಿಗೂ ಒಳ್ಳೆಯದನ್ನೇ ಮಾಡಬೇಕು ಎಲ್ಲರ ಉದ್ಧಾರಕ್ಕಾಗಿ ತತ್ವ, ಸಂದೇಶಗಳನ್ನು ನೀಡಿದ್ದಾನೆ ಎಂದರು.

ಅನನ್ಯ ಕ್ರಿಯೇಷನ್ಸ್ ಅವರು ಇಂಥ ಸಂವಾದಗಳನ್ನು ಜಿಲ್ಲೆಯಲ್ಲಿ ಮಾಡುತ್ತಿರುವುದು ಉತ್ತಮ ಶ್ಲಾಘನೀಯವಾಗಿದೆ. ಇಂಥ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು. ಆಗ ಜನರಿಗೆ ಅರಿವು ಮೂಡಿಸಲು ಸಾಧ್ಯವಾಗಲಿದೆ ಎಂದರು.

ಚಿಂತಕ ಡಿ.ಶಿವಶಂಕರ್ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ಮನುಷ್ಯ, ಮನುಷ್ಯರ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ದ್ವೇಷ ಹೆಚ್ಚುತ್ತಿದ್ದು, ಆತ್ಮೀಯತೆಗೆ ಪೆಟ್ಟು ಬೀಳುತ್ತಿದೆ. ವಿಜ್ಞಾನದ ಹೆಸರಲ್ಲಿ ಅಜ್ಞಾನ ಬೆಳೆಯುತ್ತಿದೆ. ಆದ್ದರಿಂದ ಅದನ್ನು ತಡೆಗಟ್ಟಲು ಯುವ ಜನಾಂಗ ಸಮಾಜಮುಖಿ ಚಿಂತನೆ ಮಾಡಬೇಕು ಎಂದರು.

ಜನರಿಗೆ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆ ತಿಳಿಸಬೇಕಾಗಿದೆ. ಪ್ರಜಾಪ್ರಭುತ್ವದಲ್ಲಿ ಖಾಸಗಿ ಪ್ರಭುತ್ವ ಹೆಚ್ಚಾಗುತ್ತಿದೆ. ಅಂಥ ಕೆಲಸದಲ್ಲಿ ಕೆಲವರು ನಿರತರಾಗಿದ್ದಾರೆ. ಅದಕ್ಕೆ ಅವಕಾಶ ಕೊಡದಂತೆ ಯುವ ಜನಾಂಗ ಎಚ್ಚೆತ್ತುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಅನನ್ಯ ಕ್ರಿಯೇಷನ್ಸ್ ಸಂಸ್ಥಾಪಕ ಕಾರ್ಯದರ್ಶಿ ರಾಜೇಶ್ ರಾಂಪುರ, ಗೌರವಾಧ್ಯಕ್ಷ ಗೋಪಾಲಕೃಷ್ಣ, ಬರಹಗಾರ ರವಿ ಮರಿಯಪ್ಪ, ಜಗದೀಶ್, ಎಂ.ಸಿದ್ದಯ್ಯ ಸೇರಿದಂತೆ ಮತ್ತಿತರರಿದ್ದರು.

Share this article