ಗದಗ: ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು. ಅವುಗಳನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನೌಕರನ ನೈತಿಕ ಜವಾಬ್ದಾರಿಯಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ. ಶ್ಯಾಮ್ ಭಟ್ ಹೇಳಿದರು.
ವಿವಿಧ ಇಲಾಖೆಗಳಿಂದ ಜಾರಿಯಾಗಿರುವ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಲಿ. ಈ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವಾಗ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಸೌಲಭ್ಯ ತಲುಪಿಸುವಾಗ ವಿನಾಕಾರಣ ವಿಳಂಬ ಮಾಡಿದರೆ ಅಥವಾ ಸೌಲಭ್ಯ ಒದಗಿಸದೇ ಇದ್ದಲ್ಲಿ ಅಂತಹ ವ್ಯಕ್ತಿಯ ಹಕ್ಕುಗಳನ್ನು ಮೊಟಕುಗೊಳಿಸಿದಂತಾಗಿ ಮಾನವ ಹಕ್ಕುಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ನೋಂದ ವ್ಯಕ್ತಿಗಳು ಪ್ರಕರಣ ದಾಖಲಿಸಿದ ಮೇಲೆ ಶೀಘ್ರದಲ್ಲಿ ಇತ್ಯರ್ಥವಾಗಬೇಕು. ಪ್ರಕರಣ ಇತ್ಯರ್ಥಪಡಿಸುವಾಗ ಸಂಬಂಧಿತ ಅಧಿಕಾರಿಗಳಿಂದ ವರದಿ ಪಡೆದು ತನಿಖೆ ನಡೆಸಲಾಗುವುದು ಎಂದರು.
ಸಾರ್ವಜನಿಕರು ಸರ್ಕಾರಿ ಇಲಾಖೆಗಳಿಗೆ ಮಾಹಿತಿ ಕೇಳಿದಾಗ ಕೆಲವೊಂದು ಸಂದರ್ಭದಲ್ಲಿ ಕಾನೂನು ತೊಡಕುಗಳು ಉಂಟಾಗಿದ್ದರೂ ಸಂಯಮದಿಂದ ಮಾತನಾಡಿಸಿ, ಸಮಸ್ಯೆ ಬಗೆಹರಿಸಿಕೊಳ್ಳಬೇಕಾಗುತ್ತದೆ. ಕೇಳಿದ ಮಾಹಿತಿ ಗನುಗುಣವಾಗಿ ಶೀಘ್ರವಾಗಿ ವರದಿ ಆಯೋಗಕ್ಕೆ ಸಲ್ಲಿಸಬೇಕು. ಕೆಲಸದೊತ್ತಡದಲ್ಲಿಯೂ ಸಹ ಸೌಜನ್ಯದಿಂದ ವರ್ತಿಸಬೇಕಾಗುತ್ತದೆ. ದೂರುಗಳು ಬಂದಾಗ ಸೂಕ್ತ ಮಾಹಿತಿ ಒದಗಿಸಿ ಇನ್ನಷ್ಟು ದೂರುಗಳು ಬಾರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಈ ಮೊದಲು ದೂರು ಕೊಟ್ಟವರು ಪರಿಹಾರಕ್ಕಾಗಿ ಬೆಂಗಳೂರಿಗೆ ಹೋಗುವ ಪರಿಪಾಠ ಇತ್ತು. ಆದರೆ ಇದೀಗ ಜಿಲ್ಲಾ ಮಟ್ಟದಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳು ಯಾವ ರೀತಿ ಸಾರ್ವಜನಿಕರಿಗೆ ತಲುಪುತ್ತಿವೆ ಎನ್ನುವುದರ ಕುರಿತು ಪರಿಶೀಲನೆ ನಡೆಸಲು ವಿವಿಧ ಜಿಲ್ಲೆಗಳಲ್ಲಿ ಆಯೋಗದಿಂದ ಪ್ರವಾಸ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ. ವಂಟಿಗೋಡಿ ಮಾತನಾಡಿ, ಒಬ್ಬ ವ್ಯಕ್ತಿ ಜನನದಿಂದ ಬರುವ ಎಲ್ಲ ಹಕ್ಕುಗಳು ಮಾನವ ಹಕ್ಕುಗಳಾಗುತ್ತದೆ. ಬದುಕುವ ಹಕ್ಕು,ಸಮಾನತೆ ಹಕ್ಕು, ಗೌರವಯುತವಾಗಿ ಬಾಳುವ ಹಕ್ಕು,ಗೌರವಯುತ ಹುದ್ದೆ ಅಲಂಕರಿಸುವ ಹಕ್ಕು, ಅಭಿವ್ಯಕ್ತಿ ಹಕ್ಕು ಈ ಮೊದಲಾದ ಹಕ್ಕುಗಳೇ ಸಂವಿಧಾನದ ಮೂಲಭೂತ ಹಕ್ಕುಗಳನ್ನಾಗಿ ಮಾಡಲಾಗಿದೆ. ಈ ಹಕ್ಕುಗಳಿಗೆ ಧಕ್ಕೆಯಾದಾಗ ಅವುಗಳನ್ನು ಮೊಟಕುಗೊಳಿಸಿದಂತಾಗುತ್ತದೆ. ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಆಯಾ ಇಲಾಖೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.
ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ ಪೂಜಾರ್ ಮಾತನಾಡಿ, ಗದಗ ಜಿಲ್ಲೆಯಲ್ಲಿ ಮಾನವ ಹಕ್ಕು ಉಲ್ಲಂಘನೆಯಾದ 14 ಪ್ರಕರಣಗಳು ವಿವಿಧ ಹಂತದ ತನಿಖೆಯಲ್ಲಿವೆ. ಮಾನವೀಯತೆಯೇ ಮಾನವ ಹಕ್ಕು ಆಯೋಗದ ಧ್ಯೇಯವಾಗಿದ್ದು ಕಾನೂನಿನಡಿ ಸರ್ವರಿಗೂ ಸಮಾನ ಹಕ್ಕು ಒದಗಿಸಲಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಅಧಿಕಾರಿಯ ಆದ್ಯ ಕರ್ತವ್ಯವಾಗಿದೆ ಎಂದರು.