ಪೊಲೀಸ್ ಸಿಬ್ಬಂದಿ ನೇಮಕಾತಿಗೆ ಒತ್ತು: ಭೋಸ್‌ರಾಜು

KannadaprabhaNewsNetwork | Published : Dec 2, 2024 1:20 AM

ಸಾರಾಂಶ

ರಾಜ್ಯದಲ್ಲಿರುವ ಜನಸಂಖ್ಯಾ ಆಧಾರದ ಮೇಲೆ ಪೊಲೀಸ್‌ ಸಿಬ್ಬಂದಿ ನೇಮಕಾತಿಗಳ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಸಚಿವ ಬೋಸರಾಜು ಹೇಳಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ರಾಜ್ಯದಲ್ಲಿರುವ ಜನಸಂಖ್ಯಾ ಆಧಾರದ ಮೇಲೆ ಪೊಲೀಸ್ ಸಿಬ್ಬಂದಿ ನೇಮಕಾತಿಗಳ ಆಗಬೇಕಾಗಿದ್ದು ಈ ಬಗ್ಗೆ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಕಾಮಗಾರಿಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸ್‌ರಾಜು ಹೇಳಿದರು.

ಕರ್ನಾಟಕ ರಾಜ್ಯ ಪೊಲೀಸ್ ವಸತಿ ಗೃಹ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ವತಿಯಿಂದ ಪಟ್ಟಣದ ಪೊಲೀಸ್ ಠಾಣೆ ಸಮೀಪ 3.64 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪೊಲೀಸ್ ವಸತಿ ಗೃಹ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದರೆ ಅದಕ್ಕೆ ಜನರ ಸಹಕಾರ ಅತಿಮುಖ್ಯ. ಮಡಿಕೇರಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯು ನಮ್ಮ ಸರ್ಕಾರದ ಅವಧಿಯಲ್ಲಿ ಉದ್ಘಾಟನೆಗೊಂಡಿತ್ತು ಎಂದು ಸ್ಮರಿಸಿದರು.ಜಿಲ್ಲೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿ ಬರುತ್ತಿದ್ದು ಕಿಡಿಗೇಡಿಗಳು ಬರುವ ಸಾಧ್ಯತೆಯೂ ಇರುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಬದ್ಧತೆಯಿಂದ ಕಾರ್ಯನಿರ್ವಹಿಸುವ ಮೂಲಕ ಪ್ರಕರಣಗಳನ್ನು ಭೇದಿಸುವ ಮೂಲಕ ತ್ವರಿತವಾಗಿ ಬಗೆಹರಿಸುತ್ತಿರುವುದು ರಾಜ್ಯಕ್ಕೆ ಮಾದರಿಯಾಗಿದೆ. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನಗಳು ಸರ್ಕಾರದ ವತಿಯಿಂದ ನಡೆಯುತ್ತಿದೆ ಎಂದರು.

ಮಡಿಕೇರಿ ಶಾಸಕ ಡಾ. ಮಂತರ್‌ಗೌಡ ಮಾತನಾಡಿ, ನಮ್ಮಲ್ಲಿ ವೈಯಕ್ತಿಕ ಭಿನ್ನಾಭಿಪ್ರಾಯಗಳು ಮೂಡಿ ಠಾಣೆಯ ಹೇರಿದಾಗ ಅದನ್ನು ಮತ್ತಷ್ಟು ದೂರಕ್ಕೆ ಎಳೆದೊಯ್ಯದೆ ಮಾತು ಕತೆಯ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ಉತ್ತಮವೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಸತಿಗೃಹಗಳಿಲ್ಲದೆ ಪೊಲೀಸ್ ಸಿಬ್ಬಂದಿಗೆ ಸಮಸ್ಯೆ ಉಂಟಾಗಿರುವುದು ಗಮನದಲ್ಲಿದೆ. ಸುಂಟಿಕೊಪ್ಪ ಪಟ್ಟಣದ ನಡುವೆ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಕಾರಣ ಅಪರಾಧ, ಅವಘಡ ಪ್ರಕರಣಗಳು ಹೆಚ್ಚಿರುತ್ತವೆ. ಪೊಲೀಸ್ ವಸತಿ ಗೃಹ ಸಮೀಪದಲ್ಲಿ ನಿರ್ಮಾಣವಾಗುವುದರಿಂದ ಸಹಾಯಕವಾಗುತ್ತದೆ. ನಿರ್ಮಾಣದ ಜವಾಬ್ದಾರಿ ಹೊತ್ತವರು ತ್ವರಿತವಾಗಿ ಕಾಮಗಾರಿ ಮುಗಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಜಿಲ್ಲೆಯಲ್ಲಿ ಶೇ.43 ಪೊಲೀಸ್ ಸಿಬ್ಬಂದಿಗೆ ಮಾತ್ರ ವಸತಿ ಇದೆ. ಇದರಿಂದ ದೂರದ ಊರಿನಿಂದ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ತುರ್ತು ಸಂದರ್ಭಗಳಲ್ಲಿ ಪೊಲೀಸ್ ಹೊರ ಊರುಗಳಿಂದ ಕರ್ತವ್ಯಕ್ಕೆ ಆಗಮಿಸುವ ಸಂದರ್ಭ ಅಪಘಾತಗಳು ಸಂಭವಿಸಿ ಜೀವ ಕಳೆದುಕೊಂಡಿರುವ ಹಲವು ಘಟನೆಗಳ ಬಗ್ಗೆ ಮೆಲುಕು ಹಾಕಿದರು.

ಸುಂಟಿಕೊಪ್ಪದಲ್ಲಿ ಮೊದಲ ಹಂತದಲ್ಲಿ 12 ವಸತಿ ಗೃಹ ನಿರ್ಮಾಣವಾಗಲಿದೆ ಮಡಿಕೇರಿಯಲ್ಲಿ 192 ವಸತಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಉಪವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಜಿ.ಪಂ.ಕೆ.ಪಿ.ಚಂದ್ರಕಲಾ, ಹಿರಿಯ ವಕೀಲ ಚಂದ್ರಮೌಳಿ, ಗ್ರಾ.ಪಂ. ಉಪಾಧ್ಯಕ್ಷೆ ಶಿವಮ್ಮ ಮಹೇಶ್ ಇದ್ದರು.

ಜಿ.ಪಂ.ಮಾಜಿ ಸದಸ್ಯ ಪಿ.ಎಂ.ಲತೀಫ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ವಿ.ಪಿ.ಶಶಿಧರ್, ತಾ.ಪಂ.ಮಾಜಿ ಅಧ್ಯಕ್ಷೆ ಗೀತಾ ಬಸಪ್ಪ, ಪಂಚಾಯಿತಿ ಸದಸ್ಯರಾದ ರಫೀಕ್‌ಖಾನ್, ಶಬ್ಭಿರ್, ಪಿ.ಎಫ್.ಸಬಾಸ್ಟೀನ್, ಪ್ರಸಾದ್‌ಕುಟ್ಟಪ್ಪ, ಆಲಿಕುಟ್ಟಿ ಮತ್ತಿತರರಿದ್ದರು.

ಆಶಾ ಪ್ರಾರ್ಥಿಸಿದರು. ಡಿವೈಎಸ್‌ಪಿ ಗಂಗಾಧರಪ್ಪ ಸ್ವಾಗತಿಸಿದರು. ನಿವೃತ್ತ ಎ.ಎಸ್.ಐ. ಅಂತೋಣಿ ಡಿಸೋಜ ನಿರ್ವಹಿಸಿದರು. ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ವಂದಿಸಿದರು.

Share this article