ಸಾವಯವ ಕೃಷಿಗೆ ಒತ್ತು ನೀಡಿ, ರೈತರು ಆರೋಗ್ಯಕರ ಕೃಷಿ ಉತ್ಪನ್ನಗಳನ್ನು ಬೆಳೆಯಲು ಮುಂದಾಗಿ: ಡೀನ್ ಡಾ.ಎನ್.ಬಿ.ಪ್ರಕಾಶ್

KannadaprabhaNewsNetwork |  
Published : Oct 06, 2025, 01:00 AM IST
05ಜಿಯುಡಿ1 | Kannada Prabha

ಸಾರಾಂಶ

ಇನ್ನೂ ಕಳೆದ ಮೂರು ತಿಂಗಳ ಅವಧಿಯ ಕೃಷಿ ಕಾರ್ಯನುಭವ ಶಿಬಿರದಲ್ಲಿ ಜಾಥಾ ಕಾರ್ಯಕ್ರಮ, ಗ್ರಾಮ ಸಭೆಯ ಮೂಲಕ ವಿಚಾರಗಳನ್ನು ಹಂಚಿಕೊಳ್ಳಲಾಗಿತ್ತು, ಕೃಷಿ ವಿಷಯಗಳ ಬಗ್ಗೆ ಮಾಹಿತಿ ಸಂವಾದ, ಗ್ರಾಮದ ಪ್ರಾಥಮಿಕ ಮಾಹಿತಿ ಸಂಗ್ರಹಣೆ, ರಾಗಿ, ಜೋಳ, ಆಲೂಗಡ್ಡೆ, ನೆಲಗಡಲೆ ಬೆಳೆಗಳನ್ನು ಬೆಳೆಯುತ್ತಿದ್ದು, ಹಲವು ಸಮಸ್ಯೆಗಳನ್ನು ಕಂಡು ಹಿಡಿಯಲಾಯಿತು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ಅಧಿಕ ಇಳುವರಿ ಪಡೆಯುವ ಉದ್ದೇಶದಿಂದ ಇಂದು ಸಾವಯವ ಕೃಷಿ ಪದ್ಧತಿಯನ್ನು ಮರೆಯುತ್ತಿದ್ದೇವೆ, ರೈತರು ಬೆಳೆಯುವ ಕೃಷಿ ಉತ್ಪನ್ನಗಳು ರಾಸಾಯನಿಕಯುಕ್ತವಾಗಿವೆ. ಆದ್ದರಿಂದ ರೈತರು ಸಾವಯವ ಕೃಷಿಗೆ ಒತ್ತು ನೀಡಿ, ಆರೋಗ್ಯಕರವಾದ ಉತ್ಪನ್ನಗಳನ್ನು ಬೆಳೆಯಬೇಕು ಎಂದು ಜಿ.ಕೆ.ವಿ.ಕೆ ಕೃಷಿ ವಿಶ್ವ ವಿದ್ಯಾಲಯದ ಡೀನ್ ಡಾ.ಎನ್.ಬಿ.ಪ್ರಕಾಶ್ ಸಲಹೆ ನೀಡಿದರು.

ತಾಲೂಕಿನ ದಪ್ಪರ್ತಿ ಗ್ರಾಮದ ರೈತ ಹಾಗೂ ಡೈರಿ ಕಾರ್ಯದರ್ಶಿ ಕೃಷ್ಣಾರೆಡ್ಡಿರವರು ತಮ್ಮ ಜಮೀನಿನ ಒಂದೇ ಬಗೆಯ ಮಣ್ಣಿನಲ್ಲಿ ಸುಮಾರು 75ಕ್ಕೂ ವಿವಿಧ ಬಗೆಯ ಬೆಳೆಗಳನ್ನು ಬೆಳೆಸಿ ಸಾಧನೆ ಮಾಡಿ ತೋರಿಸಿರುವ ತೋಟದ ಬಳಿ ಕೃಷಿ ವಿಶ್ವ ವಿದ್ಯಾಲಯ ಬೆಂಗಳೂರು ಹಾಗೂ ಜಿಕೆವಿಕೆಯವರ ಸಂಯುಕ್ತ ಆಶ್ರಯದಲ್ಲಿ ಅಂತಿಮ ವರ್ಷದ ಕೃಷಿ ವಿಭಾಗದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಅಂಗವಾಗಿ ಹಮ್ಮಿಕೊಂಡಿದ್ದ ಕೃಷಿ ಕ್ರಾಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ತಂತ್ರಜ್ಞಾನ, ಹೊಸ ಕೃಷಿ ಪದ್ಧತಿಗಳು ಮತ್ತು ಕಾರ್ಯಾನುಕ್ರಮಗಳ ಮೂಲಕ ಕೃಷಿ ಕ್ಷೇತ್ರದಲ್ಲಿ ಪ್ರಗತಿ ಕಾಣುವಂತೆ ರೈತರಲ್ಲಿ ಬದಲಾವಣೆ ತರುವ ಮೂಲ ಉದ್ದೇಶವನ್ನು ಇಟ್ಟುಕೊಂಡು ಕಳೆದ ಮೂರು ತಿಂಗಳಿನಿಂದ ವಿದ್ಯಾರ್ಥಿಗಳು ಗ್ರಾಮದಲ್ಲಿ ವಾಸ್ತವ್ಯ ಹೂಡಿ ರೈತರೊಂದಿಗೆ ಬೆರೆತು ಇಲ್ಲಿನ ವಾತಾವರಣ, ಪ್ರಮುಖ ಬೆಳೆಗಳು ಹಾಗೂ ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಅರಿಯುವ ಕೆಲಸ ಮಾಡಿದ್ದಾರೆ. ಸರ್ಕಾರ ಕೃಷಿಗೆ ಪೂರಕವಾದ ಎಲ್ಲಾ ವಿಭಾಗಗಳ ಮೂಲಕ ಸೂಕ್ತ ಪ್ರೋತ್ಸಾಹ ಸಿಗುವಂತೆ ಮಾಡಬೇಕಾಗಿದೆ. ಇಂದು ರೈತರಿಗೆ ದೊರೆಯುತ್ತಿರುವ ಸೌಲಭ್ಯಗಳು ಸಾಕಾಗುತ್ತಿಲ್ಲ, ಕಾರಣ ಬಿತ್ತನೆ ಮಾಡಿದ ದಿನದಿಂದ ಕಟಾವು ಮಾಡಿ ಮಾರುಕಟ್ಟೆ ತಲುಪಿಸುವ ತನಕ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಸಹಕಾರ ನೀಡಿದ್ದಲ್ಲಿ ಕೃಷಿ ಕ್ಷೇತ್ರದತ್ತ ರೈತರ ಒಲವು ಹೆಚ್ಚಲಿದೆ ಎಂದರು.

ಇನ್ನೂ ಕಳೆದ ಮೂರು ತಿಂಗಳ ಅವಧಿಯ ಕೃಷಿ ಕಾರ್ಯನುಭವ ಶಿಬಿರದಲ್ಲಿ ಜಾಥಾ ಕಾರ್ಯಕ್ರಮ, ಗ್ರಾಮ ಸಭೆಯ ಮೂಲಕ ವಿಚಾರಗಳನ್ನು ಹಂಚಿಕೊಳ್ಳಲಾಗಿತ್ತು, ಕೃಷಿ ವಿಷಯಗಳ ಬಗ್ಗೆ ಮಾಹಿತಿ ಸಂವಾದ, ಗ್ರಾಮದ ಪ್ರಾಥಮಿಕ ಮಾಹಿತಿ ಸಂಗ್ರಹಣೆ, ರಾಗಿ, ಜೋಳ, ಆಲೂಗಡ್ಡೆ, ನೆಲಗಡಲೆ ಬೆಳೆಗಳನ್ನು ಬೆಳೆಯುತ್ತಿದ್ದು, ಹಲವು ಸಮಸ್ಯೆಗಳನ್ನು ಕಂಡು ಹಿಡಿಯಲಾಯಿತು, ಮಣ್ಣು ಮಾದರಿ ಪರೀಕ್ಷೆ ಮಾಡಿಸಲಾಗಿತ್ತು, ಗೊಬ್ಬರ ತಯಾರಿಕೆಯ ವಿಧಾನ ಹಾಗೂ ಬಳಸುವ ವಿಧಾನ, ಬಿತ್ತನೆ ಬೀಜಗಳನ್ನು ಆಯ್ಕೆಯ ಮಾನದಂಡ ಹಾಗೂ ಖರೀದಿಸುವ ಸ್ಥಳದ ಆಯ್ಕೆ, ಕೀಟ ನಿರ್ವಹಣೆ ವಿಧಾನ, ಕಳೆ ನಿರ್ವಹಣೆ ಸೇರಿದಂತೆ ಹಲವು ಪದ್ಧತಿಗಳ ಬಗ್ಗೆ ರೈತರೊಂದಿಗೆ ಗುಂಪು ಚರ್ಚೆ ಹಾಗೂ ಸಂವಾದ, ಜೈವಿಕ ಇಂಧನ ಉತ್ಪಾದಿಸುವ ವಿಧಾನ ತಿಳಿಸಲಾಯಿತು, ಬರಡು ರಾಸುಗಳ ಪರೀಕ್ಷೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನುವಿದ್ಯಾರ್ಥಿಗಳು ಮಂಡಿಸಿದರು.

ಸಹಾಯಕ ಕೃಷಿ ನಿರ್ದೇಶಕ ಕೇಶವರೆಡ್ಡಿ, ತೋಟಗಾರಿಕೆ ಇಲಾಖೆಯ ದಿವಾಕರ್ ರೆಡ್ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣ, ನಿವೃತ್ತ ಶಿಕ್ಷಕ ಕೆ.ವಿ. ನಾರಾಯಣ ಸ್ವಾಮಿ, ರೇಷ್ಮೆ ಇಲಾಖೆ ಹಾಗೂ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಗ್ರಾಪಂ ಸದಸ್ಯ ಮುರಳಿ, ಮಾಜಿ ಅಧ್ಯಕ್ಷರಾದ ಸರಸ್ಪತಮ್ಮ, ಮಾಜಿ ಸದಸ್ಯ ನಂಜುಂಡ, ಗ್ರಾಮಸ್ಥರು, ವಿವಿಧ ಗ್ರಾಮಗಳ ರೈತರು, ಜಿಕೆವಿಕೆ ಕೃಷಿ ವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ಹಲವರು ಹಾಜರಿದ್ದರು.

PREV

Recommended Stories

5 ವರ್ಷ ಸಿಎಂ ಎಂದೇ ಸಿದ್ದುಗೆ ಮತ ಹಾಕಿದ್ದೇವೆ : ರಾಯರಡ್ಡಿ
ಹಸು ಕೊಂದಿದ್ದಕ್ಕೆ ಎಂ.ಎಂ.ಹಿಲ್ಸ್‌ ಹುಲಿಯ ಹತ್ಯೆಗೈದು ಪ್ರತೀಕಾರ!