ಮಾತೃಭಾಷೆಯಲ್ಲೇ ಶಿಕ್ಷಣ ನೀಡಲು ಒತ್ತು ನೀಡಿ

KannadaprabhaNewsNetwork | Published : Nov 10, 2024 1:52 AM

ಸಾರಾಂಶ

ಮಾತೃಭಾಷೆಯಲ್ಲಿ ಆಳವಾದ ಸಾಮರ್ಥ್ಯ ಗಳಿಕೆ, ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನದಿಂದ ವ್ಯಕ್ತಿ ಮರುಹುಟ್ಟು ಪಡೆಯುತ್ತಾ ಪರಿಪೂರ್ಣ ವ್ಯಕ್ತಿತ್ವ ಮೂಡಿಬರುವುದರಿಂದ ಶಾಲಾ ಹಂತದಲ್ಲಿ ಮಾತೃ ಭಾಷಾ ಕಲಿಕೆ ಹಾಗೂ ಸಾಹಿತ್ಯ ಅಧ್ಯಯನಕ್ಕೆ ವಿಶೇಷ ಒತ್ತು ನೀಡಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಇತಿಹಾಸಕಾರ ಮೆಕಾಲೆ ತಿಳಿಸಿರುವಂತೆ ಒಂದು ಜನಾಂಗವನ್ನು ನಿರ್ಣಾಮ ಮಾಡಬೇಕೆಂದರೆ ಅವರ ಭಾಷೆಯನ್ನು ಕೊಂದರೆ ಸಾಕು ಎಂದು ಶಾಂತಾ ಶಿಕ್ಷಣ ಸಂಸ್ಥೆ ನಿರ್ದೇಶಕ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಕೋಡಿರಂಗಪ್ಪ ತಿಳಿಸಿದರು.

ತಾಲೂಕಿನ ಪೆರೇಸಂದ್ರ ಗ್ರಾಮದ ಶಾಂತಾ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಒಂದು ಜನಾಂಗವನ್ನು ನಿರ್ಮಾಣ ಮಾಡುವ ಮುನ್ನ ಒಂದು ಭಾಷೆ, ಸಾಹಿತ್ಯ, ಸಂಸ್ಕೃತಿಗಳನ್ನು ಬೆಳೆಸಬೇಕು. ಕನ್ನಡ ಭಾಷೆಯ ಅರ್ಥ ಮತ್ತು ಪ್ರಯೋಗ ಪರಿಣಿತಿ, ಸಾಮರಸ್ಯವು ಜಗತ್ತಿನ ಯಾವ ಭಾಷೆಗೂ ಕಡಿಮೆ ಇಲ್ಲ ಎಂದರು.ಮಾತೃ ಭಾಷಾ ಕಲಿಕೆಗೆ ಒತ್ತು ನೀಡಿ

ಮಾತೃಭಾಷೆಯಲ್ಲಿ ಆಳವಾದ ಸಾಮರ್ಥ್ಯ ಗಳಿಕೆ, ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನದಿಂದ ವ್ಯಕ್ತಿ ಮರುಹುಟ್ಟು ಪಡೆಯುತ್ತಾ ಪರಿಪೂರ್ಣ ವ್ಯಕ್ತಿತ್ವ ಮೂಡಿಬರುವುದರಿಂದ ಶಾಲಾ ಹಂತದಲ್ಲಿ ಮಾತೃ ಭಾಷಾ ಕಲಿಕೆ ಹಾಗೂ ಸಾಹಿತ್ಯ ಅಧ್ಯಯನಕ್ಕೆ ವಿಶೇಷ ಒತ್ತು ನೀಡಬೇಕೆಂದರು. ಕಾವ್ಯದಲ್ಲಿಯೂ ಎತ್ತಿದ ಕೈ, ಜನ ಭಾಷೆಯ ಕನ್ನಡವು ಪ್ರಯೋಗದಲ್ಲಿಯೂ ಸೈ ಎನಿಸಿ, ಶಾಸ್ತ್ರೀಯ ಮತ್ತು ಸಾಮಾಜಿಕ ಪರಂಪರೆ ಹೊಂದಿದೆ.ಪಂಪ, ಕುಮಾರವ್ಯಾಸ, ರನ್ನ, ಪೊನ್ನರ ಕಾವ್ಯಗಳು ಅತ್ಯಂತ ಉದಾತ್ತವಾದ ವಸ್ತು ಹಾಗೂ ಮೀಮಾಂಸೆಯಿಂದ ಕೂಡಿವೆ ಎಂದರು.

ಇದೇ ರೀತಿ ವಚನ ಸಾಹಿತ್ಯ ಮತ್ತು ದಾಸಸಾಹಿತ್ಯಗಳು ಜನರಾಡುವ ಭಾಷೆಯಲ್ಲಿ ಜನತೆಗೆ ಹಲವು ಮೌಲ್ಯಗಳು ಹಾಗೂ ತಾತ್ವಿಕ ಚಿಂತನೆಗಳನ್ನು ಕೊಟ್ಟಿವೆ.ಜಗತ್ತಿನಲ್ಲಿ ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಬಹುತೇಕರು ಅವರ ಮಾತೃಭಾಷೆಯಲ್ಲಿ ಕಲಿತ್ತಿದ್ದಾರೆಂಬುದನ್ನು ತಿಳಿದರೆ ಮಾತೃಭಾಷೆಗಳ ಶಕ್ತಿ ಏನೆಂದು ಅರ್ಥವಾಗುತ್ತದೆ. ಆದ್ದರಿಂದ ಮಾತೃಭಾಷೆ ಕಲಿಕೆ ಬಗ್ಗೆ ಎಂದೂ ಕೀಳರಿಮೆ ಬೇಡ, ಅಭಿಮಾನವಿರಲಿ ಎಂದರು.

ಅಶೋಕನ ಶಾಸನಗಳಲ್ಲಿ ಕನ್ನಡ

ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿಗೆ ಸುಮಾರು ಎರಡು ಸಾವಿರ ವರ್ಷಗಳ ಹಿನ್ನೆಲೆ ಇದೆ. ಅಶೋಕನ ಶಾಸನಗಳಲ್ಲಿ ಕನ್ನಡ ಪದವನ್ನು ಗುರ್ತಿಸಲಾಗಿದೆ. ಭಾರತದಲ್ಲಿ ಸಮಾಜ ಸುಧಾರಣಾ ಚಳವಳಿ ಮತ್ತು ರಾಷ್ಟ್ರೀಯ ಹೋರಾಟಕ್ಕೆ ಕನ್ನಡ ಸಾಹಿತ್ಯವು ವಿಶಿಷ್ಠ ಕೊಡುಗೆ ನೀಡಿದೆ. ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ನಡೆಸಿ ಅಖಂಡ ಹಾಗೂ ಸಂಮೃದ್ಧ ಕರ್ನಾಟಕ ಕಟ್ಟಿಕೊಡುವ ದಿಕ್ಕಿನಲ್ಲಿ ನಮ್ಮ ಹಿರಿಯರು ದೊಡ್ಡ ಕೊಡುಗೆ ನೀಡಿದ್ದು ಅವರಿಗೆ ನಾವು ಋಣಿಗಳಾಗಿರಬೇಕು. ಈ ಆಶಯಗಳ ಈಡೇರಿಕೆಗೆ ನಮ್ಮ ಸರ್ಕಾರಗಳು ಉತ್ತಮ ಯೋಜನೆಗಳನ್ನು ಜಾರಿಗೊಳಿಸಿವೆ. ಆದರೂ ಸಹ ಗಡೀ ಸಮಸ್ಯೆ, ನೀರಿನ ಹಂಚಿಕೆ ಸಮಸ್ಯೆ, ಕೇಂದ್ರ ಸರ್ಕಾರ ಆಡಳಿತವಿರುವಲ್ಲಿ ಕನ್ನಡ ಬಳಕೆಗೆ ದೀರ್ಘಕಾಲದ ಆಶಯಗಳು ನೆನೆಗುದಿಗೆ ಬಿದ್ದಿರುವುದು ನೋವಿನ ಸಂಗತಿ ಎಂದರು.

ಕರ್ನಾಟಕವು ಇಡೀ ದೇಶದಲ್ಲಿ ಅಭಿವೃದ್ಧಿ ಪಥದತ್ತ ಸಾಗುವ ರಾಜ್ಯಗಳಲ್ಲಿ ಮೂಂಚೂಣಿಯಲ್ಲಿದೆ. ಜಗತ್ತಿನ ವಿವಿಧ ಭಾಗಗಳ ಜನರು ಕರ್ನಾಟಕದತ್ತ ನೋಡುತ್ತಿದ್ದಾರೆ. ಇದೇ ದಿಕ್ಕಿನಲ್ಲಿ ನಾಡಿನ ಭಾಷೆ, ಸಾಹಿತ್ಯ, ಶಿಕ್ಷಣಗಳನ್ನು ಕನ್ನಡದಲ್ಲಿ ರೂಪಿಸುವ ಹಾಗೂ ಜಾಗತಿಕ ಮಟ್ಟದ ವಿಜ್ಞಾನ, ವಿಚಾರ ಮತ್ತು ತಂತ್ರಜ್ಞಾನಗಳನ್ನು ಕನ್ನಡೀಕರಿಸುವ ಕಾರ್ಯವನ್ನು ನಾವು ಮಾಡಬೇಕು. ಇಂತಹ ಬದಲಾವಣೆಗಾಗಿ ಕನ್ನಡ ಶಾಲೆಗಳು ಗಟ್ಟಿಯಾಗಬೇಕು ಹಾಗೂ ಪ್ರತಿಯೊಬ್ಬರೂ ಅಧ್ಯಯನ ಶೀಲತೆ ಮೈಗೂಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ಪಟ್ಟರು.

ವಿದ್ಯಾರಥಿಗಳಿಂದ ನೃತ್ಯರೂಪಕ

ಇದೇ ಸಂದರ್ಭದಲ್ಲಿ ನಾಡುನುಡಿಯನ್ನು ಕಟ್ಟಿಬೆಳೆಸಿದ ಹಿರಿಯರಿಗೆ ಗೌರವಸಲ್ಲಿಸುವ ನೃತ್ಯ ರೂಪಕಗಳು ಕಣ್ಮನಸೂರೆಗೊಂಡವು. ಕನ್ನಡದ ಶಾಸ್ತ್ರೀಯ ಹಾಗೂ ಆಧುನಿಕ ಗೀತೆಗಳಿಗೆ ಹೆಜ್ಜೆ ಹಾಕಿದ ಆರೋಗ್ಯ ವಿಜ್ಞಾನ ವಿದ್ಯಾರ್ಥಿಗಳು ಹಳದಿ ಕೆಂಪು ವೇಷಭೂಷಣಗಳೊಂದಿಗೆ ಸಂಭ್ರಮಿಸಿದರು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲರುಗಳಾದ ಡಾ. ನವೀನ್ ಸೈಮನ್, ಡಾ.ಗೋಪಿನಾಥನ್,ಡಾ.ಸುರೇಶ್,ಡಾ.ರಂಜಿತ್,ಉಪ ಪ್ರಾಂಶುಪಾಲ ಡಾ. ದಯಾನಂದನ್, ಉಪನ್ಯಾಸಕರಾದ ಡಾ.ಐಸಾ, ಡಾ.ಶಿವಪ್ರಸಾದ, ಶಿಲ್ಪರಾಣಿ, ಶಾಂತಾ ವಿದ್ಯಾನಿಕೇತನ್, ಶಾಂತಾ ಆರೋಗ್ಯ ಶಿಕ್ಷಣ ಕೋರ್ಸುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Share this article