ಕನ್ನಡಪ್ರಭ ವಾರ್ತೆ ಮಂಗಳೂರು
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಮಧ್ಯಂತರ ಬಜೆಟ್ ದಕ್ಷಿಣ ಕನ್ನಡದ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಪರೋಕ್ಷವಾಗಿ ಆಶಾದಾಯಕವಾಗಿದೆ.ಪ್ರವಾಸೋದ್ಯಮ ತಾಣವಾಗಿ ಲಕ್ಷದ್ವೀಪ ಅಭಿವೃದ್ಧಿಪಡಿಸುವ ಪ್ರಸ್ತಾಪವನ್ನು ಬಜೆಟ್‌ನಲ್ಲಿ ಮಾಡಲಾಗಿದೆ. ಲಕ್ಷದ್ವೀಪಕ್ಕೆ ತೀರ ಸಮೀಪ ಇರುವ ಜಿಲ್ಲೆ ದಕ್ಷಿಣ ಕನ್ನಡ ಆಗಿರುವುದರಿಂದ ಲಕ್ಷದ್ವೀಪ ಅಭಿವೃದ್ಧಿಯೊಂದಿಗೆ ಮಂಗಳೂರಿನ ಪ್ರವಾಸಿ ತಾಣಗಳ ಅಭಿವೃದ್ಧಿಗೂ ಪೂರಕವಾಗಲಿದೆ ಎನ್ನುವ ನಿರೀಕ್ಷೆ ಹುಟ್ಟಿದೆ.ಲಕ್ಷದ್ವೀಪಕ್ಕೆ ದಶಕಗಳಿಂದ ಕಟ್ಟಡ ಸಾಮಗ್ರಿಗಳು, ಆಹಾರ ಪದಾರ್ಥಗಳು ಮಂಗಳೂರಿನಿಂದ ಪೂರೈಕೆ ಆಗುತ್ತಿದೆ. ಕೆಲ ವರ್ಷಗಳ ಹಿಂದೆ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ವ್ಯವಸ್ಥೆ ಇದ್ದು, ಬಳಿಕ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಆದರೆ ಈಗಲೂ ಮಂಗಳೂರಿನಿಂದ ಅಗತ್ಯ ಸರಕು ಸಾಮಗ್ರಿಗಳು ಲಕ್ಷದ್ವೀಪಕ್ಕೆ ಪೂರೈಕೆ ಆಗುತ್ತಲೇ ಇದೆ.ಲಕ್ಷದ್ವೀಪವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿದರೆ ಹಾಗೂ ಮಂಗಳೂರಿನಿಂದ ಲಕ್ಷದ್ವೀಪಕ್ಕೆ ಪ್ರವಾಸಿಗರಿಗೆ ಸಂಚಾರ ವ್ಯವಸ್ತೆ ಕಲ್ಪಿಸಿದರೆ ಮಂಗಳೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಇದಕ್ಕೆ ಪೂರಕವಾಗಿ ಮಂಗಳೂರಿನ ಪ್ರವಾಸೋದ್ಯಮ- ಸುತ್ತಲಿನ ಸುಂದರ ಕಡಲ ಕಿನಾರೆ, ನದಿ ಪ್ರದೇಶಗಳ ಅಭಿವೃದ್ಧಿಯನ್ನು ನಿರೀಕ್ಷಿಸಬಹುದಾಗಿದೆ. ಜತೆಗೆ ಇಲ್ಲಿನ ಸಾಮಗ್ರಿಗಳಿಗೆ ಮತ್ತಷ್ಟು ಬೇಡಿಕೆ ಹೆಚ್ಚುವ ಸಾಧ್ಯತೆಯಿದೆ.ಮೀನುಗಾರಿಕೆ ಅಭಿವೃದ್ಧಿ: ಹಿಂದಿನ ಕೇಂದ್ರ ಬಜೆಟ್‌ನಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಘೋಷಿಸಲಾಗಿದ್ದು, ಈ ಬಜೆಟ್‌ನಲ್ಲೂ ಅದರ ಪ್ರಸ್ತಾಪ ಮಾಡಲಾಗಿದೆ. ಜತೆಗೆ ಮತ್ಸ್ಯ ಸಂಪದ ಯೋಜನೆಯನ್ನು ಮುಂದುವರಿಸಲು ಬಜೆಟ್‌ನಲ್ಲಿ ನಿರ್ಧರಿಸಲಾಗಿದೆ. ಕಡಲ ಆಹಾರ ರಫ್ತು ದುಪ್ಪಟ್ಟು ಮಾಡುವ ಯೋಜನೆ ಘೋಷಿಸಲಾಗಿದ್ದು, ಮೀನುಗಾರರಿಗೆ, ಮೀನು ಉತ್ಪನ್ನಗಳ ಉದ್ಯಮಿಗಳಿಗೆ ಆಶಾದಾಯಕವಾಗಿದೆ.ಟೈರ್ 1 ಮತ್ತು ಟೈರ್ 2 ನಗರಗಳಿಗೆ ಉಡಾಣ್ ಯೋಜನೆ ವಿಸ್ತರಣೆ ಘೋಷಿಸಿರುವುದು, 40 ಸಾವಿರ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಿಗೆ ಪರಿವರ್ತನೆ, ಮೂರು ಆರ್ಥಿಕ ರೈಲ್ವೆ ಕಾರಿಡಾರ್ ನಿರ್ಮಾಣ ಪ್ರಕಟಿಸಲಾಗಿದ್ದು, ಕರಾವಳಿ ಭಾಗ ಇದರಲ್ಲಿ ಒಳಗೊಂಡರೆ ಇನ್ನಷ್ಟು ಅಭಿವೃದ್ಧಿ ನಿರೀಕ್ಷೆ ಮಾಡಬಹುದು.ಉಳಿದಂತೆ ಸಾಮಾನ್ಯವಾಗಿ ಇತರ ಕಡೆಗಳಲ್ಲಿ ಅನ್ವಯಿಸುವ ಇತರ ಯೋಜನೆಗಳು ಕರಾವಳಿಗೂ ಅನ್ವಯಿಸಲಿವೆ.