ಡಾ. ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಿ: ಭೀಮುನಾಯಕ

KannadaprabhaNewsNetwork | Published : Apr 15, 2024 1:25 AM

ಸಾರಾಂಶ

ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಹೇಳಿದರು.

ನಗರದ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬ ಭಾರತೀಯನಿಗೂ ಏ.14 ಈ ದಿನ ಮಹತ್ವದ ದಿನವಾಗಿದೆ. ಮಹಿಳೆಯರ ಪ್ರಗತಿ, ಸಮಾಜದ ಏಳಿಗೆಯ ಕನಸು ಕಂಡಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಸಮಾನತೆಯ ಅಸ್ಪೃಶ್ಯತೆಯ ವಿರುದ್ಧ ದನಿ ಎತ್ತಿ ಸಮಾಜವನ್ನು ತಿದ್ದುವ ಭವ್ಯ ಭಾರತದ ನಿರ್ಮಾಣ ದತ್ತ ಗಮನ ಹರಿಸಿದ್ದವರು. ಅವರ ಜೀವನದ ಕೊನೆಯ ತನಕ ಸಮಾಜದ ಉನ್ನತಿಗಾಗಿ ಕೆಲಸ ಮಾಡಿದ್ದವರು ಎಂದರು.

ಸಂವಿಧಾನವು ಭಾರತದ ಪವಿತ್ರ ಗ್ರಂಥ. ಇದು ನಮ್ಮ ಬದುಕಿಗೂ ದಾರಿ. ಈ ಪವಿತ್ರ ಗ್ರಂಥದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸುವ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಡಾ. ಬಾಬಾ ಸಾಹೇಬ್ ಅವರ ಬಾಲ್ಯದ ದಿನಗಳು ಬಲು ಕಷ್ಟದಿಂದಲೇ ಕೂಡಿತ್ತು. ಅಸ್ಪೃಶ್ಯತೆ, ಅಸಮಾನತೆಯ ನೋವಿನ ನಡುವೆ ಬೆಳೆದಿದ್ದ ಬಾಬಾ ಸಾಹೇಬ ಅವರು ಬಳಿಕ ವಿಶ್ವವೇ ಗೌರವಿಸುವಂತಹ ನಾಯಕರಾಗಿ ರೂಪಗೊಂಡವರು. ಅದೆಷ್ಟೋ ಜನರಿಗೆ ಸ್ಫೂರ್ಥಿಯಾಗಿದ್ದಾರೆ ಎಂದರು.

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ ಮೂಲಕ ಜಾತ್ಯಾತೀತ ಮತ್ತು ಸಮಾಜವಾದಿ ಪ್ರಜಾಪ್ರಭುತ್ವದ ದೇಶ ಕಟ್ಟಲು ಡಾ. ಬಿ.ಆರ್. ಅಂಬೇಡ್ಕರ್ ಎಳೆದು ತಂದು ನಿಲ್ಲಿಸಿದ ರಥವನ್ನು ಮುಂದಕ್ಕೆ ಒಯ್ಯಲು ನಾವೆಲ್ಲ ಕೈಜೋಡಿಸಬೇಕು . ಮೇ 7 ರಂದು ಲೋಕಸಭಾ ಚುನಾವಣೆ ದಿನದಂದು ತಪ್ಪದೇ ಎಲ್ಲರೂ ಕಡ್ಡಾಯವಾಗಿ ಮತ ಚಲಾವಣೆ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಪ್ರಜಾಪ್ರಭುತ್ವವನ್ನು ಗೌರವಿಸುವಲ್ಲಿ ಜಾಗೃತರಾಗಬೇಕೆಂದರು.

ಮುಖಂಡರಾದ ಮಲ್ಲು ಮಾಳಿಕೇರಿ, ವಿಶ್ವರಾಧ್ಯ ದಿಮ್ಮೆ, ಸಿದ್ದುನಾಯಕ ಹತ್ತಿಕುಣಿ, ಅಂಬ್ರೇಶ ಹತ್ತಿಮನಿ, ಭೀಮರಾಯ್ ರಾಮಸಮುದ್ರ, ಅಬ್ದುಲ್ ಅಜೀಜ್, ನಾಗರಾಜ ತಾಂಡುಲ್ಕರ್, ಕಾಶಿನಾಥ ನಾನೇಕ, ನಾಗರಾಜ್ ಪಿಲ್ಲೆ, ರಮೇಶನಾಯಕ, ಕಾಶಿನಾಥ ಯಾಗಾಪೂರ ಸೇರಿದಂತೆ ಇತರರಿದ್ದರು.

Share this article