ಸರ್ಕಾರಿ ಶಾಲೆಗಳ ಸಬಲೀಕರಣ ಇಂದಿನ ಅಗತ್ಯ

KannadaprabhaNewsNetwork | Published : Apr 6, 2024 12:47 AM

ಸಾರಾಂಶ

ನವೀನ ಚಟುವಟಿಕೆಯುಳ್ಳ ಕಲಿಕಾ ಪ್ರಯತ್ನಗಳಿಂದ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದೊಂದಿಗೆ ಸಮುದಾಯದ ಸಹಭಾಗಿತ್ವ ಹಾಗೂ ಇಲಾಖೆಯ ಶೈಕ್ಷಣಿಕ ಬೆಂಬಲ ವ್ಯವಸ್ಥೆಯ ಪೂರ್ಣ ಸಹಕಾರ ಪಡೆದು ಹಂತ ಹಂತವಾಗಿ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬಹುದಾಗಿದ್ದು

ಗದಗ: ಸರ್ಕಾರಿ ಶಾಲೆಗಳ ಸಬಲೀಕರಣ ಇಂದಿನ ಪ್ರಮುಖ ಅಗತ್ಯತೆಯಾಗಿದೆ ಎಂದು ಬಿಇಓ ಆರ್.ಎಸ್. ಬುರುಡಿ ಹೇಳಿದರು.

ಅವರು 2024-25 ನೇ ಸಾಲಿಗಾಗಿ ಶೈಕ್ಷಣಿಕ ಮುನ್ನೋಟ ಎಂಬ ಶೈಕ್ಷಣಿಕ ಚಟುವಟಿಕೆಗಳ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಗದಗ ಶಹರ ವಲಯದ ಎಲ್ಲ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರಿಗಾಗಿ ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ವಲಯದಲ್ಲಿ ಕೈಗೊಂಡ ಭೌತಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಯ ಪ್ರಯತ್ನದೊಂದಿಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳ ಕುರಿತು ಮುನ್ನೊಟ 2024-25 ರ ಕಾರ್ಯಸೂಚಿ ಮಂಡಿಸಿ, ಪ್ರತಿ ಶಾಲಾ ಹಂತದಲ್ಲಿ ಶಿಕ್ಷಕರು ಇದುವರೆಗಿನ ಪ್ರಯತ್ನಗಳ ಜತೆಗೆ ಶಾಲೆಯೊಳಗಿನ ಹಾಗೂ ಹೊರಗಿನ ಕಲಿಕಾ ವಾತಾವರಣ ಪರಿಣಾಮಕಾರಿಯಾದ, ಪೂರ್ವಸಿದ್ಧತೆಯಿಂದ ಕೂಡಿದ ನವೀನ ಚಟುವಟಿಕೆಯುಳ್ಳ ಕಲಿಕಾ ಪ್ರಯತ್ನಗಳಿಂದ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದೊಂದಿಗೆ ಸಮುದಾಯದ ಸಹಭಾಗಿತ್ವ ಹಾಗೂ ಇಲಾಖೆಯ ಶೈಕ್ಷಣಿಕ ಬೆಂಬಲ ವ್ಯವಸ್ಥೆಯ ಪೂರ್ಣ ಸಹಕಾರ ಪಡೆದು ಹಂತ ಹಂತವಾಗಿ ಸರ್ಕಾರಿ ಶಾಲೆಗಳನ್ನು ಸಬಲೀಕರಣಗೊಳಿಸಬಹುದಾಗಿದ್ದು, ಇಂತಹ ಶಕ್ತಿ ಹಾಗೂ ಸಾಮರ್ಥ್ಯ ಎಲ್ಲರಲ್ಲಿಯೂ ಇದೆ ಎಂದರು.

ಉದ್ಘಾಟಕರಾಗಿ ಆಗಮಿಸಿದ್ದ ಡಿಡಿಪಿಐ ಎಂ.ಎ. ರಡ್ಡೇರ ಮಾತನಾಡಿ ಪ್ರಾಥಮಿಕ ಶಾಲೆಗಳನ್ನು ಸಬಲೀಕರಣಗೊಳಿಸಲು ಇರುವ ಅವಕಾಶಗಳ ಕುರಿತು ಮುಕ್ತವಾಗಿ ಅಭಿಪ್ರಾಯ ತಿಳಿಸಿರಿ ಎಂದರು.

ಅಭಿಪ್ರಾಯ ವ್ಯಕ್ತಪಡಿಸಿದ ಮುಖ್ಯೋಪಾಧ್ಯಾಯರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಪ್ರಯತ್ನವಾಗಬೇಕು. ಮಕ್ಕಳ ಹಾಜರಾತಿ, ಪ್ರತಿ ಶಾಲೆಯಲ್ಲಿ ಉತ್ತಮ ಕಲಿಕಾ ವಾತಾವರಣ ನಿರ್ಮಾಣ, ಮಗು ಕೇಂದ್ರೀತ ಬೋಧನೆ ಹಾಗೂ ನಾವಿನ್ಯಯುತ ಚಟುವಟಿಗಳ ಮೂಲಕ ಇನ್ನಷ್ಟು ಪರಿಣಾಮಕಾರಿಯಾಗಿರುವ ಕಲಿಕಾ ವಾತಾವರಣ ನಿರ್ಮಿಸಬೇಕು. ಪ್ರತಿ ಮಗುವಿನ ಕೃತಿ ಸಂಪುಟವನ್ನು ನಿಖರವಾದ ದಾಖಲೆಗಳೊಂದಿಗೆ ನಿರ್ವಹಿಸುವುದು ಕನ್ನಡ ಸೇರಿದಂತೆ ಇಂಗ್ಲಿಷ ಭಾಷಾ ಕಲಿಕೆ ವ್ಯವಸ್ಥಿತಗೊಳಿಸಿ ವರ್ಗ ಕೋಣೆಯಲ್ಲಿ ತಂತ್ರಜ್ಞಾನದೊಂದಿಗೆ ಲಭ್ಯವಿರುವ ವಿವಿಧ ಬೋಧನಾ ಕಲಿಕೋಪಕರಣಗಳನ್ನು ಸಮಯೋಚಿತವಾಗಿ ಬಳಸಿಕೊಂಡು ಸಮುದಾಯ ಹಾಗೂ ಇಲಾಖೆಯ ಬೆಂಬಲದೊಂದಿಗೆ ಶಿಕ್ಷಕರೆಲ್ಲರೂ ತಂಡವಾಗಿ ಕಾರ್ಯ ನಿರ್ವಸುವ ಮೂಲಕ ಸರ್ಕಾರಿ ಶಾಲೆಗಳನ್ನು ಮತ್ತಷ್ಟು ಸಬಲೀಕರಗೊಳಿಸಬಹುದು ಎಂದರು.

ಗದಗ ಶಹರ ವಲಯದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಕೆ. ಮಂಗಳಗುಡ್ಡ, ಉಪಾಧ್ಯಕ್ಷೆ ಆರ್.ಬಿ. ಸಂಕಣ್ಣವರ ಸಂಯುಕ್ತವಾಗಿ ಎಲ್ಲ ಮುಖ್ಯ ಶಿಕ್ಷಕರಿಗೆ ಒಂದು ದಿನಚರಿ ಪುಸ್ತಕ ನೀಡುವುದರ ಜತೆಗೆ ಇಲಾಖೆ ಹಾಗೂ ಶಿಕ್ಷಕರ ಸಂಘದ ಮಧ್ಯ ಶೈಕ್ಷಣಿಕ ಸಮನ್ವಯತೆ ಸದಾಕಾಲ ಇರುತ್ತದೆ ಎಂದರು.

ಕಾರ್ಯಾಗಾರದಲ್ಲಿ ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಎಚ್ .ಕಂಬಳಿ, ಕ್ಷೇತ್ರ ಸಮನ್ವಯಾಧಿಕಾರಿ ಎಚ್.ಎ. ಫಾರೂಖಿ, ಶಹರ ವಲಯದ ಎಲ್ಲ ಸಿ.ಆರ್.ಪಿ, ಬಿ.ಆರ್.ಪಿ, ಇ.ಸಿ.ಓ, ಬಿ.ಐ.ಇ.ಆರ್.ಟಿ, ಪಿ.ಇ.ಓ ಅವರು ಉಪಸ್ಥಿತರಿದ್ದು ಕಾರ್ಯಾಗಾರ ಯಶಸ್ವಿಗೊಳಿಸಿದರು.

Share this article