ಕಾರಟಗಿ: ಸಮರ್ಪಕ ಕುಡಿಯುವ ನೀರಿನ ಪೂರೈಕೆಗೆ ಒತ್ತಾಯಿಸಿ ಇಲ್ಲಿನ ಜೆಪಿ ನಗರದ ನಿವಾಸಿಗಳು ಪುರಸಭೆಗೆ ಶುಕ್ರವಾರ ಮುತ್ತಿಗೆ ಹಾಕಿ ಖಾಲಿ ಕೊಡಗಳ ಪ್ರದರ್ಶನ ಮಾಡಿ ಪ್ರತಿಭಟಿಸಿದರು.
ಪಟ್ಟಣದ ೧೭ನೇ ವಾರ್ಡ್‌ನ ಜೆಪಿ ನಗರದಲ್ಲಿ ಒಂದು ವರ್ಷದಿಂದಲೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ನೀರಿಗಾಗಿ ನಿತ್ಯ ಬೇರೆ ಬೇರೆ ವಾರ್ಡ್‌ಗಳಿಗೆ ಅಲೆಯುವ ದುಸ್ಥಿತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಪುರಸಭೆ ನಿರ್ಲಕ್ಷ್ಯ ವಿರೋಧಿಸಿ, ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಪುರಸಭೆ ಮುಂದೆ ಖಾಲಿ ಕೊಡಗಳ ಸಮೇತ ಪ್ರತಿಭಟನೆ ನಡೆಸಿದರು.ಕಳೆದ ಒಂದು ತಿಂಗಳಿಂದ ನೀರಿಗಾಗಿ ಹಗಲು ರಾತ್ರಿ ಬೇರೆ ಬೇರೆ ಓಣಿಗಳಿಗೆ ಅಲೆದಾಡಬೇಕಾಗಿದೆ. ಈ ಕುರಿತು ಹಲವು ಬಾರಿ ಪುರಸಭೆಗೆ ತಿಳಿಸಿದ್ದರೂ ಸಮಸ್ಯೆ ಇನ್ನೂ ನಿವಾರಣೆಯಾಗಿಲ್ಲ ಯಾಕೆ ಎಂದು ಪ್ರತಿಭಟನಾನಿರತ ಮಹಿಳೆಯರು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.
ನೀರು ಪೂರೈಕೆ ಮಾಡುವ ವಾಟರ್ ಮ್ಯಾನ್ ಜಯಪ್ಪ ವಿರುದ್ಧ ವಾರ್ಡ್ ನಿವಾಸಿಗಳ ಆಕ್ರೋಶ ವ್ಯಕ್ತಪಡಿಸಿ, ಹೋಟೆಲ್, ಬೇಕರಿಗಳಿಗೆ ದೊಡ್ಡ ದೊಡ್ಡ ಅಂಗಡಿಗಳಿಗೆ ಪುರಸಭೆಯ ನೀರು ಪೂರೈಕೆಯಾಗುತ್ತದೆ. ಆದರೆ ಮನೆಗಳಿಗೆ ನೀರಿಲ್ಲವೆಂದರೆ ಅರ್ಥವೇನು? ಎಂದು ಪುರಸಭೆ ಮುಖ್ಯಾಧಿಕಾರಿ ಸುರೇಶ ಶೆಟ್ಟರ್ ಅವರಿಗೆ ಆಕ್ರೋಶಭರಿತ ಮಹಿಳೆಯರು ತರಾಟೆಗೆ ತೆಗೆದುಕೊಂಡರು.ವಾರ್ಡಿಗೆ ನೀರು ಬಿಡುವ ನೀರಗಂಟಿ ಜಯಪ್ಪ ಸಮರ್ಪಕವಾಗಿ ನೀರು ಬಿಡುತ್ತಿಲ್ಲ. ವಾರ್ಡ್‌ನ ಕೆಲವು ಪ್ರದೇಶಕ್ಕೆ ನೀರು ಬಂದರೆ ನಮ್ಮ ಪ್ರದೇಶದಲ್ಲಿ ಕಳೆದ ಒಂದು ವರ್ಷದಿಂದ್ರ ನೀರು ಬರುತ್ತಿಲ್ಲ. ಈ ಕುರಿತು ಪುರಸಭೆ ಅಧಿಕಾರಿಗಳು ಈಗಲೇ ಇದಕ್ಕೆ ಉತ್ತರ ನೀಡಿ ಸಮಸ್ಯೆ ನಿವಾರಿಸಬೇಕೆಂದು ಪಟ್ಟು ಹಿಡಿದರು.
ನೀವೇ ಬಂದು ನಮ್ಮ ವಾರ್ಡ್‌ನ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದೀರಿ. ಆದರೆ, ನೀರು ಮಾತ್ರ ಹರಿಯಲಿಲ್ಲ. ಈ ಬಾರಿ ಮಾತ್ರ ಸುಮ್ಮನೇ ಹೋಗುವುದಿಲ್ಲ ಎಂದು ಮುಖ್ಯಾಧಿಕಾರಿ ಸುರೇಶ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ಈಗಾಗಲೇ ನಾವು ಹಲವು ಬಾರಿ ಮನವಿ ಮಾಡಿ ಬೇಸತ್ತು ಹೋಗಿದ್ದೇವೆ. ಇದು ಕೊನೆಯ ಅವಕಾಶ, ವಾರ್ಡ್‌ಗೆ ಭೇಟಿ ನೀಡಿ, ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪುರಸಭೆ ಕಚೇರಿಗೆ ಬೀಗ ಜಡಿದು ಆಹೋರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಕಾರರನ್ನು ಸಮಾಧಾನಪಡಿಸಿದ ಮುಖ್ಯಾಧಿಕಾರಿ ಸುರೇಶ್ ಮತ್ತು ಎಂಜಿನಿಯರ್ ಮಂಜನಾಥ ಅವರು ನಿರಂತರ ನೀರು ಸಿಗುವಂತೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.ಲಕ್ಷ್ಮೀ, ಅನ್ನಪೂರ್ಣಾ, ಉಮಾದೇವಿ, ಸಾವಿತ್ರಮ್ಮ, ಮಹಾದೇವಿ, ನಿರ್ಮಲಾ, ಅನಿತಾ, ತಿಪ್ಪಮ್ಮ, ಪರಪ್ಪ ರಾಜೂರು, ಶರಣಬಸವ ಕೊಟಗಿ, ನಾಗರಾಜ್ ವಡ್ಡಟ್ಟಿ, ಸಿದ್ಧೇಶ ಕುಲಕರ್ಣಿ, ಶರಣಪ್ಪ ಸೌದ್ರಿ, ಮಾರ್ಕಂಡೇಯ, ನಾಗರಾಜ್ ಕುಳಗಿ ಇನ್ನಿತರರು ಇದ್ದರು. ಕರೆ ಸ್ವೀಕರಿಸದ ನೀರುಗಂಟಿ: ಪ್ರತಿಭಟನಾ ನಿರತರು ನೀರಗಂಟಿ ಜಯಪ್ಪ ವಿರುದ್ಧ ದೂರು ನೀಡಿದ ಬಳಿಕ ಮುಖ್ಯಾಧಿಕಾರಿ ಸುರೇಶ ಅವರು ಜಯಪ್ಪ ಅವರ ಮೊಬೈಲ್‌ಗೆ ಕರೆ ಮಾಡಿದರು. ಆದರೆ ಜಯಪ್ಪ ಸ್ವೀಕರಿಸಲಿಲ್ಲ. ನಿಮ್ಮದೆ ಫೋನ್ ಸ್ವೀಕರಿಸದ ನೀರುಗಂಟಿ, ನಮಗೆ ಉತ್ತರಿಸುತ್ತಾರೆಯೇ ಎಂದು ಮಹಿಳೆಯರು ಪ್ರಶ್ನಿಸಿದರು. ಮುಖ್ಯಾಧಿಕಾರಿ ನಿರುತ್ತರರಾದರು.