ಕನ್ನಡಪ್ರಭ ವಾರ್ತೆ ಬೇತಮಂಗಲಕೆಜಿಎಫ್ ವಿಧಾನಸಭಾ ಕ್ಷೇತ್ರದ ಪ್ರತಿಗ್ರಾಮ ಹಾಗೂ ವಾರ್ಡ್‌ನಲ್ಲಿ ವಿದ್ಯುತ್ ದ್ವೀಪ, ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಶಾಸಕಿ ಎಂ.ರೂಪಕಲಾ ಶಶಿಧರ್ ಹೇಳಿದರು.ಶ್ರೀನಿವಾಸಸಂದ್ರ ಗ್ರಾಪಂ ವ್ಯಾಪ್ತಿಯ ಪೀಲವಾರ, ಶ್ರೀನಿವಾಸಂದ್ರ, ಬೆನ್ನವಾರ, ಚೌಡೇಪಲ್ಲಿ, ಚಿಂಚಾಡ್ಲಹಳ್ಳಿ, ಕರಡಗೂರು ಸೇರಿದಂತೆ ಒಟ್ಟು ೭ ಗ್ರಾಮಗಳಲ್ಲಿ ಹೈ ಮಾಸ್ಟ್ ದ್ವೀಪಗಳನ್ನು ಉದ್ಘಾಟಿಸಿ ಅವರು ಮಾತನಾಡಿ, ಕ್ಷೇತ್ರದಲ್ಲಿ ಅಂದಾಜು ೧.೪೦ ಕೋಟಿ ರು.ಗಳ ವೆಚ್ಚದಲ್ಲಿ ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಡಿ ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಹೈ ಮಾಸ್ಟ್ ದ್ವೀಪ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದರು.
ಪ್ರತಿಯೊಂದು ಗ್ರಾಮಕ್ಕೂ ರಸ್ತೆಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೂ ಉತ್ತಮವಾದ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಅದೇ ರೀತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ಮಾಡಲಾಗಿದೆ. ಸಿಸಿ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಇದೀಗ ಹೈ ಮಾಸ್ಟ್ ದ್ವೀಪ ಕಾಮಗಾರಿಗಳನ್ನು ಹಂತ ಹಂತವಾಗಿ ಲೋಕಾರ್ಪಣೆ ಮಾಡಲಾಗುತ್ತಿದೆ. ಆಯಾ ಪ್ರದೇಶದಲ್ಲಿ ಗ್ರಾಮಸ್ಥರ ಬಹು ವರ್ಷಗಳ ಈಡೇರಿಕೆಯಂತೆ ಅವರ ಉಪಸ್ಥಿತಿಯಲ್ಲಿ ಚಾಲನೆ ನೀಡುತ್ತಿರುವುದು ಹೆಮ್ಮೆ ಇದೆ ಎಂದರು.
ದಲಿತ ಕಾಲೋನಿಗಳಲ್ಲಿ ಉತ್ತಮ ಬೆಳಕು ಚೆಲ್ಲುವ ಪ್ರಯತ್ನಕ್ಕಾಗಿ ಕೋಟ್ಯಂತರ ರುಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಕ್ಷೇತ್ರಾದ್ಯಂತ ಹೈ ಮಾಸ್ಟ್ ದ್ವೀಪ ದ್ವೀಪ ಅಳವಡಿಸಲಾಗುವುದು ಎಂದು ಹೇಳಿದರು.ಪಿ ನಂಬರ್ ದುರಸ್ತಿಗೆ ಕ್ರಮ
ಈ ಸಂದರ್ಭದಲ್ಲಿ ಶಾಸಕರಿಗೆ ಮನವಿ ಸಲ್ಲಿಸಿದ ರೈತರು, ಗಡಿ ಭಾಗದಲ್ಲಿ ರೈತರ ಪಿ ನಂಬರ್ ದುರಸ್ತಿ ಹಾಗೂ ಗೋಮಾಳ ಭೂಮಿಯನ್ನು ರೈತರು ಉಳುಮೆ ಮಾಡುತ್ತಿದ್ದು, ಈ ಜಮೀನು ಅರಣ್ಯ ಇಲಾಖೆಗೆ ಸೇರಿದೆ ಎಂದು ನಾಮಫಲಕ ಅಳವಡಿಸುವ ಮೂಲಕ ಭೂಮಿಯನ್ನು ಕಸಿಯುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕಿ ರೂಪಕಲಾ ಅವರು, ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ದಾಖಲೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು.ಸಮಾರಂಭದಲ್ಲಿ ಗ್ರಾಪಂ ಅಧ್ಯಕ್ಷೆ ಗೀತಕಲಾ ವೆಂಕಟೇಶ್, ಉಪಾಧ್ಯಕ್ಷ ಭಾರತಿ ಷಣ್ಮುಗಂ, ಸದಸ್ಯರಾದ ವಸಂತ್ ರೆಡ್ಡಿ, ಮಾಧವಿ, ಗಜೇಂದ್ರ ರೆಡ್ಡಿ, ಮಾಜಿ ಸದಸ್ಯೆ ಭವಾನಿ ರಾಮಪ್ಪ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ರಾಮಕೃಷ್ಣ ರೆಡ್ಡಿ, ಮುಖಂಡರಾದ ಯಶೋಧಮ್ಮ ಶ್ರೀನಿವಾಸ್ ರೆಡ್ಡಿ, ಬಾಬು, ಭಾಸ್ಕರ್ ರೆಡ್ಡಿ, ಪೀಲವಾರ ರಾಮಕೃಷ್ಣಪ್ಪ, ವಕೀಲ ಪದ್ಮನಾಭ ರೆಡ್ಡಿ ಇದ್ದರು.