ಪೋರ್ಟಲ್‌ನಲ್ಲಿ ಇಲಾಖೆ ಮಾಹಿತಿ ಅಳವಡಿಸಿ: ವಿನೋದ ಅಣವೇಕರ

KannadaprabhaNewsNetwork | Published : Jan 28, 2024 1:17 AM

ಸಾರಾಂಶ

ಎಲ್ಲ ಇಲಾಖೆಗಳು ತಮಗೆ ಸಂಬಂಧಿಸಿದ ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಿದಾಗ ಮಾತ್ರ ತಾಲೂಕಿನ ಪ್ರಗತಿಯು ರಾಜ್ಯ ಸರಾಸರಿ ಗುರಿ ತಲುಪಲು ಸಾಧ್ಯವಾಗುತ್ತದೆ.

ಮುಂಡಗೋಡ:

ಎಲ್ಲ ಇಲಾಖೆಗಳು ತಮಗೆ ಸಂಬಂಧಿಸಿದ ಪೋರ್ಟಲ್‌ನಲ್ಲಿ ಮಾಹಿತಿ ಅಪ್‌ಲೋಡ್ ಮಾಡಿದಾಗ ಮಾತ್ರ ತಾಲೂಕಿನ ಪ್ರಗತಿಯು ರಾಜ್ಯ ಸರಾಸರಿ ಗುರಿ ತಲುಪಲು ಸಾಧ್ಯವಾಗುತ್ತದೆ. ಆರೋಗ್ಯ ಇಲಾಖೆ ತಮ್ಮ ಇಲಾಖೆಯಿಂದ ಕೈಗೊಂಡ ಕಾರ್ಯಕ್ರಮ ಪೋರ್ಟಲ್‌ನಲ್ಲಿ ಅಳವಡಿಸುವಂತೆ ಜಿಪಂ ಮುಖ್ಯ ಯೋಜನಾಧಿಕಾರಿ ವಿನೋದ ಅಣವೇಕರ ಸೂಚಿಸಿದರು.ಪಟ್ಟಣದ ತಾಲೂಕು ಪಂಚಾಯಿತಿಯಲ್ಲಿ ಮಹತ್ವಾಕಾಂಕ್ಷಿ ತಾಲೂಕು ಅಭಿವೃದ್ಧಿ ಯೋಜನೆಯ ೩೯ ಸೂಚ್ಯಂಕಗಳ ಸಾಧನೆ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.ಪ್ರಾಥಮಿಕದಿಂದ ಪ್ರೌಢಶಾಲೆ ಹಂತದ ವರೆಗೂ ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದೇ ನಿರಂತರವಾಗಿ ಶಿಕ್ಷಣ ಪಡೆಯಲು ಯೋಜನೆ ರೂಪಿಸಲಾಗಿದೆ. ಎಲ್ಲ ಶಾಲೆಗಳಲ್ಲಿ ಬಾಲಕಿಯರ ಶೌಚಾಲಯ ಸೌಲಭ್ಯಗಳ ಬಗ್ಗೆ ವಿಶೇಷ ಕಾಳಜಿ ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕಲಿಸಲು ತರಬೇತಿ ಪಡೆದ ಶಿಕ್ಷಕರ ಕೊರತೆ ಇದೆ. ಅಂತಹ ಶಿಕ್ಷಕರಿಗೆ ತರಬೇತಿ ನೀಡಿ ವಿಶೇಷ ಮಕ್ಕಳಿಗೆ ತರಬೇತಿ ನೀಡುತ್ತಿರುವ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಭಾರಿ ರೂಪಾ ಅಂಗಡಿ, ತಮ್ಮ ಇಲಾಖೆಯಿಂದ ಅನುಷ್ಠಾನದಲ್ಲಿರುವ ಕಾರ್ಯಕ್ರಮಗಳಾದ ಗರ್ಭಿಣಿಯರಿಗೆ ನಿಯಮಿತವಾಗಿ ಪೌಷ್ಟಿಕ ಆಹಾರ ವಿತರಣೆ, ೬ ತಿಂಗಳಿಂದ ೬ ವರ್ಷದ ವರೆಗಿನ ಮಕ್ಕಳು ನಿಯಮಿತವಾಗಿ ಪೂರಕ ಆಹಾರ ಸೇವಿಸುವ ಕುರಿತು, ಅಂಗನವಾಡಿ ಕೇಂದ್ರಗಳಿಗೆ ದಾಖಲಾದ ಮಕ್ಕಳ ತೂಕ, ಎತ್ತರ, ಮಾಪನ ಕ್ರಿಯೆ, ತೀವ್ರ ಅಪೌಷ್ಟಿಕತೆ ಹೊಂದಿರುವ ೫ ವರ್ಷದೊಳಗಿನ ಮಕ್ಕಳ ಬೆಳವಣಿಗೆ ಮೇಲ್ವಿಚಾರಣೆ, ಆರೋಗ್ಯ ತಪಾಸಣೆ, ಪೌಷ್ಟಿಕ ಮೇಳ, ಪೋಷಣಾ ಟ್ರ‍್ಯಾಕರ್‌ನಲ್ಲಿ ಅಳವಡಿಸುತ್ತಿರುವ ಬಗ್ಗೆ ಮಾಹಿತಿ ನೀಡಿದರು.ಕೃಷಿ ಇಲಾಖೆ ಪೋರ್ಟಲ್‌ನಲ್ಲಿ ಪ್ರಧಾನಮಂತ್ರಿ ಕಿಸಾನ್‌ ಯೋಜನೆಯಲ್ಲಿ ರೈತರ ನೋಂದಣಿ ಕಾರ್ಯ ಮಾಡಲಾಗುತ್ತಿದೆ. ಮಣ್ಣಿನ ಮಾದರಿ ಸಂಗ್ರಹಣೆ ಗುರಿ ೪೨೭ ಇದ್ದು, ಮಣ್ಣಿನ ಮಾದರಿ ಸಂಗ್ರಹಣೆ ಮಾಡಿ ವಿಶ್ಲೇಷಿಸಿ ಮಣ್ಣಿನ ಆರೋಗ್ಯ ಕಾರ್ಡ್‌ ವಿತರಿಸುತ್ತಿರುವ ಕುರಿತು ಕೃಷಿ ಇಲಾಖೆ ಸಹಾಯಕ ಅಧಿಕಾರಿಗಳು ತಿಳಿಸಿದರು.ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಎಂಜಿನಿಯರ್‌ ರಾಜೇಶ್ವರಿ ಕದಂ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಒಟ್ಟು ೨೩೦೦೦ ಕುಟುಂಬಗಳಿದ್ದು, ಈಗಾಗಲೇ ೧೭೭೪೭ ಕುಟುಂಬಗಳಿಗೆ ಎಎಒ ಮೂಲಕ ಕುಡಿಯುವ ನೀರು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಕುಟುಂಗಳಿಗೂ ಕುಡಿಯುವ ನೀರು ಒದಗಿಸುವ ಯೋಜನೆ ಹೊಂದಲಾಗಿದೆ. ಅದರಲ್ಲೂ ಕುಡಿಯುವ ನೀರಿನ ಶುದ್ಧತ್ವಕ್ಕೆ ಮೊದಲ ಆದ್ಯತೆ ನೀಡಿರುವ ಕುರಿತು ವಿವರಿಸಿದರು.೨೦೨೩-೨೪ ನೇ ಸಾಲಿನಲ್ಲಿ ಒಟ್ಟು ೪೯ ಮನೆಗಳು ಪ್ರಧಾನಮಂತ್ರಿ ಆವಾಸ ಯೋಜನೆಯಲ್ಲಿ ಮಂಜೂರಾಗಿದ್ದು, ಎಲ್ಲ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಾಗಿದೆ. ಎರಡು ಗ್ರಾಮ ಪಂಚಾಯಿತಿಗಳು ಮಾತ್ರ ಮನೆ ತಳಪಾಯ ನಿರ್ಮಾಣ ಪ್ರಾರಂಭಸಿರುವ ಬಗ್ಗೆ ವಸತಿ ನೋಡೆಲ್ ಅಧಿಕಾರಿಗಳು ತಿಳಿಸಿದರು. ಮನೆ ನಿರ್ಮಾಣದ ಪ್ರಗತಿ ಮೇಲ್ವಿಚಾರಣೆ ಮಾಡಿ ಮತ್ತು ಫಲಾನುಭವಿಗೆ ಕಂತುಗಳನ್ನು ಸಕಾಲಿಕವಾಗಿ ಬಿಡುಗಡೆ ಮಾಡುವುದು ಮತ್ತು ಮನೆಗಳ ನಿರ್ಮಾಣ ಪ್ರಗತಿ ಪರಿಶೀಲಿಸಿ ಫಲಾನುಭವಿಗಳು ಮನೆ ನಿರ್ಮಾಣ ಮಾಡಿಕೊಳ್ಳುವಂತೆ ಕ್ರಮ ವಹಿಸುವಂತೆ ಮುಖ್ಯ ಯೋಜನಾಧಿಕಾರಿಗಳು ಸೂಚಿಸಿದರು.೩೯ ಸೂಚ್ಯಂಕಗಳ ಗುರಿ ತಲುಪಲು ಆಯಾ ಇಲಾಖೆಗಳು ತಮ್ಮ ಸೂಚ್ಯಂಕಗಳಿಗೆ ಅನುಗುಣವಾಗಿ ಅನುದಾನದ ಅಗತ್ಯ ಇರುವ ಪ್ರಸ್ತಾವನೆ ಸಲ್ಲಿಸಿದಲ್ಲಿ ಸಿಎಸ್‌ಆರ್ ಫಂಡ್‌ನಲ್ಲಿ ನೀಡಲಾಗುತ್ತದೆಂದು ತಿಳಿಸಿದರು.ತಾಪಂ ಇಒ ಟಿ.ವೈ. ದಾಸನಕೊಪ್ಪ ಹಾಗೂ ತಾಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಪಂ ಸಿಬ್ಬಂದಿ ಭಾಗವಹಿಸಿದ್ದರು.

Share this article