ಹಿರೇಕೆರೂರು: ಕನ್ನಡ ಶಾಲೆಗಳ ಸಬಲೀಕರಣಗೊಳಿಸಿ, 10ನೇ ತರಗತಿ ವರೆಗೆ ಕನ್ನಡ ಕಡ್ಡಾಯ ಮಾಡಬೇಕು. ಸರ್ಕಾರಿ ನೌಕರರ ಮಕ್ಕಳು ಕಡ್ಡಾಯವಾಗಿ ಸರ್ಕಾರಿ ಶಾಲೆಯಲ್ಲಿ ಓದುವಂತಾಗಬೇಕು. ಅಂಗನವಾಡಿಗಳಿಗೆ ಆದ್ಯತೆ, ಹಾವೇರಿ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಿ, ಜಲಮೂಲ ಶೋಧಿಸಿ ರೈತರ ಕೃಷಿಗೆ ಅನುವು ಮಾಡಿಕೊಡಬೇಕು. ಜನತೆ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಿ ಸ್ಥಳೀಯವಾಗಿ ಉದ್ಯೋಗ ನೀಡಬೇಕು. ಮಾಸೂರಿನ ಕೆರೆ ಹಾಗೂ ಅಬಲೂರಿನ ಸರ್ವಜ್ಞನ ನೆಲೆಗಳನ್ನು ಅಭಿವೃದ್ಧಿಗೊಳಿಸಿ ಪ್ರವಾಸಿ ತಾಣಗಳನ್ನಾಗಿಸಬೇಕು. ಜಿಲ್ಲೆಯ ಜಾನಪದ ವಿವಿ ಅನೇಕ ಕೊರತೆಗಳನ್ನು ನೀಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಸೇರಿದಂತೆ ಸಾಹಿತ್ಯ ಸಮ್ಮೇಳನಗಳಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಗಂಭೀರವಾಗಿ ಪರಿಗಣಿಸಿ ಅನುಷ್ಠಾನಗೊಳಿಸಬೇಕು.
ಇದು ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷತೆ ವಹಿಸಿದ್ದ ಸಾಹಿತಿ ಸಂಕಮ್ಮ ಸಂಕಣ್ಣನವರ ಅವರು ತಮ್ಮ ಸರ್ವಾಧ್ಯಕ್ಷತೆ ಭಾಷಣದಲ್ಲಿ ಮಾಡಿದ ಹಕ್ಕೊತ್ತಾಯ.ಕನ್ನಡ ಭಾಷೆ ನಮ್ಮೆಲ್ಲರ ನಾಲಿಗೆಯ ಮೇಲೆ ಸದಾ ನಲೆದಾಡುವಂತಿರಬೇಕು. ಭಾಷೆ ಅಂದರೆ ಅದು ಕೇವಲ ಸಂವಹನ ಮಾಧ್ಯಮವಲ್ಲ ಅದರಲ್ಲಿ ಭೂತ, ವರ್ತಮಾನ ಭವಿಷ್ಯತ್ತೆಲ್ಲ ಅಡಕವಾಗಿರುತ್ತದೆ.ಇಂದು ಕನ್ನಡ ಉಳಿದಿರೋದು ಸಾಹಿತಿಗಳು, ಜನಸಾಮಾನ್ಯರಿಂದಲೇ ಹೊರತು ಉನ್ನತ ಸ್ಥಾನದಲ್ಲಿರುವವರಿಂದಲ್ಲ, ಸಾಮಾನ್ಯರ ಪರವಾದ ಅಸಾಮಾನ್ಯ ವಿಚಾರಗಳು ಇಲ್ಲಿ ಚರ್ಚೆಯಾಗಬೇಕು. ಎಲ್ಲವನ್ನು ಜನಸಾಮಾನ್ಯರೂ ಆಲಿಸಿದಾಗ ಸಮ್ಮೇಳನಕ್ಕೊಂದು ಸಾರ್ಥಕತೆ ಸಿಗುತ್ತದೆ. ಸಮ್ಮೇಳನ ಕೇವಲ ಸಂಭ್ರಮ, ಮನರಂಜನೆಯ ವೇದಿಕೆಯಾಗದೇ ಜಾಗೃತಿ ಮೂಡಿಸುವ ವೇದಿಕೆಗಳಾಗಬೇಕು ಹಾಗೂ ಮನಸ್ಸು ಮೆದಳು ತುಂಬುವ ಕಾರ್ಯಕ್ರಮಗಳಾಗಬೇಕು ಎಂದು ಆಶಿಸಿದರು.ಸಮೃದ್ಧ ವೈಚಾರಿಕ ಚಿಂತೆನೆಗಳು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವುದರಿಂದ ಅವುಗಳ ಉಪಯೋಗ ಪಡೆದು ನಮ್ಮ ಬುದ್ದಿ ವಿಕಾಸಗೊಳಿಸಿಕೊಳ್ಳಬೇಕು. ಸಾಹಿತ್ಯಕ್ಕೆಂದೂ ಸಾವಿಲ್ಲ, ಅದು ಶಾಶ್ವತ ಇಲ್ಲಿಯ ಚಿಂತನೆಗಳು ಜನಸಾಮಾನ್ಯರಿಗೆ ಮುಟ್ಟುವ ರೀತಿಯಲ್ಲಿ ರೂಪುಗೊಳ್ಳಬೇಕು. ಸಾಹಿತ್ಯ ಸಮ್ಮೇಳನಗಳಲ್ಲಿ ಗೋಷ್ಠಿಗಳು ಕೇವಲ ಸಾಹಿತಿಗಳಿಗೆ ಸೀಮಿತವಾಗಿರದೇ ಜನಸಾಮಾನ್ಯರಲ್ಲೂ ಕುತೂಹಲ ಗರಿಗೆದರಬೇಕು. ಸಮುದಾಯಗಳ ಉಳಿವು, ಅಳಿವಿನ ಚರ್ಚೆಯೊಂದಿಗೆ ಚಿಂತಕರ ಚೌವಡಿ ಇದಾಗಿದ್ದು, ಇಲ್ಲಿ ಎಲ್ಲರ ಬದುಕುನ್ನೂ ಒಳಗೊಂಡ ವಿಷಯಗಳಿರುತ್ತವೆ. ಮುಕ್ತ ಮನಸ್ಸಿನಿಂದ ಆರೋಗ್ಯಕರ ವಿಚಾರಗಳನ್ನು ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.ಇಂದಿನ ಖಾಸಗಿ ಶಾಲೆಗಳಲ್ಲಿ ಶಿಕ್ಷಣದ ಬೆಲೆ ಗಗನಕ್ಕೇರಿದೆ. ತಾಂತ್ರಿಕ, ವೈದ್ಯಕೀಯ ಶಿಕ್ಷಣವಂತೂ ಬಡವರ ಕೈಗೆ ನಿಲುಕದಂತಾಗಿದೆ. ಆ ಕ್ಷೇತ್ರಗಳ ದಾರಿ ಉಳ್ಳವರ ಪಾಲಾಗಿ ಬಡವರಿಗೆ ದುರ್ಬರವಾಗಿದೆ. ಖಾಸಗಿ ಸಂಸ್ಥೆಗಳು ಹಣದ ಸಂಪತ್ತಿನ ಕ್ರೂಢೀಕರಣ ಮಾಡುತ್ತಿವೆಯೇ ಹೊರತು ಜ್ಞಾನಸಂಪತನ್ನಲ್ಲ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.ಓದು ನಮಗೆ ಬದುಕುವುದನ್ನು ಕಲಿಸುತ್ತದೆ. ಸವಾಲುಗಳನ್ನೆದುರಿಸುವ, ಸಂಕಟಗಳನ್ನು ಸರಿಪಡಿಸುವ ಶಕ್ತಿ ತುಂಬುತ್ತದೆ. ಅವಮಾನ ಮಾಡಿದವರೆದುರು ಅಸಾಮಾನ್ಯರಾಗಿ ಬೆಳೆದು ನಿಲ್ಲಲು ಪ್ರೇರೇಪಿಸುತ್ತದೆ. ಅದೊಂದು ದೊಡ್ಡ ಭಂಡಾರ. ಕಣ್ಣುಗಳಲ್ಲಿ ಕನಸು ತುಂಬಿ, ಕನಸುಗಳೊಂದಿಗೆ ಸಾಗುವುದನ್ನು ಎಚ್ಚೆತ್ತುಕೊಂಡವರೊಂದಿಗೆ ಬದುಕುವುದನ್ನು ಕಲಿಸುತ್ತದೆ ಎಂದರು.