ಕನ್ನಡಪ್ರಭ ವಾರ್ತೆ ವಿಜಯಪುರ
ರೈತರು ಸಾಂಪ್ರದಾಯಕ ಕೃಷಿ ಪದ್ಧತಿ ಬದಲಾಗಿ, ವೈಜ್ಞಾನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಡಿ.ಸಿ.ಸಿ. ಬ್ಯಾಂಕ್‌ನ ನೂತನ ೫೦ನೇ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಡಿಸಿಸಿ ಬ್ಯಾಂಕ್ ಜಿಲ್ಲೆಯಲ್ಲಿನ ಫ್ಯಾಕ್ಸ್‌ಗಳ ಮೂಲಕ ಹಾಗೂ ಬ್ಯಾಂಕಿನ ಶಾಖೆಗಳಿಂದ ನೇರವಾಗಿ ಒಟ್ಟು ೨,೪೪,೨೩೬ ರೈತರಿಗೆ ₹೧೭೭೪.೨೫ ಕೋಟಿ ಅಲ್ಪಾವಧಿ ಬೆಳೆ ಸಾಲವನ್ನು ಸರ್ಕಾರದ ಬಡ್ಡಿ ಸಹಾಯಧನ ಯೋಜನೆಯಡಿ ಶೂನ್ಯ ಬಡ್ಡಿದರದಲ್ಲಿ ನೀಡಿದೆ. ಇದರೊಂದಿಗೆ ೬೧೫೦ ರೈತರಿಗೆ ₹೧೫೯.೨೪ ಕೋಟಿ ಕೃಷಿ, ಕೃಷಿ ಆಧಾರಿತ ವಿವಿಧ ಉದ್ದೇಶಗಳಿಗಾಗಿ ಮಧ್ಯಮಾವಧಿ ಸಾಲಗಳನ್ನು ನೀಡಿದೆ. ಬ್ಯಾಂಕ್ ಸಾಲ ಮರುಪಾವತಿಸಿದ ರೈತನಿಗೆ ವಿಳಂಬ ಮಾಡದೇ ನಿಯಮಿತವಾಗಿ ಮರು ಸಾಲ ನೀಡುತ್ತಿದ್ದು, ರೈತರು ಕೂಡ ನಿಯಮಿತವಾಗಿ ಗಡುವು ನೀಡಿರುವ ದಿನಾಂಕದೊಳಗೆ ಸಾಲ ಮರುಪಾವತಿಸಿ ಹೊಸ ಸಾಲವನ್ನು ಪಡೆಯುತ್ತಿದ್ದಾರೆ. ಬ್ಯಾಂಕ್ ಯಾವತ್ತಿಗೂ ರೈತರೊಂದಿಗೆ ವಿಶ್ವಾಸಾರ್ಹ ವ್ಯವಹಾರವನ್ನು ಮಾಡುತ್ತಿದೆ ಎಂದು ತಿಳಿಸಿದರು.
ರೈತರಿಗೆ ಸಾಲವನ್ನು ಬ್ಯಾಂಕಿನಲ್ಲಿಯೇ ರೈತರ ಉಳಿತಾಯ ಖಾತೆ ಮೂಲಕವೇ ವಿತರಿಸಲಾಗುತ್ತಿದೆ. ೨೦೨೪-೨೫ ನೇ ಸಾಲಿನಲ್ಲಿ ಶಿವಣಗಿ, ಗೊಳಸಂಗಿ, ಲಚ್ಯಾಣ, ಹಿಟ್ನಳ್ಳಿ ಹಾಗೂ ಜಿಗಜೀವಣಗಿಯಲ್ಲಿ ಹೊಸ ಶಾಖೆಗಳನ್ನು ಸ್ಥಾಪಿಸಲಾಗುತ್ತದೆ. ಒಟ್ಟು ೫೧ ಶಾಖೆಗಳು ಜಿಲ್ಲೆಯಾಧ್ಯಂತ ಕಾರ್ಯಾರಂಭ ಮಾಡುತ್ತಿವೆ. ವಿಜಯಪುರ ಜಿಲ್ಲೆಯಲ್ಲಿಯ ೨೭೨ ಫ್ಯಾಕ್ಸುಗಳ ಪೈಕಿ ೨೨೩ ಸಂಘಗಳು ಲಾಭದಲ್ಲಿವೆ. ಅಲ್ಲದೆ, ೨೩೭ ಸಂಘಗಳು ಸ್ವಂತ ಕಚೇರಿ ಹಾಗೂ ಗೋಡಾವನ ಹೊಂದಿದ್ದು, ಗ್ರಾಮೀಣ ಮಟ್ಟದಲ್ಲಿ ವಿಶ್ವಾಸದಿಂದ ಪ್ರಗತಿದಾಯಕವಾಗಿ ಕಾರ್ಯನಿರ್ವಹಿಸುತ್ತಿವೆ. ಫ್ಯಾಕ್ಸ್‌ಗಳ ಮಟ್ಟದಲ್ಲಿ ಸಂಘದ ಸದಸ್ಯರು ₹೯೫೯.೩೨ ಕೋಟಿ ಠೇವಣಿ ಇಟ್ಟಿರುವುದು ಸಂಘಗಳ ಕಾರ್ಯಕ್ಷಮತೆಯನ್ನು ಸ್ಪಷ್ಟಪಡಿಸುತ್ತದೆ ಎಂದರು.ಒಬ್ಬ ವೈಕ್ತಿಗೆ ₹ ೧೫ ಲಕ್ಷಗಳ ವರೆಗೆ ಶೇ.೩ರ ಬಡ್ಡಿ ದರದಲ್ಲಿ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ಪಡೆಯಲು ಅವಕಾಶವಿದ್ದು, ಸದುಪಯೋಗ ಪಡಿಸಿಕೊಳಬೇಕು ಎಂದು ಸಲಹೆ ನೀಡಿದರು.
ಬ್ಯಾಂಕಿನ ಉಪಾಧ್ಯಕ್ಷ ಆರ್.ಬಿ.ಗುಡದಿನ್ನಿ ಮಾತನಾಡಿ, ವಿಜಯಪುರ ಡಿ.ಸಿ.ಸಿ. ಬ್ಯಾಂಕ್ ಕಳೆದ ೧೦೫ ವರ್ಷಗಳಿಂದ ರೈತ ಸ್ನೇಹಿಯಾಗಿ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬದಲಾವಣೆಗೆ ಹೊಂದಿಕೊಂಡು ಪ್ರಗತಿ ಪಥದಲ್ಲಿ ಸಾಗಿದೆ ಎಂದು ಬ್ಯಾಂಕ್ ಸಾಧನೆಯನ್ನು ವಿವರಿಸಿದರು.ಈ ಸಂದರ್ಭದಲ್ಲಿ ಹಿಟ್ಟಿನಹಳ್ಳಿ ಗ್ರಾಪಂ ಅಧ್ಯಕ್ಷ ರವಿಕುಮಾರ ಕಡೆಮನಿ, ಹಿಟ್ಟಿನಹಳ್ಳಿ ಫ್ಯಾಕ್ಸ ಅಧ್ಯಕ್ಷ ಶ್ರೀಕಾಂತ ಚೌಧರಿ, ಜುಮನಾಳ ಫ್ಯಾಕ್ಸ ಅಧ್ಯಕ್ಷ ರಮೇಶ ವಗ್ಗರ, ವಿಜಯಪುರ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಸುರೇಶ ಬಿರಾದಾರ, ಅರವಿಂದ ಪೂಜಾರಿ, ಶೇಖರ ದಳವಾಯಿ, ಕಲ್ಲನಗೌಡ ಪಾಟೀಲ, ಎಸ್.ಎಸ್.ಶಿಂಧೆ, ಎಸ್.ಎಸ್.ಜಹಾಗೀರದಾರ, ಹಣಮಂತ್ರಾಯಗೌಡ ಪಾಟೀಲ, ಗುರುಶಾಂತ ನಿಡೋಣಿ, ಬಾಪುಗೌಡ ಪಾಟೀಲ, ಸಂಯುಕ್ತಾ ಪಾಟೀಲ, ಎಸ್.ಕೆ.ಭಾಗ್ಯಶ್ರಿ ಮುಂತಾದವರು ಇದ್ದರು.
ಕೋಟ್ಸಹಕಾರ ಸಂಘ ಹಾಗೂ ಬ್ಯಾಂಕ್‌ಗಳಿಂದ ಕೃಷಿ ಸಾಲ ಪಡೆದಲ್ಲಿ ಸರ್ಕಾರದ ಬಡ್ಡಿ ಸಹಾಯಧನ ಹಾಗೂ ಪ್ರಕೃತಿ ವಿಕೋಪದಿಂದ ರೈತರು ಸಂಕಷ್ಟಕ್ಕೆ ಒಳಗಾದಾಗ ಸಾಲ ಮನ್ನಾ ಸೌಲಭ್ಯತೆಗಳಿಗೆ ಅರ್ಹತೆ ಇದೆ. ಕಾರಣ ರೈತರು, ಗ್ರಾಮೀಣ ಜನತೆ ತಮ್ಮದೇ ಆದ ಸಹಕಾರ ಸಂಘ, ಬ್ಯಾಂಕುಗಳಲ್ಲಿ ತಮ್ಮ ಹೆಚ್ಚುವರಿ ಉಳಿತಾಯವನ್ನು ಠೇವಣಿಯನ್ನಾಗಿರಿಸಲು ಹಾಗೂ ಅರ್ಹತೆಯನ್ನು ಆಧರಿಸಿ ₹ ೭೫,೦೦೦ ಗಳನ್ನು ಗರಿಷ್ಠ ₹ ೫ ಲಕ್ಷವರೆಗೆ ವರೆಗೆ ಶೂನ್ಯ ಬಡ್ಡಿದರದಲ್ಲಿ ಬೆಳೆ ಸಾಲ ನೀಡುವ ವ್ಯವಸ್ಥೆ ಬ್ಯಾಂಕ್ ಹೊಂದಿದೆ.
ಶಿವಾನಂದ ಪಾಟೀಲ, ಸಚಿವ